ಪ್ರಧಾನಿ ಮೋದಿಯ ಅಚ್ಛೇ ದಿನ್ ‘ಪೊಳ್ಳು ಘೋಷಣೆ’:ಶಶಿ ತರೂರ್

Update: 2018-07-29 12:14 GMT

ಹೊಸದಿಲ್ಲಿ,ಜು.29: ಕಾಂಗ್ರೆಸ್ ರೈತರ ಬವಣೆಯಂತಹ ನಿಜವಾದ ಸಮಸ್ಯೆಗಳನ್ನು ಎತ್ತುತ್ತಿದ್ದರೆ,ತೋರಿಸಿಕೊಳ್ಳಲು ಯಾವುದೇ ಸಾಧನೆಯಿಲ್ಲದ ಬಿಜೆಪಿಯು ತನ್ನ ಧ್ರುವೀಕರಣ ಅಜೆಂಡಾವನ್ನು ಉತ್ತೇಜಿಸಲು ಪ್ರತಿಯೊಂದನ್ನೂ ಬಳಸಿಕೊಳ್ಳುತ್ತಿದೆ ಎಂದು ರವಿವಾರ ಇಲ್ಲಿ ಹೇಳಿದ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು,ಬಿಜೆಪಿಯ ‘ಅಚ್ಛೇ ದಿನ್’ಭರವಸೆ ಇನ್ನೂ ಭರವಸೆಯಾಗಿಯೇ ಉಳಿದಿದ್ದು,ಪೊಳ್ಳು ಘೋಷಣೆಯಾಗಿದೆ ಎಂದು ಟೀಕಿಸಿದರು.

ವಿದೇಶಾಂಗ ನೀತಿಯ ವಿಷಯದಲ್ಲಿ ಸರಕಾರವು ವಿಫಲಗೊಂಡಿದೆ ಎಂದ ಅವರು,ಕಾಂಗ್ರೆಸ್ ಪಕ್ಷವು ಈ ವೈಫಲ್ಯಗಳ ಜೊತೆಗೆ ಪೊಳ್ಳು ಘೋಷಣೆ ಗಳಾಗಿಯೇ ಉಳಿದಿರುವ ಸರಕಾರದ ಯೋಜನೆಗಳನ್ನು ಪ್ರಮುಖವಾಗಿ ಬಿಂಬಿಸಲಿದೆ ಎಂದರು.

ನಿಮ್ಮ ಸ್ಥಿತಿ 2014ರಲ್ಲಿದ್ದಕ್ಕಿಂತ ಉತ್ತಮವಾಗಿದೆಯೇ ಮತ್ತು ನಿಮ್ಮ ಪಾಲಿಗೆ ಅಚ್ಛೇ ದಿನ್‌ಗಳು ಬಂದಿವೆಯೇ ಎಂಬ ಸರಳ ಪ್ರಶ್ನೆಗಳನ್ನು ಜನರಿಗೆ ಕೇಳಿದರೆ ಹೆಚ್ಚಿನವರು ಇಲ್ಲ ಎಂದೇ ಉತ್ತರಿಸುತ್ತಾರೆ ಎಂದು ತರೂರ್ ತಿವಿದರು.

ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ ಗಾಂಧಿಯವರ ಭಾಷಣವು ರಫೇಲ್ ಹಗರಣ ಮತ್ತು ರೈತರ ಬವಣೆಯಂತಹ ವಿಷಯಗಳನ್ನೆತ್ತುವ ಮೂಲಕ ಪಕ್ಷವು ತನ್ನ ಅಜೆಂಡಾವನ್ನು ರೂಪಿಸುತ್ತಿದೆ ಎನ್ನುವುದನ್ನು ಸ್ಪಷ್ಟವಾಗಿ ಸೂಚಿಸಿದೆ ಎಂದರು.

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು,ರಾಹುಲ್ ತನ್ನ ಸ್ವಂತ ಪ್ರಯತ್ನಗಳಿಂದ ‘ಅಳುಕಿನ ರಾಜಕಾರಣಿ’ಯಿಂದ ‘ನಿಜವಾದ ಸವಾಲಿಗ’ನಾಗಿ ಬದಲಾಗಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News