ರಾವಣ ಕೇಂದ್ರಿತ ರಾಮಾಯಣ

Update: 2018-07-31 18:30 GMT

ರಾಮಾಯಣದಲ್ಲಿ ರಾಮನ ಪಾತ್ರಕ್ಕಿಂತಲೂ ವಿಭಿನ್ನ ಮತ್ತು ವಿಶಿಷ್ಟ ಪಾತ್ರ ರಾವಣನದು. ವೈವಿಧ್ಯಮಯವಾದ ವ್ಯಕ್ತಿತ್ವವನ್ನು ಹೊಂದಿದ ಪ್ರತಿ ನಾಯಕ ಅವನು. ಅವನನ್ನು ಪೂರ್ಣವಾಗಿ ಖಳನಾಯಕನೆಂದು ಕರೆಯುವಂತಿಲ್ಲ. ಇಂದಿಗೂ ಉತ್ತರ ಭಾರತ ಮತ್ತು ಈಶಾನ್ಯ ಭಾರತದಲ್ಲಿ ರಾವಣನನ್ನು ಆರಾಧಿಸುವ ಸಮುದಾಯಗಳಿವೆ. ರಾಮನಿಗಿಂದ ರಾವಣನೇ ಮುಖ್ಯ ಅವರಿಗೆ. ರಾವಣ ಶೈವನಾಗಿದ್ದು, ರಾಮ- ರಾವಣರ ಕಾಳಗವನ್ನು ವೈಷ್ಣವ ಮತ್ತು ಶೈವರ ನಡುವಿನ ಸಂಘರ್ಷವಾಗಿ ನೋಡುವವರಿದ್ದಾರೆ. ‘ರಾಕ್ಷಸ’ ಎನ್ನುವ ಪದದ ಅರ್ಥ ಇಂದು ವಿರೂಪಗೊಂಡಿದೆ. ಅವರನ್ನು ಋಣಾತ್ಮಕವಾಗಿ ನಾವು ಚಿತ್ರಿಸುತ್ತೇವೆ. ಆದರೆ ಮೂಲ ವಾಲ್ಮೀಕಿ ರಾಮಾಯಣವೇ ರಾವಣನ ಕುರಿತಂತೆ ಏನೆನ್ನುತ್ತದೆ? ಈ ಪ್ರಶ್ನೆಗೆ ಹಿಂದಿಯ ವಿಚಾರವಾದಿ ಎಲ್. ಆರ್. ಬಾಲಿ ಅವರು ‘ರಾವಣ-ಮಹಾತ್ಮನೋ ರಾಕ್ಷಸನೋ’ ಎಂಬ ಕಿರು ಕೃತಿಯಲ್ಲಿ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಬಾಲಿ ಅವರ ಈ ಕೃತಿಯನ್ನು ಅನಿಲ ಹೊಸಮನಿ ಅವರು ಕನ್ನಡಕ್ಕೆ ತಂದಿದ್ದಾರೆ. ಈ ದೇಶದಲ್ಲಿರುವುದು ಒಂದು ರಾಮಾಯಣವಲ್ಲ, ನೂರಾರು ರಾಮಾಯಣ ಗಳಿವೆ. ಬಡಕಟ್ಟುಗಳು, ಆದಿವಾಸಿಗಳು, ಗ್ರಾಮೀಣರು, ಮಹಿಳೆಯರು ಬೇರೆ ಬೇರೆ ರಾಮಾಯಣಗಳ ಮೂಲಕ ಬದುಕುತ್ತಾ ಬಂದಿದ್ದಾರೆ. ರಾಮ ಏಕಪತ್ನೀ ವ್ರತಸ್ಥ ಎನ್ನುವುದನ್ನು ನಿರಾಕರಿಸುವ ಹಲವು ರಾಮಾಯಣಗಳಿವೆ. ದಶರಥ ಜಾತಕದಲ್ಲಿ ಸೀತೆಯನ್ನು ರಾಮನ ಸೋದರಿ ಎಂದು ಹೇಳಲಾಗಿದೆ. ಉತ್ತರ ಪುರಾಣದಲ್ಲಿ ರಾಮನಿಗೆ ಎಂಟು ಸಾವಿರ ರಾಣಿಯರಿದ್ದರು. ಕಾಶ್ಮೀರಿ ರಾಮಾಯಣ, ಗುಜರಾತಿ ರಾಮಾಯಣ, ಆನಂದ ರಾಮಾಯಣ, ರಾಮಕೀರ್ತಿ, ಚಿತ್ರ ಪಟ ರಾಮಾಯಣ ಹೀಗೆ, ದೇಶದಲ್ಲಿ ಎಷ್ಟು ರಾಮಾಯಣಗಳಿವೆಯೋ ಅಷ್ಟೇ ವೈವಿಧ್ಯಮಯ ರಾಮರಿದ್ದಾರೆ. ಹೀಗಿರುವಾಗ, ರಾವಣನೂ ವೈವಿಧ್ಯಮಯವಾಗಿಯೇ ಇರಬೇಕಾಗುತ್ತದೆ. ಹೇಗೆ ರಾಮನಿಗೆ ಹಲವು ವ್ಯಕ್ತಿತ್ವಗಳಿವೆಯೋ ಹಾಗೆಯೇ ರಾವಣನಿಗೂ ಇವೆ ಎನ್ನುವುದನ್ನು ಈ ಕೃತಿ ಹೇಳುತ್ತದೆ. ಈ ಕೃತಿ ರಾವಣನ ಪಾತ್ರವನ್ನು ಕೇಂದ್ರವಾಗಿಟ್ಟುಕೊಂಡು ರಾಮಾಯಣ ರಚನಕಾಲ, ಅದರ ಉದ್ದೇಶವನ್ನು ಹೇಳಲು ಪ್ರಯತ್ನಿಸುತ್ತದೆ. ರಾಮ ಮತ್ತು ರಾವಣನನ್ನು ಮುಖಾಮುಖಿಗೊಳಿಸಿ ಅವರ ಗುಣಾವಗುಣಗಳನ್ನು ವಿಮರ್ಶಿಸುತ್ತದೆ. ವಾಲ್ಮೀಕಿ ರಾಮಾಯಣ ಹೇಗೆ ವೈದಿಕ ಪರಂಪರೆಗೆ ನಿಷ್ಠವಾಗಿದೆ ಮತ್ತು ಹೀಗಿದ್ದರೂ ವಾಲ್ಮೀಕಿ ಕೂಡ ರಾವಣನನ್ನು ಮಹಾತ್ಮನೆಂದು ಗುರುತಿಸಿರುವುದನ್ನು ಬೆಟ್ಟು ಮಾಡಿ ತೋರಿಸುತ್ತದೆ. ರಾಮನನ್ನು ರಾವಣನ ವಿರುದ್ಧ ಎತ್ತಿಕಟ್ಟಿರುವುದಲ್ಲ, ಬೌದ್ಧ ಧರ್ಮದ ವಿರುದ್ಧ ಎತ್ತಿ ಕಟ್ಟಲಾಗಿದೆ ಎನ್ನುವುದನ್ನು ಲೇಖಕರು ಇಲ್ಲಿ ಕಂಡುಕೊಳ್ಳುತ್ತಾರೆ. ರಾವಣನನ್ನು ಅತಿಮಾನುಷವಾಗಿ ವಾಲ್ಮೀಕಿ ಚಿತ್ರೀಕರಿಸುವುದರ ಹಿಂದಿನ ಸಂಚುಗಳನ್ನು ಕೃತಿಯಲ್ಲಿ ಬಯಲು ಮಾಡಲಾಗಿದೆ. ವಾಲ್ಮೀಕಿ ರಾಮಾಯಣದಲ್ಲಿ ಸೀತೆಯು ಪ್ರಾರ್ಥಿಸುತ್ತಾಳೆ ‘‘ಹೇ ಗಂಗಾಮಾತೆಯೇ, ನಾನು ಅಯೋಧ್ಯೆಗೆ ಮರಳಿ ಬಂದ ಆನಂತರ ಮದ್ಯದ ಸಾವಿರಾರು ಗಡಿಗೆಗಳಿಂದ, ಮಾಂಸ ಮತ್ತು ಎಲ್ಲ ತರಹದ ಮಾಸಾಲೆಗಳಿಂದ ಕೂಡಿ ತಯಾರಿಸಿದ ಅನ್ನದಿಂದ ನಿನ್ನ ಪೂಜೆ ಮಾಡುತ್ತೇನೆ’’ ಅಯೋಧ್ಯಾ ಕಾಂಡದ 96ನೇ ಅಧ್ಯಾಯದಲ್ಲಿ ರಾಮನು ಸೀತೆಗೆ ‘‘ನೋಡು ಬೆಂಕಿಯಲ್ಲಿ ಸುಟ್ಟ ಈ ಮಾಂಸವು ಪವಿತ್ರ ಮತ್ತು ರುಚಿಯಾಗಿದೆ’’ ಎಂದು ಹೇಳುತ್ತಾನೆ. ಈ ಎಲ್ಲ ಅಂಶಗಳನ್ನು ರಾಮಾಯಣದೊಳಗಿಂದಲೇ ಹೆಕ್ಕಿ ತೆಗೆದು ವೈದಿಕ ರಾಜಕಾರಣದ ಒಳಸಂಚುಗಳನ್ನು ಲೇಖಕರು ಬಯಲು ಮಾಡುತ್ತಾರೆ.ಲಡಾಯಿ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 56. ಮುಖಬೆಲೆ 40 ರೂಪಾಯಿ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News