ಅಕ್ಬರ್ ಖಾನ್ ಹತ್ಯೆ ಪ್ರಕರಣ : ಬಿಜೆಪಿ ಶಾಸಕನ ಬಂಧನಕ್ಕೆ ಒತ್ತಾಯಿಸಿದ ಮಿಯೊ ಮಹಾಪಂಚಾಯತ್

Update: 2018-07-30 11:50 GMT

ಜೈಪುರ್, ಜು. 30: ಆಳ್ವಾರ್ ನಲ್ಲಿ ಇತ್ತೀಚೆಗೆ ರಕ್ಬರ್ ಅಲಿಯಾಸ್ ಅಕ್ಬರ್ ಖಾನ್ ಎಂಬವರು ಗುಂಪು ಥಳಿತಕ್ಕೊಳಗಾಗಿ ಸಾವಿಗೀಡಾದ ಪ್ರಕರಣದ ಹಿಂದಿನ ಸಂಚಿನಲ್ಲಿ ಬಿಜೆಪಿ ಶಾಸಕ ಗ್ಯಾನ್ ದೇವ್ ಅಹುಜಾ ಶಾಮೀಲಾಗಿದ್ದಾರೆಂದು ಆರೋಪಿಸಿರುವ ಮಿಯೊ ಸಮುದಾಯ ಅವರ ಬಂಧನಕ್ಕೆ ಒತ್ತಾಯಿಸಿದೆ.

ಹರ್ಯಾಣಾದ ನುಹ್ ಜಿಲ್ಲೆಯಲ್ಲಿರುವ ಅಕ್ಬರ್ ಖಾನ್ ಗ್ರಾಮದಲ್ಲಿ ನಡೆದ ಮಹಾ ಪಂಚಾಯತ್ ನಲ್ಲಿ ಮಿಯೊ ಸಮುದಾಯ ಈ ಬೇಡಿಕೆ ಮುಂದಿರಿಸಿದೆ ಎಂದು ಆಳ್ವಾರ್ ಮೇವ್ ಪಂಚಾಯತ್ ನಾಯಕ ಶೇರ್ ಮುಹಮ್ಮದ್ ಹೇಳಿದ್ದಾರೆ.

ಘಟನೆಯ ನಂತರ ಬಿಜೆಪಿ ಶಾಸಕ ಅಹುಜಾ ಪ್ರಚೋದನಕಾರಿ ಹೇಳಿಕೆ ನೀಡಿ ಆರೋಪಿಗಳನ್ನು ಬೆಂಬಲಿಸಿದ್ದಾರೆ ಎಂದೂ ಮುಹಮ್ಮದ್ ದೂರಿದ್ದಾರೆ. ಘಟನೆ ಸಂದರ್ಭ ಹಾಜರಿದ್ದ ಹಾಗೂ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದ ನವಲ್ ಕಿಶೋರ್ ಶರ್ಮಾ ಎಂಬಾತನನ್ನು ಪ್ರಕರಣದ ಪ್ರಮುಖ ಆರೋಪಿಯನ್ನಾಗಿಸಬೇಕು ಎಂದು ಅವರು ಆಗ್ರಹಿಸಿದಾರೆ. ಸಂತ್ರಸ್ತನ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ, ಆತನ ಪತ್ನಿಗೆ ಸರಕಾರಿ ಉದ್ಯೋಗ ನೀಡಬೇಕು ಹಾಗೂ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಬೇಕೆಂಬ ಆಗ್ರಹವೂ ಬಂದಿದೆ.

ಆರೋಪಿ ಶಾಸಕ ಅಹುಜಾ ರವಿವಾರ ಘಟನೆ ನಡೆದ ಲಾಲಾವಂಡಿ ಗ್ರಾಮಕ್ಕೆ ಭೇಟಿ ನೀಡಿ ಎಲ್ಲಾ ಮೂರು ಮಂದಿ ಬಂಧಿತರನ್ನೂ ಬಿಡುಗಡೆಗೊಳಿಸಬೇಕು ಎಂದರಲ್ಲದೆ, ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಲು ವಿಫಲರಾಗಿದ್ದರಿಂದ ಸಂತ್ರಸ್ತ ಸಾವಿಗೀಡಾಗಿದ್ದಾನೆಂದೂ ಹೇಳಿದ್ದಾರೆ. ತನ್ನನ್ನು ಬಂಧಿಸಬೇಕೆಂಬ ಬೇಡಿಕೆಯನ್ನು ಮಿಯೋ ಪಂಚಾಯತ್ ಮುಂದಿರಿಸಿದ್ದರ ಬಗ್ಗೆ ಅವರನ್ನು ಪ್ರಶ್ನಿಸಿದಾಗ ಅದರ ಬಗ್ಗೆ ತಮಗೆ ಚಿಂತೆಯಿಲ್ಲ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News