ಸಮಯ ಸಾಧಕ ರಾಜಕಾರಣಿಗಳ ಪ್ರತ್ಯೇಕ ರಾಜ್ಯವೆಂಬ ಕೂಗು

Update: 2018-07-30 18:45 GMT

   ಸಣ್ಣ ರಾಜ್ಯಗಳ ಕಲ್ಪನೆ ಅವಾಸ್ತವವೇನೂ ಅಲ್ಲ. ಅಭಿವೃದ್ಧಿಯ ನಿಟ್ಟಿನಲ್ಲಿ ಸಣ್ಣ ರಾಜ್ಯಗಳು, ಸಣ್ಣ ದೇಶಗಳು ಹೆಚ್ಚು ಸಹಕಾರಿ ಎನ್ನುವುದನ್ನು ಹಲವು ವಿಶ್ಲೇಷಕರು ಈಗಾಗಲೇ ಹೇಳಿದ್ದಾರೆ. ತಳಸ್ತರದ ಅಭಿವೃದ್ಧಿಗೆ ಸಣ್ಣ ಸಣ್ಣ ರಾಜ್ಯ, ದೇಶಗಳು ಪೂರಕ ಎನ್ನುವುದನ್ನು ಹಲವು ರಾಜಕೀಯ ಚಿಂತಕರು ಕಂಡುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ರಾಜ್ಯದ ಕುರಿತಂತೆ ಎಲ್ಲಿಂದಲೇ ಬೇಡಿಕೆ ಬಂದಾಗ ಅದನ್ನು ಸಾರಾಸಗಟಾಗಿ ತಿರಸ್ಕರಿಸಬೇಕಾಗಿಲ್ಲ. ಕಳೆದ ನಾಲ್ಕು ದಶಕಗಳಲ್ಲಿ ಈ ದೇಶದ ರಾಜ್ಯಗಳ ಸಂಖ್ಯೆ ಹೆಚ್ಚುತ್ತಾ ಬಂದಿರುವುದನ್ನು ನಾವು ಗಮನಿಸಬೇಕು. ಇತ್ತೀಚೆಗೆ ಎಲ್ಲ ವಿರೋಧಗಳ ನಡುವೆಯೂ ತೆಲಂಗಾಣ ಹುಟ್ಟಿಕೊಂಡಿತು. ಅದರಿಂದಾಗಿ ಆಂಧ್ರದಲ್ಲಿ ಭೂಕಂಪವೇನೂ ಸಂಭವಿಸಲಿಲ್ಲ. ಅಂತಿಮವಾಗಿ, ನಾವು ಗುರುತಿಸಿಕೊಂಡಿರುವ ಭೌಗೋಳಿಕ ಗಡಿರೇಖೆಗಳು ಮನುಷ್ಯನ ಒಳಿತಿಗಾಗಿ ಇವೆಯೇ ಹೊರತು, ಆ ಭೌಗೋಳಿಕ ಗಡಿಗಾಗಿ ಮನುಷ್ಯ ಅಲ್ಲ. ಗಡಿ ರೇಖೆಗಳು ಕಾಲ್ಪನಿಕವಾದುದು ಮತ್ತು ಭಾವನಾತ್ಮಕವಾದುದು.

ತನ್ನ ನಾಡು, ನೆಲದ ಜೊತೆಗೆ ಭಾವನಾತ್ಮಕ ನಂಟನ್ನು ಕಡಿದುಕೊಂಡರೆ, ಗಡಿ ರೇಖೆಗಳಿಗೆ ಯಾವ ಅರ್ಥವೂ ಉಳಿಯುವುದಿಲ್ಲ. ಇದಕ್ಕೆ ಉದಾಹರಣೆಯಾಗಿ ದೇಶದಿಂದ ಪ್ರತ್ಯೇಕವಾಗಲು ಹವಣಿಸುತ್ತಿರುವ ಕಾಶ್ಮೀರವನ್ನೇ ತೆಗೆದುಕೊಳ್ಳಬಹುದು. ಕೇಂದ್ರ ಸರಕಾರ ಅಲ್ಲಿನ ಜನರ ಭಾವನೆಗಳ ಜೊತೆಗೆ ಆಡಿದ ಚೆಲ್ಲಾಟ, ಭಾರತದಿಂದ ಕಾಶ್ಮೀರದ ಜನರನ್ನು ಇನ್ನಷ್ಟು ದೂರ ಮಾಡಿದೆ. ಭಾರತ ಕಾಶ್ಮೀರದ ಜನರನ್ನು ತಮ್ಮವರನ್ನಾಗಿ ಮಾಡದೇ ಕಾಶ್ಮೀರವನ್ನು ತನ್ನದಾಗಿಸಲು ಸಾಧ್ಯವಿಲ್ಲ. ಸಂಘಪರಿವಾರದ ಹಸ್ತಕ್ಷೇಪದಿಂದ ಕಾಶ್ಮೀರದಲ್ಲಿ ಇಂದು ಪರಿಸ್ಥಿತಿ ತೀರಾ ಹದಗೆಟ್ಟಿದೆ. ಇದು ಪ್ರತ್ಯೇಕ ದೇಶದ ಬೇಡಿಕೆಗೆ ಸಂಬಂಧಿಸಿದ್ದಾದರೆ, ಪ್ರತ್ಯೇಕ ರಾಜ್ಯದ ಬೇಡಿಕೆಯೂ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಬೆಳಗಾವಿಯಲ್ಲಿ ಇಂತಹದೊಂದು ಸ್ಥಿತಿಯನ್ನು ಕರ್ನಾಟಕ ಹಲವು ದಶಕಗಳಿಂದ ಎದುರಿಸುತ್ತಾ ಬರುತ್ತಿದೆ. ಒಂದು ಕಾಲದಲ್ಲಿ ಕನ್ನಡಿಗರು ಬೆಳಗಾವಿ ಗಡಿಯಲ್ಲಿ ಬಹುಸಂಖ್ಯಾತರಾಗಿದ್ದರು. ಆದರೆ ಕರ್ನಾಟಕದ ತೀವ್ರ ನಿರ್ಲಕ್ಷದ ಪರಿಣಾಮವಾಗಿಯೋ ಏನೋ, ಇಂದು ಗಡಿಯಲ್ಲಿ ಕನ್ನಡಿಗರು ತಮ್ಮ ಹಕ್ಕನ್ನು ಸಾಧಿಸಲು ಹೋರಾಟ ನಡೆಸಬೇಕಾಗಿ ಬಂದಿದೆ.

ಸರಕಾರ ತನ್ನ ಶಕ್ತಿಯನ್ನು ಪ್ರದರ್ಶಿಸಬೇಕಾಗಿ ಬಂದಿದೆ. ಮರಾಠಿಗರು ಇದರ ಲಾಭವನ್ನು ತಮ್ಮದಾಗಿಸಿಕೊಂಡಿದ್ದಾರೆ. ಯಾರಾದರೂ ಕನ್ನಡದ ಧ್ವಜವನ್ನು ಕಿತ್ತು ಹಾಕಿದಾಗಷ್ಟೇ ಸರಕಾರಕ್ಕೆ ಬೆಳಗಾವಿ ನೆನಪಾಗುತ್ತದೆ. ಎಲ್ಲಿಯವರೆಗೆ ಬೆಳಗಾವಿಯಲ್ಲಿ ಬದುಕುತ್ತಿರುವ ಜನರಿಗೆ ಕರ್ನಾಟಕ, ಕನ್ನಡ ತನ್ನದು ಅನ್ನಿಸುವುದಿಲ್ಲವೋ ಅಲ್ಲಿಯವರೆಗೆ ನಾವು ಯಾವುದೇ ಬಲವಂತದಿಂದ ಅವರ ಮೇಲೆ ಕನ್ನಡವನ್ನು ಹೇರುವುದು ತಪ್ಪಾಗುತ್ತದೆ. ನೂತನ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಉತ್ತರ ಕರ್ನಾಟಕ ಪ್ರತ್ಯೇಕತೆಯ ಕೂಗಿಗೆ ಜೀವ ಬಂದಿದೆ. ಬಜೆಟ್‌ನಲ್ಲಿ ಉತ್ತರ ಕರ್ನಾಟಕವನ್ನು ಮುಖ್ಯಮಂತ್ರಿಯವರು ಮರೆತಿದ್ದಾರೆ ಎನ್ನುವ ನೆಪದಿಂದ ಇದು ಆರಂಭವಾಗಿದ್ದು, ಬಳಿಕ ಕುಮಾರಸ್ವಾಮಿಯವರು ಆಡಿದ ಕೆಲವು ಮಾತಿನ ಎಳೆಗಳನ್ನು ಹಿಡಿದುಕೊಂಡು ಪ್ರತ್ಯೇಕತಾ ಕೂಗನ್ನು ತೀವ್ರಗೊಳಿಸಲಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಉತ್ತರ ಕರ್ನಾಟಕದ ವಿರೋಧಿ ಎನ್ನುವ ಸುಳ್ಳು ಪ್ರಚಾರವನ್ನು ಉದ್ದೇಶ ಪೂರ್ವಕವಾಗಿ ಹಬ್ಬಿಸಲಾಗಿದೆ. ಉತ್ತರ ಕರ್ನಾಟಕ ಅಭಿವೃದ್ಧಿಯಾಗಿಲ್ಲ ಮತ್ತು ರಾಜಕಾರಣಿಗಳು ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸುತ್ತಾ ಬಂದಿದ್ದಾರೆ ಎನ್ನುವ ಮಾತು ಸತ್ಯವೇ ಆಗಿದ್ದರೂ, ಸದ್ಯಕ್ಕೆ ಕೇಳಿ ಬರುತ್ತಿರುವ ಅಥವಾ ಬಿಜೆಪಿಯ ಕೆಲವು ನಾಯಕರು ಉದ್ದೇಶ ಪೂರ್ವಕವಾಗಿ ಎಬ್ಬಿಸಿರುವ ಪ್ರತ್ಯೇಕತೆಯ ಕೂಗು ಒಂದು ಪ್ರಹಸನ ಮಾತ್ರವಾಗಿದೆ. ಯಾವುದೇ ಪ್ರದೇಶದ ಜನರು ಪ್ರತ್ಯೇಕ ರಾಜ್ಯವನ್ನು ಕೇಳುತ್ತಿದ್ದಾರೆ ಎಂದರೆ, ಆ ಕೂಗು ಎಷ್ಟರ ಮಟ್ಟಿಗೆ ಪ್ರಾಮಾಣಿಕವಾಗಿದೆ, ಅದರ ನೇತೃತ್ವವನ್ನು ವಹಿಸಿಕೊಂಡವರು ಆ ಭಾಗದ ಜನರ ಕುರಿತಂತೆ ಎಷ್ಟು ಪ್ರಾಮಾಣಿಕರಾಗಿದ್ದಾರೆ ಎನ್ನುವುದನ್ನು ನಾವು ಮೊದಲು ಗಮನಿಸಬೇಕಾಗಿದೆ. ಅತ್ಯಂತ ದುರಂತದ ಸಂಗತಿಯೆಂದರೆ, ಉತ್ತರ ಕರ್ನಾಟಕ ಅದರಲ್ಲೂ ಬಳ್ಳಾರಿಯ ಉದರವನ್ನು ಬಗೆದು ಕೋಟಿ ಕೋಟಿ ಬಾಚಿಕೊಂಡು ಅಲ್ಲಿನ ಜನರ ಬದುಕನ್ನು ನರಕ ಮಾಡಿದ ರೆಡ್ಡಿ ಬಳಗ ‘ಉತ್ತರ ಕರ್ನಾಟಕ’ ಪ್ರತ್ಯೇಕವಾಗಬೇಕು ಎಂದು ಕೂಗೆಬ್ಬಿಸಿರುವುದು.

ಶಾಸಕ ಶ್ರೀರಾಮುಲು ಸೇರಿದಂತೆ ಕೆಲವು ಬಿಜೆಪಿ ನಾಯಕರು ಉತ್ತರ ಕರ್ನಾಟಕ ಪ್ರತ್ಯೇಕವಾಗಬೇಕು ಎಂಬುದಾಗಿ ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಆದರೆ ಇಂದು ಉತ್ತರ ಕರ್ನಾಟಕ ಅಭಿವೃದ್ಧಿ ಆಗದಿರುವುದಕ್ಕೆ ಇದೇ ನಾಯಕರ ಕೊಡುಗೆ ಬಹುದೊಡ್ಡದಿದೆ. ಗಣಿರೆಡ್ಡಿಗಳಂತಹ ದೊರೆಗಳು, ಭೂಮಾಲಕರು, ಪಾಳೆಗಾರರ ಸ್ವಾರ್ಥದಿಂದಲೇ, ಅಲ್ಲಿನ ಕೃಷಿಕರು ಮತ್ತು ಕಾರ್ಮಿಕರ ಸ್ಥಿತಿ ಹೀನಾಯವಾಗಿದೆ. ಬಳ್ಳಾರಿಯಂತಹ ಜಿಲ್ಲೆಯನ್ನು ಗಣಿಗಾರಿಕೆಯ ಹೆಸರಿನಲ್ಲಿ ಲೂಟಿ ಹೊಡೆದು, ಎಲ್ಲವನ್ನೂ ದೋಚಿ ತಮ್ಮ ತಿಜೋರಿ ತುಂಬಿಸಿ ಅಲ್ಲಿನ ಶ್ರೀಸಾಮಾನ್ಯರ ಕೈಗೆ ಚಿಪ್ಪುಕೊಟ್ಟವರು ಯಾರು ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಉತ್ತರ ಕರ್ನಾಟಕದಿಂದ ಬಂದಿರುವ ಹಲವು ಪ್ರಮುಖ ನಾಯಕರು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಈ ನಾಡಿನ ಮುಖ್ಯಮಂತ್ರಿಯಾಗಿದ್ದಾರೆ. ಹೀಗಿದ್ದೂ ಇವರಿಗೆ ಉತ್ತರ ಕರ್ನಾಟಕವನ್ನು ಅಭಿವೃದ್ಧಿಗೊಳಿಸುವುದು ಬೇಕಾಗಿರಲಿಲ್ಲ. ಇದೀಗ ಅದೇ ಸಮಯ ಸಾಧಕ ರಾಜಕಾರಣಿಗಳು ಉತ್ತರ ಕರ್ನಾಟಕದ ಬವಣೆಗಳಿಗೆ ದಕ್ಷಿಣ ಕರ್ನಾಟಕವನ್ನು, ಬೆಂಗಳೂರಿನ ನಾಯಕರನ್ನು ಹೊಣೆ ಮಾಡಲು ಹವಣಿಸುತ್ತಿದ್ದಾರೆ. ಈ ಮೂಲಕ ತಮ್ಮ ತಪ್ಪುಗಳನ್ನು ಉತ್ತರ ಕರ್ನಾಟಕದ ಜನರಿಂದ ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ. ಪ್ರತ್ಯೇಕ ರಾಜ್ಯದ ಬೇಡಿಕೆ ಇಡುತ್ತಿರುವ ಕೊಡಗಿನ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಕೊಡಗನ್ನು ಪ್ರತಿನಿಧಿಸಿದ ನಾಯಕರು ತಮ್ಮ ಏಳಿಗೆಯನ್ನು ಮಾಡಿಕೊಂಡರೇ ಹೊರತು, ಅಲ್ಲಿನ ತಳಸ್ತರದ ಆದಿವಾಸಿ ಜನರನ್ನು ಸಂಪೂರ್ಣ ನಿರ್ಲಕ್ಷಿಸಿದರು. ಮೇಲ್ಜಾತಿಯ ಕೊಡವರ ಹಿಡಿತದಲ್ಲಿ ಇಂದಿಗೂ ಕೊಡಗು ನರಳುತ್ತಿದೆ. ಇವರ ವಿರುದ್ಧ ಮಾತನಾಡುವಂತಹ ಸ್ಥಿತಿ ತಳಸ್ತರದಲ್ಲಿ ಹಂಚಿ ಹೋಗಿರುವ ಬುಡಕಟ್ಟು ಸಮುದಾಯಕ್ಕಿಲ್ಲ.

ಕೊಡವರೆಂದರೆ ಕಾಫಿ ಫ್ಲಾಂಟರ್‌ಗಳು ಎಂದೇ ನಂಬಿಸಿ, ಅವರ ಸುಖ ದುಃಖಗಳನ್ನಷ್ಟೇ ಸರಕಾರ ಗಂಭೀರವಾಗಿ ತೆಗೆದುಕೊಳುತ್ತಾ ಬಂದಿರುವುದರಿಂದಾಗಿ ಕೊಡಗಿನ ದೊಡ್ಡ ಭಾಗ ಹಿಂದುಳಿಯುವಂತಾಗಿದೆ. ಈ ದೇಶವನ್ನು ಧರ್ಮ, ಜಾತಿಗಳ ಆಧಾರದಲ್ಲಿ ಒಡೆದು ಹಾಕಿರುವ ಬಿಜೆಪಿಯ ನಾಯಕರು ಇದೀಗ ಕರ್ನಾಟಕವನ್ನು ಉತ್ತರ-ದಕ್ಷಿಣವೆಂದು ಒಡೆಯಲು ಹೊರಟಿರುವುದು ಅತ್ಯಂತ ತಮಾಷೆಯಾಗಿದೆ. ಕನ್ನಡ ಭಾಷೆಯ ಮೇಲೆ ಹಿಂದಿಯನ್ನು ಹೇರಲು ತುದಿಗಾಲಲ್ಲಿ ನಿಂತಿರುವ ಬಿಜೆಪಿ ನಾಯಕರ ಸಂಚು ಕೂಡ ಇದರ ಹಿಂದಿದೆ. ಕರ್ನಾಟಕವೆಂದರೆ ವೈವಿಧ್ಯಮಯ ಭಾಷೆಗಳ ಸಂಕುಲ. ಅವನ್ನೆಲ್ಲ ಅಳಿಸಿ ನಿಧಾನಕ್ಕೆ ಹಿಂದಿಯನ್ನು ಹೇರಲು ಅವರಿಗೆ ಉತ್ತರ ಕರ್ನಾಟಕ ಬೇಕಾಗಿದೆ. ಉರ್ದು, ಹಿಂದಿ, ಮರಾಠಿಯ ಪ್ರಭಾವವಿರುವ ಉತ್ತರ ಕರ್ನಾಟಕವನ್ನು ಉತ್ತರ ಭಾರತೀಯ ನಾಯಕರ ತೆಕ್ಕೆಗೆ ಒಪ್ಪಿಸಲು ನಡೆಸುತ್ತಿರುವ ತಂತ್ರದ ಭಾಗವೂ ಇದಾಗಿದೆ. ಸದ್ಯ ಕೇಳಿ ಬರುತ್ತಿರುವ ಉತ್ತರ ಕರ್ನಾಟಕದ ಬೇಡಿಕೆ, ಜನರ ಬೇಡಿಕೆ ಖಂಡಿತಾ ಅಲ್ಲ. ಸಮಯ ಸಾಧಕ ರಾಜಕಾರಣಿಗಳ ಬೇಡಿಕೆಯಾಗಿದೆ. ಅಖಂಡ ಕರ್ನಾಟಕ, ಹೋರಾಟ ಮತ್ತು ತ್ಯಾಗಗಳ ಮೂಲಕ ರಚನೆಯಾಗಿದೆ. ಅದನ್ನು ತಮ್ಮ ಸ್ವಾರ್ಥಕ್ಕಾಗಿ ಛಿದ್ರಗೊಳಿಸಲು ಹವಣಿಸುತ್ತಿರುವ ಶಕ್ತಿಯನ್ನು ಕನ್ನಡಿಗರು ಒಂದಾಗಿ ಸರ್ವಶಕ್ತಿಯೊಂದಿಗೆ ಪ್ರತಿರೋಧಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News