ಇಮ್ರಾನ್ ಖಾನ್ ಮುಂದಿರುವ ಸವತಿ ಸವಾಲುಗಳು

Update: 2018-07-30 04:24 GMT

ಪಾಕಿಸ್ತಾನದ ರಾಷ್ಟ್ರೀಯ ಸಂಸತ್ತಿಗೆ ನಡೆದ ಚುನಾವಣೆಯ ಫಲಿತಾಂಶದ ಕುರಿತಂತೆ ಭಾರತವೂ ಸಾಕಷ್ಟು ಕುತೂಹಲವನ್ನು ಹೊಂದಿತ್ತು. ಯಾಕೆಂದರೆ, ಪಾಕಿಸ್ತಾನದಲ್ಲಿ ನಡೆಯುವ ರಾಜಕೀಯ ಪಲ್ಲಟಗಳು ಒಂದಲ್ಲ ಒಂದು ರೀತಿಯಲ್ಲಿ ಭಾರತದ ಮೇಲೂ ಪರಿಣಾಮವನ್ನು ಬೀರುತ್ತವೆ. ನೆರೆ ರಾಷ್ಟ್ರವಾಗಿರುವ ಪಾಕಿಸ್ತಾನದಲ್ಲಿ ಪ್ರಜಾಸತ್ತೆ ಗಟ್ಟಿಯಾದಷ್ಟು, ವಿಶಾಲ ಮನಸ್ಸಿನ ರಾಜಕೀಯ ಶಕ್ತಿ ಪ್ರಬಲವಾದಷ್ಟು ಉಭಯ ದೇಶಗಳಿಗೂ ಲಾಭವಿದೆ. ಪಾಕಿಸ್ತಾನದ ಚುನಾವಣೆಯ ಕಡೆಗೆ ಆತಂಕದಿಂದ ಭಾರತ ನೋಡುವುದಕ್ಕೊಂದು ಕಾರಣವಿತ್ತು. ಉಗ್ರರೊಂದಿಗೆ ಸಂಪರ್ಕದ ಶಂಕೆಯಿರುವ ಗುಂಪೊಂದು ಪಾಕಿಸ್ತಾನದ ಚುನಾವಣೆಯಲ್ಲಿ ಸ್ಪರ್ಧೆಗಿಳಿದಿತ್ತು. ಅಂದರೆ ಅಲ್ಲಿನ ಅಳಿದುಳಿದ ಪ್ರಜಾಸತ್ತೆಯನ್ನು ಬಳಸಿಕೊಂಡೇ ಪಾಕಿಸ್ತಾನದ ಮುಖ್ಯವಾಹಿನಿಯ ಜೊತೆಗೆ ಗುರುತಿಸಿಕೊಳ್ಳಲು ಅದು ಹವಣಿಸಿತ್ತು. ಒಂದು ವೇಳೆ ಅದರಲ್ಲಿ ಯಶಸ್ವಿಯಾಗಿದ್ದೇ ಆದರೆ ಭಾರತ ಮತ್ತು ಪಾಕಿಸ್ತಾನದ ಸಂಬಂಧದ ಮೇಲೆ ಗುಣಪಡಿಸಲಾಗದ ಗಾಯವೊಂದನ್ನು ಉಂಟು ಮಾಡುತ್ತಿತ್ತು. ಭಾರತದಲ್ಲೂ ಕೇಸರಿ ಉಗ್ರವಾದ ಇದೇ ತಂತ್ರವನ್ನು ಅನುಸರಿಸಿ ಭಾಗಶಃ ಯಶಸ್ವಿಯಾಗಿದೆ ಎನ್ನುವುದನ್ನು ಗಮನಿಸಬೇಕು. ಮಗದೊಂದೆಡೆ ಭ್ರಷ್ಟಾಚಾರದ ಕಳಂಕವನ್ನು ಮೈತುಂಬಾ ಮೆತ್ತಿಕೊಂಡಿರುವ ನವಾಝ್ ಶರೀಫ್ ಜೈಲಿನಲ್ಲಿ ಕುಳಿತೇ ಚುನಾವಣೆಯನ್ನು ಎದುರಿಸಿದ್ದರು.

ಪಾಕಿಸ್ತಾನದ ಪಾಲಿಗೂ ಈ ಚುನಾವಣೆ ಒಂದು ಅಗ್ನಿ ಪರೀಕ್ಷೆಯಾಗಿತ್ತು. ಎಲ್ಲಿ ಹಿಂಸಾಚಾರ ಭುಗಿಲೆದ್ದು ಚುನಾವಣೆ ಸ್ಥಗಿತವಾಗುತ್ತದೆಯೋ ಎನ್ನುವ ಭಯ ಅದಕ್ಕಿತ್ತು. ಒಂದೆಡೆ ಅಮೆರಿಕದ ಒತ್ತಡ, ಇನ್ನೊಂದೆಡೆ ಚೀನಾದ ಸ್ನೇಹ ಇವೆಲ್ಲಗಳ ನಡುವೆ ಸಮನ್ವಯತೆ ಕಂಡುಕೊಳ್ಳುತ್ತಾ ಚುನಾವಣೆಯನ್ನು ಯಶಸ್ವಿಗೊಳಿಸುವುದು ಅಗತ್ಯವಾಗಿತ್ತು. ಎಲ್ಲರ ನಿರೀಕ್ಷೆಗಳನ್ನು ಹುಸಿಗೊಳಿಸಿ, ಚುನಾವಣೆ ಅನಿರೀಕ್ಷಿತ ಫಲಿತಾಂಶವೊಂದನ್ನು ನೀಡಿದೆ. ಈ ಹಿಂದಿನ ಚುನಾವಣೆಗಳಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದ ಇಮ್ರಾನ್ ಖಾನ್ ನೇತೃತ್ವದ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಇಮ್ರಾನ್‌ಖಾನ್ ಪಾಕಿಸ್ತಾನದ ಹೊಸ ಕಪ್ತಾನನಾಗುವ ನಿರೀಕ್ಷೆಯನ್ನು ಹುಟ್ಟಿಸಿದ್ದಾರೆ. ಈ ಫಲಿತಾಂಶ ಹೊರ ಬಿದ್ದ ಬೆನ್ನಿಗೇ ಚುನಾವಣೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿರುವ ಕುರಿತಂತೆ ಟೀಕೆಗಳು ಕೇಳಿ ಬರುತ್ತಿವೆ. ಸೋತ ಪಕ್ಷಗಳು ಒಂದಾಗಿ ಚುನಾವಣೆಯನ್ನು ರದ್ದುಗೊಳಿಸಲು ಒತ್ತಾಯಿಸುತ್ತಿವೆ. ಇದೇ ಸಂದರ್ಭದಲ್ಲಿ ಇಮ್ರಾನ್ ಖಾನ್ ಆಯ್ಕೆಯ ಹಿಂದೆ ಪಾಕಿಸ್ತಾನ ಸೇನೆಯ ಕೈವಾಡವಿದೆ ಎಂಬ ವ್ಯಾಪಕ ಆರೋಪಗಳೂ ಕೇಳಿ ಬರುತ್ತಿವೆ. ಈ ಎಲ್ಲ ಆರೋಪಗಳ ಮಧ್ಯೆಯೂ ಈ ಬಾರಿಯ ಚುನಾವಣೆಯ ಫಲಿತಾಂಶ ಕೆಲವು ಕಾರಣಗಳಿಗಾಗಿ ಮಹತ್ವದ್ದಾಗಿದೆ.

ಮೊದಲನೆಯದು, ತೀವ್ರವಾದವನ್ನು ಪರೋಕ್ಷವಾಗಿ ಬೆಂಬಲಿಸುವ ಪಕ್ಷದ ಅಭ್ಯರ್ಥಿಗಳು ಮಣ್ಣು ಮುಕ್ಕಿದ್ದಾರೆ. ಮಹಿಳೆಯರೂ ಈ ಬಾರಿಯ ಚುನಾವಣೆಯಲ್ಲಿ ಪ್ರಧಾನ ಪಾತ್ರವನ್ನು ವಹಿಸಿದ್ದರು. ಮೋಟಾರ್ ಬೈಕಿನಲ್ಲಿ ಅತ್ಯುತ್ಸಾಹದಿಂದ ಅವರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದರು. ಪಾಕಿಸ್ತಾನದ ಪಾಲಿಗೆ ಇದು ಹೊಸತು. ಜೊತೆಗೆ ವಂಶಪಾರಂಪರ್ಯ ರಾಜಕಾರಣಕ್ಕೆ ಹಿನ್ನಡೆಯಾಗಿದೆ. ಪಾಕಿಸ್ತಾನವನ್ನು ವಂಶದ ಹೆಸರಿನಲ್ಲಿ ದೋಚಿದವರು ಮೂಲೆಗುಂಪಾಗಿದ್ದಾರೆ. ಇಮ್ರಾನ್ ಖಾನ್ ವ್ಯಕ್ತಿತ್ವ ಪಾಕಿಸ್ತಾನದ ರಾಜಕೀಯಕ್ಕೆ ಒಗ್ಗುವಂತಹದ್ದಲ್ಲ. ಅವರು ರಾಜಕೀಯೇತರ ಕಾರಣಗಳಿಗಾಗಿ ವಿಶ್ವ ಮಟ್ಟದಲ್ಲಿ ಸುದ್ದಿಯಲ್ಲಿದ್ದವರು. ಕ್ರಿಕೆಟ್ ಮೂಲಕ ಅವರು ಕೇವಲ ಪಾಕಿಸ್ತಾನಕ್ಕಲ್ಲದೆ, ವಿಶ್ವದ ಎಲ್ಲ ದೇಶಗಳ ಜನರ ಮನಸ್ಸನ್ನು ಬೆಸೆದವರು. ಇಮ್ರಾನ್ ಖಾನ್ ಅಭಿಮಾನಿಗಳು ಪಾಕಿಸ್ತಾನದಲ್ಲಷ್ಟೇ ಅಲ್ಲ, ಭಾರತದಲ್ಲೂ ಇದ್ದಾರೆ. ಪಾಕಿಸ್ತಾನವನ್ನು ಧಾರ್ಮಿಕ ಶಕ್ತಿಗಳಿಂದ ಮುಕ್ತಗೊಳಿಸಿ, ಅದರಾಚೆಗೆ ಕೊಂಡೊಯ್ಯುವ ಎಲ್ಲ ಸಾಮರ್ಥ್ಯ ಇಮ್ರಾನ್ ಖಾನ್ ಅವರ ವ್ಯಕ್ತಿತ್ವಕ್ಕಿದೆ. ಆದರೆ ಇಮ್ರಾನ್ ಖಾನ್ ಕುಳಿತಿರುವುದು ಪಾಕಿಸ್ತಾನದ ಸೇನೆಯೆಂಬ ಹುಲಿಯ ಮೇಲೆ. ಈ ಸವಾರಿ ಅವರನ್ನು ಎಲ್ಲಿಗೆ ತಲುಪಿಸುತ್ತದೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಸ್ವತಃ ಹತ್ತು ಹಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿರುವ ಇಮ್ರಾನ್ ಖಾನ್ ಅವರನ್ನು ಮುಕ್ತವಾಗಿ ಕೆಲಸ ನಿರ್ವಹಿಸಲು ಸೇನೆ ಅವಕಾಶ ನೀಡುತ್ತದೆ ಎನ್ನುವುದನ್ನು ಕಲ್ಪಿಸಲೂ ಸಾಧ್ಯವಿಲ್ಲ.

ಈ ಹಿಂದೆ, ಹಲವು ನಾಯಕರ ಕುರಿತಂತೆ ಇದೇ ಭರವಸೆಯನ್ನು ಭಾರತ ಹೊಂದಿತ್ತು. ಆದರೆ ಅವರೆಲ್ಲರ ವ್ಯಕ್ತಿತ್ವವನ್ನು ಪಾಕಿಸ್ತಾನದ ಸೇನೆ ಮತ್ತು ಪಾಕಿಸ್ತಾನದೊಳಗಿರುವ ಧಾರ್ಮಿಕ ಶಕ್ತಿಗಳು ನುಂಗಿ ಹಾಕಿದ್ದವು. ಆ ಎಲ್ಲ ನಾಯಕರಿಗೆ ಪಾಕಿಸ್ತಾನವನ್ನು ದೋಚುವುದಕ್ಕಷ್ಟೇ ಸಾಧ್ಯವಾಯಿತು. ಅಂತಿಮವಾಗಿ ಅವರೆಲ್ಲರೂ ಅವರೇ ತೋಡಿದ ಹಳ್ಳಕ್ಕೆ ಬಿದ್ದರು. ಇದೀಗ ಇಮ್ರಾನ್ ಖಾನ್ ಅವರ ಸ್ಥಾನದಲ್ಲಿ ನಿಂತಿದ್ದಾರೆ. ಕ್ರಿಕೆಟ್ ಮೂಲಕ ಸಂಪಾದಿಸಿದ ವಿಶ್ವ ಜನಪ್ರಿಯತೆಯನ್ನು ಪಾಕಿಸ್ತಾನಕ್ಕೆ ಪೂರಕವಾಗಿ ಅವರು ಹೇಗೆ ಬಳಸಿಕೊಳ್ಳಲಿದ್ದಾರೆ ಎನ್ನುವುದರಲ್ಲಿ ಅವರ ಮತ್ತು ಪಾಕಿಸ್ತಾನದ ಭವಿಷ್ಯ ನಿಂತಿದೆ. ಇಮ್ರಾನ್ ಖಾನ್ ಆಯ್ಕೆಯಾದ ಸುದ್ದಿಗೆ ಭಾರತ ಪ್ರತಿಕ್ರಿಯಿಸಿದ ರೀತಿ ಮುತ್ಸದ್ದಿತನದಿಂದ ಕೂಡಿರಲಿಲ್ಲ. ಇಮ್ರಾನ್ ಖಾನ್ ಬಹುಮತ ಹೊಂದುತ್ತಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾದ ಬೆನ್ನಿಗೇ ಕೇಂದ್ರದ ಸಚಿವರೊಬ್ಬರು ‘‘ಇಮ್ರಾನ್ ಖಾನ್ ಅವರ ಬೆನ್ನ ಹಿಂದೆ ಸೇನೆಯಿದೆ. ಅವರ ಮೇಲೆ ಯಾವುದೇ ಭರವಸೆ ನಮಗಿಲ್ಲ’’ ಎಂದು ಘೋಷಿಸಿ ಬಿಟ್ಟರು. ಅವರು ಬಿಜೆಪಿಯ ಯಾವುದೋ ಪದಾಧಿಕಾರಿ ಅಥವಾ ಆರೆಸ್ಸೆಸ್‌ನ ಯಾವುದೋ ಕಾರ್ಯಕರ್ತರಾಗಿದ್ದರೆ ಆ ಹೇಳಿಕೆಯನ್ನು ನಿರ್ಲಕ್ಷಿಸಬಹುದಿತ್ತು. ಆದರೆ ಸರಕಾರದ ಸಚಿವರಾಗಿ ಅವರ ಹೇಳಿಕೆಗೆ ಮಹತ್ವವಿತ್ತು.

ಒಂದು ದೇಶದ ನೂತನ ನಾಯಕ ಆಯ್ಕೆಯಾಗಿ ಇನ್ನೂ ತನ್ನ ನಿಲುವನ್ನು ಸ್ಪಷ್ಟ ಪಡಿಸಿಲ್ಲ, ಅಷ್ಟರಲ್ಲೇ ಭಾರತದ ಸಚಿವರೊಬ್ಬರು ಅವರ ಬಗ್ಗೆ ಅಧಿಕೃತ ತೀರ್ಮಾನವೊಂದನ್ನು ಘೋಷಿಸುವುದು ಅವರ ರಾಜಕೀಯ ಅಪಕ್ವತೆಯನ್ನು ಹೇಳುತ್ತದೆ. ಆದರೆ ತಡವಾಗಿಯಾದರೂ ಭಾರತ ತನ್ನನ್ನು ತಿದ್ದಿಕೊಂಡಿತು. ಇಮ್ರಾನ್ ಖಾನ್ ಆಯ್ಕೆಯನ್ನು ಸ್ವಾಗತಿಸಿ ಹೇಳಿಕೆಯನ್ನು ನೀಡಿತು. ಇಮ್ರಾನ್ ಖಾನ್ ಕೂಡ ‘ಭಾರತ-ಪಾಕಿಸ್ತಾನದ ನಡುವೆ ಮಾತುಕತೆ’ಗೆ ಒಲವನ್ನು ವ್ಯಕ್ತಪಡಿಸಿದ್ದಾರೆ. ಭಾರತ ಒಂದು ಹೆಜ್ಜೆಯಿಟ್ಟರೆ ಪಾಕಿಸ್ತಾನ ಎರಡು ಹೆಜ್ಜೆ ಮುಂದಿಡುತ್ತದೆ ಎನ್ನುವ ಆಶಾದಾಯಕ ಹೇಳಿಕೆಯನ್ನು ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಅಮೆರಿಕದ ಜೊತೆಗಿನ ಸಂಬಂಧವನ್ನು ನಿಭಾಯಿಸುವುದು ಇಮ್ರಾನ್ ಖಾನ್ ಸರಕಾರಕ್ಕೆ ತಲೆನೋವಾಗಲಿದೆ. ಇತ್ತೀಚಿನ ದಿನಗಳಲ್ಲಿ ಅಮೆರಿಕವು ಪಾಕಿಸ್ತಾನದಿಂದ ಹೆಚ್ಚಿನದನ್ನು ನಿರೀಕ್ಷಿಸತೊಡಗಿದೆ. ಅದಕ್ಕಾಗಿ ಒತ್ತಡಗಳ ಮೇಲೆ ಒತ್ತಡಗಳನ್ನು ಹಾಕುತ್ತಿದೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನ-ಚೀನಾ ಜೊತೆಗಿನ ಸಂಬಂಧ ಗಟ್ಟಿಯಾಗ ತೊಡಗಿದೆ.

ವೈಯಕ್ತಿಕ ಬದುಕಿನಲ್ಲಿ ಇಮ್ರಾನ್ ಖಾನ್ ಹಲವು ಪತ್ನಿಯರನ್ನು ಹೊಂದಿರುವ ಆರೋಪಗಳಿವೆ. ಆ ಸವತಿಯರ ನಡುವಿನ ತಿಕ್ಕಾಟಗಳು ಸಾಕಷ್ಟು ಚರ್ಚೆಯಲ್ಲಿಯೂ ಇವೆ. ಆದರೆ ಈ ಅಮೆರಿಕ-ಚೀನಾ ಸವತಿಯರನ್ನು ನಿಭಾಯಿಸುವುದು ಸಣ್ಣ ವಿಷಯವೇನೂ ಅಲ್ಲ. ಇಷ್ಟಕ್ಕೂ ಇಮ್ರಾನ್ ಪಕ್ಷ ಪೂರ್ಣ ಬಹುಮತವನ್ನು ಹೊಂದಿಲ್ಲ. ಮೊದಲೇ ಸೇನೆಯ ಹಂಗಿನಲ್ಲಿರುವ ಇಮ್ರಾನ್ ಖಾನ್, ಜೊತೆಗೆ ಇತರ ಪಕ್ಷಗಳ ಋಣದಲ್ಲಿ ಮುಕ್ತವಾಗಿ ಕೆಲಸಮಾಡುವುದು ಅಷ್ಟು ಸುಲಭವಿಲ್ಲ. ಇದೇ ಸಂದರ್ಭದಲ್ಲಿ ಇಮ್ರಾನ್ ಖಾನ್ ವೈಯಕ್ತಿಕ ಬದುಕಿನ ಬಗ್ಗೆ ಇರುವ ಟೀಕೆಗಳು, ಆರೋಪಗಳೇ ಅವರನ್ನು ಅಂತಿಮವಾಗಿ ಬಲಿ ಹಾಕಿದರೂ ಅಚ್ಚರಿಯೇನಿಲ್ಲ. ಅದೇನೇ ಇರಲಿ. ಇಮ್ರಾನ್ ಖಾನ್, ಪಾಕಿಸ್ತಾನದ ಪ್ರಜಾಸತ್ತೆಗೆ ಹೊಸ ರೂಪವೊಂದನ್ನು ಕೊಡಲಿ. ಅದು ಇನ್ನಷ್ಟು ಬಲಿಷ್ಠವಾಗಲಿ. ಆ ಮೂಲಕ ಭಾರತ ಮತ್ತು ಪಾಕಿಸ್ತಾನದ ಸಂಬಂಧ ಉತ್ತಮವಾಗಲಿ. ಭಾರತ ಉಪಖಂಡದೊಳಗಿನ ಶೀತಲ ಸಮರ, ಶಸ್ತ್ರಾಸ್ತ್ರ ಪೈಪೋಟಿಗೆ ಆ ಮೂಲಕ ಕಡಿವಾಣ ಬೀಳಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News