ಅಪಹರಣಕಾರ ಜನಪ್ರತಿನಿಧಿಗಳಲ್ಲಿ ಬಿಜೆಪಿಯವರೇ ಅಧಿಕ: ಎಡಿಆರ್

Update: 2018-07-31 05:07 GMT

ಹೊಸದಿಲ್ಲಿ, ಜು. 31: ತಮ್ಮ ವಿರುದ್ಧ ಅಪಹರಣ ಪ್ರಕರಣಗಳು ಇವೆ ಎಂದು ಘೋಷಿಸಿಕೊಂಡ 64 ಶಾಸನಸಭೆ ಸದಸ್ಯರ ಪೈಕಿ ಶೇಕಡ 25ರಷ್ಟು ಮಂದಿ ಬಿಜೆಪಿ ಚುನಾಯಿತ ಪ್ರತಿನಿಧಿಗಳು ಎಂದು ಅಸೋಸಿಯೇಶನ್ ಆಫ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ಬಹಿರಂಗಪಡಿಸಿದೆ.

ಭಾರತೀಯ ದಂಡಸಂಹಿತೆಯ ಸೆಕ್ಷನ್ 359, 360, 361, 362, 363, 364, 365, 366, 367, 368 ಮತ್ತು 369 ಅನ್ವಯ ಇರುವ ಆರೋಪಗಳನ್ನು ಎಡಿಆರ್ ವಿಶ್ಲೇಷಿಸಿದೆ. ಅಪಹರಣಕ್ಕೆ ಸಂಬಂಧಪಟ್ಟ ಈ ಸೆಕ್ಷನ್‌ಗಳ ಅನ್ವಯ ಒಟ್ಟು 64 ಮಂದಿ ಚುನಾಯಿತ ಪ್ರತಿನಿಧಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪೈಕಿ 16 ಮಂದಿ ಬಿಜೆಪಿಯವರು.

ಕಾಂಗ್ರೆಸ್ ಹಾಗೂ ರಾಷ್ಟೀಯ ಜನತಾದಳದ ತಲಾ ಆರು ಮಂದಿ ಸದಸ್ಯರು, ಎನ್‌ಸಿಪಿಯ ಐದು, ಬಿಜು ಜನತಾದಳದ ನಾಲ್ವರು ಅಪಹರಣ ಪ್ರಕರಣ ಎದುರಿಸುತ್ತಿದ್ದಾರೆ. ಸಮಾಜವಾದಿ ಹಾಗೂ ತೆಲುಗು ದೇಶಂನ ತಲಾ ಇಬ್ಬರು ಶಾಸಕರು ತಮ್ಮ ವಿರುದ್ಧ ಅಪಹರಣ ಪ್ರಕರಣ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಟಿಎಂಸಿ ಹಾಗೂ ಸಿಪಿಎಂನ ಇಬ್ಬರು, ಸಂಯುಕ್ತ ಜನತಾದಳ, ಎಲ್‌ಜೆಪಿ ಮತ್ತು ಟಿಆರ್‌ಎಸ್‌ನ ತಲಾ ಒಬ್ಬರು ಶಾಸಕರು ಅಪರಾಧ ಪ್ರಕರಣಗಳಿರುವುದನ್ನು ಘೋಷಿಸಿಕೊಂಡಿದ್ದಾರೆ.

ರಾಜ್ಯವಾರು ನೋಡಿದರೆ ಬಿಹಾರ ಹಾಗೂ ಉತ್ತರ ಪ್ರದೇಶದ ತಲಾ ಒಂಬತ್ತು ಶಾಸಕರ ವಿರುದ್ಧ ಅಪಹರಣ ಪ್ರಕರಣಗಳಿದ್ದು, ಮಹಾರಾಷ್ಟ್ರದಲ್ಲಿ ಎಂಟು, ಪಶ್ಚಿಮ ಬಂಗಾಳದಲ್ಲಿ ಆರು ಮಂದಿ ಶಾಸಕರ ವಿರುದ್ಧ ಅಪಹರಣ ಪ್ರಕರಣಗಳಿವೆ. ಒಡಿಶಾ ಹಾಗೂ ತಮಿಳುನಾಡಿನ ನಾಲ್ವರು ಶಾಸಕರ ವಿರುದ್ಧ ಇಂಥ ಆರೋಪ ಇದ್ದರೆ ಆಂಧ್ರಪ್ರದೇಶ, ಗುಜರಾತ್ ಮತ್ತು ರಾಜಸ್ಥಾನದ ತಲಾ ಮೂವರು ಶಾಸಕರ ವಿರುದ್ಧ ಇಂಥ ಆರೋಪ ಇವೆ. ಛತ್ತೀಸ್‌ಗಢ, ಹಿಮಾಚಲಪ್ರದೇಶ, ಜಾರ್ಖಂಡ್, ಕರ್ನಾಟಕ, ಕೇರಳ, ಪಂಜಾಬ್ ಮತ್ತು ತೆಲಂಗಾಣದ ತಲಾ ಒಬ್ಬರು ಶಾಸಕರು ಅಪಹರಣ ಪ್ರಕರಣ ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News