ರಾಜಕೀಯ ನಿವೃತ್ತಿ ಘೋಷಿಸಿದ ಕಾಗೋಡು ತಿಮ್ಮಪ್ಪ

Update: 2018-07-31 12:29 GMT

ಬೆಂಗಳೂರು, ಜು.31: ರಾಜ್ಯದ ಹಿರಿಯ ಕಾಂಗ್ರೆಸ್ ಮುಖಂಡ, ಮುತ್ಸದ್ದಿ ರಾಜಕಾರಣಿ, ಸಮಾಜವಾದಿ ಚಳವಳಿಯ ಮುಂಚೂಣಿ ನಾಯಕ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಗೋಡು ತಿಮ್ಮಪ್ಪ, ನನಗೂ ವಯಸ್ಸಾಯಿತು, ಮಾಡುವ ಕೆಲಸಗಳನ್ನೆಲ್ಲ ಮಾಡಿದ್ದೇನೆ. ನನ್ನ ಕೆಲಸದ ಬಗ್ಗೆ ಸಮಾಧಾನವಿದೆ. ಇಷ್ಟು ಸಾಕು, ಇನ್ನು ಚುನಾವಣಾ ರಂಗದಿಂದ ನಾನು ದೂರ ಉಳಿಯಲಿದ್ದೇನೆ ಎಂದರು. ಇನ್ನು ಮುಂದೆ ಯಾವುದೇ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಬೇರೆ ರೀತಿಯಲ್ಲಿ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತೇನೆ ಎನ್ನುವ ಮೂಲಕ 55 ವರ್ಷಗಳ ತಮ್ಮ ರಾಜಕೀಯ ಜೀವನದಿಂದ ವಿಮುಖರಾಗುತ್ತಿರುವುದಾಗಿ ಅವರು ಹೇಳಿದರು.

ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕಾಗಿ ನಡೆಯುತ್ತಿರುವ ಹೋರಾಟದ ಕುರಿತು ಪ್ರತಿಕ್ರಿಯಿಸಿದ ಕಾಗೋಡು ತಿಮ್ಮಪ್ಪ, ಅನೇಕ ವರ್ಷಗಳ ಹೋರಾಟದ ಫಲವಾಗಿ ನಮ್ಮ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದಿದೆ. ಈಗ ಈ ರಾಜ್ಯವನ್ನು ಎರಡು ಭಾಗಗಳನ್ನಾಗಿ ಮಾಡಬೇಕೆಂದು ಆಗ್ರಹಿಸುವುದು ಮೂರ್ಖತನದ ಪರಮಾವಧಿ. ರಾಜ್ಯವನ್ನು ಒಡೆಯುವ ಕೆಲಸಕ್ಕೆ ಯಾರೂ ಬೆಂಬಲ ನೀಡಬಾರದು. ಎಂದು ಆಗ್ರಹಿಸಿದರು.

ರಾಜಕೀಯ ಜೀವನದ ಹಿನ್ನೆಲೆ: ಬಿ.ಕಾಂ, ಬಿ.ಎಲ್ ಪದವಿ ಪಡೆದು, ಸಾಗರದಲ್ಲಿ ವಕೀಲಿ ವೃತ್ತಿಗಿಳಿದು, ಸಮಾಜವಾದಿ ಪಕ್ಷದಿಂದ ರಾಜಕಾರಣಕ್ಕೆ ಕಾಲಿಟ್ಟವರು. ಸಾಗರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಎರಡು ಬಾರಿ ಸೋತು, ಮೂರನೆ ಬಾರಿಗೆ 1972ರಲ್ಲಿ ಗೆದ್ದು ವಿಧಾನಸೌಧ ಪ್ರವೇಶಿಸಿದರು. 1973ರಲ್ಲಿ ಸಂಡೂರು ಭೂ ವಿಮೋಚನಾ ಸತ್ಯಾಗ್ರಹದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪೀಕೆಟಿಂಗ್ ಮಾಡಿ ಬಂಧನಕ್ಕೊಳಗಾದವರು. ಇಂತಹ ಕಾಗೋಡು ತಿಮ್ಮಪ್ಪನವರು ಶಾಸಕರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಸಲ್ಲಿಸಿದ ಸೇವೆ ಶ್ಲಾಘನೀಯ.

ಸಚಿವರಾಗಿ ಹಲವು ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದ ಅನುಭವ ಅಪಾರ. 1980ರಲ್ಲಿ ಕಾಂಗ್ರೆಸ್(ಐ) ಪಕ್ಷ ಸೇರಿದರು. 1980 ಮೇ 5 ರಂದು ವಿಧಾನಸಭಾ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಅಂದಿನ ಮುಖ್ಯಮಂತ್ರಿ ಗುಂಡೂರಾವ್ ಬೆಂಬಲದಿಂದ ಆಯ್ಕೆಯಾಗಿ ಹಿಂದುಳಿದವರ ಸಮಿತಿಯ ಅಧ್ಯಕ್ಷರಾದರು. ನಂತರ ಗುಂಡೂರಾವ್ ಇವರನ್ನು 1980 ಅಕ್ಟೋಬರ್ 3ರಂದು ಅರಣ್ಯ ಇಲಾಖೆಯ ಸಚಿವರನ್ನಾಗಿ ನಿಯುಕ್ತಿಗೊಳಿಸಿ ವಿಧಾನ ಪರಿಷತ್ತಿನ ಸಭಾನಾಯಕರಾಗಿ ನೇಮಿಸಿದರು.

ನಂತರ ಲೋಕೋಪಯೋಗಿ ಸಚಿವರಾಗಿ ನಿಯುಕ್ತರಾದರು. ಪುನಃ 1989ರಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಅಧಿಕ ಬಹುಮತದಿಂದ ಗೆದ್ದರು. ಆಗ ಇವರನ್ನು ಮುಖ್ಯಮಂತ್ರಿಯಾಗಿದ್ದ ವೀರೆಂದ್ರ ಪಾಟೀಲರು ರಾಜ್ಯ ಗೃಹಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದರು. ಆ ಬಳಿಕ ವೀರಪ್ಪ ಮೊಯ್ಲಿ ಮಂತ್ರಿ ಮಂಡಲದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ನಿಯುಕ್ತಗೊಂಡರು. 1994 ನವೆಂಬರ್ 20ರಂದು ಮತ್ತು 1999 ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಪುನಃ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಾಗೋಡು ತಿಮ್ಮಪ್ಪ ಜಯ ಗಳಿಸಿದರು. ಎಸ್.ಎಂ.ಕೃಷ್ಣ ಸರಕಾರದ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸಿದರು. 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ, ಸ್ಪೀಕರ್ ಹಾಗೂ ಕಂದಾಯ ಸಚಿವರಾಗಿಯೂ ಕಾಗೋಡು ತಿಮ್ಮಪ್ಪ ಸೇವೆ ಸಲ್ಲಿಸಿದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಮೂಲಕ ತಮ್ಮ ರಾಜಕೀಯ ಜೀವನದಿಂದ ವಿಮುಖರಾಗುವ ತೀರ್ಮಾನ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News