ದುಬಾರಿಯಾಗಲಿದೆ ಗೃಹ ಸಾಲಗಳು

Update: 2018-08-01 11:03 GMT

ಹೊಸದಿಲ್ಲಿ, ಆ.1: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿ ಸಮಿತಿ ತನ್ನ ಮೂರನೇ ದ್ವೈಮಾಸಿಕ ಸಭೆಯಲ್ಲಿ ರೆಪೊ ರೇಟ್ ನಲ್ಲಿ 25 ಬೇಸಿಸ್ ಪಾಯಿಂಟ್ ಏರಿಕೆ ಘೋಷಿಸಿದ್ದು, ಇದರಿಂದ ರೆಪೊ ರೇಟ್ ಶೇ 6.5ರಷ್ಟಾಗಿದೆ. ಇದು ಮುಖ್ಯವಾಗಿ ಬ್ಯಾಂಕುಗಳಿಂದ ಗೃಹ ಸಾಲ, ಕಾರು ಖರೀದಿಗೆ ಸಾಲ, ವೈಯಕ್ತಿಕ ಸಾಲ ಹೀಗೆ ಪಡೆಯಲಾದ ಯಾವುದೇ ಸಾಲದ ಮೇಲಿನ ಬಡ್ಡಿ ದರ ಏರಿಕೆಗೆ ಕಾರಣವಾಗಲಿದೆ.

ಅಕ್ಟೋಬರ್ 2013ರಿಂದ ಇದೇ ಪ್ರಥಮ ಬಾರಿಗೆ ಈ ರೀತಿ ರೆಪೊ ರೇಟ್ ಏರಿಕೆಯಾಗಿದೆ.  ಹೆಚ್ಚುತ್ತಿರುವ ಕಚ್ಛಾ ತೈಲ ಬೆಲೆ, ಜಾಗತಿಕ ಆರ್ಥಿಕ ಮಾರುಕಟ್ಟೆಯಲ್ಲಿನ ಏರಿಳಿತ ಹಾಗೂ ಹಣದುಬ್ಬರದ ಮೇಲೆ ಕನಿಷ್ಠ ಬೆಂಬಲ ಬೆಲೆಯ ಸಂಪೂರ್ಣ ಪರಿಣಾಮದ ಬಗ್ಗೆಯಿರುವ ಅನಿಶ್ಚಿತತೆಯೇ ಈ ಏರಿಕೆಗೆ ಕಾರಣ ಎಂದು ಆರ್‍ ಬಿಐ ಹೇಳಿದೆ.

ಈ ಬೆಳವಣಿಗೆಯಿಂದ  ಗೃಹ ಸಾಲಗಳ ಮೇಲಿನ  ಬಡ್ಡಿ ದರಗಳು ಅಲ್ಪ ಪ್ರಮಾಣದಲ್ಲಿ  ಏರಿಕೆಯಾಗಲಿದೆ.  20 ವರ್ಷಗಳ ಅವಧಿಯ ಒಂದು ವರ್ಷದ ಸಾಲಕ್ಕೆ ಶೇ 8.5 ಬಡ್ಡಿ ದರದಲ್ಲಿ ಇಎಂಐ 868 ರೂ. ಆಗುತ್ತಿದ್ದರೆ, ಈ ಬಡ್ಡಿ ದರ ಶೇ 8.75ಗೆ ಏರಿಕೆಯಾದ ಪಕ್ಷದಲ್ಲಿ ಇಎಂಐ 884 ರೂ. ಆಗಲಿದೆ.

ರೆಪೋ ರೇಟ್ ಅಂದರೆ ರಿಪರ್ಚೇಸ್ ರೇಟ್. ಮೂಲತಃ ಆರ್‍ ಬಿಐ ವಾಣಿಜ್ಯ ಬ್ಯಾಂಕುಗಳಿಗೆ ಸರಕಾರಿ ಸೆಕ್ಯುರಿಟೀಸ್ ಅಡಮಾನಕ್ಕೆ ನೀಡುವ ಸಾಲ ಇದಾಗಿದ್ದು  ಬ್ಯಾಂಕುಗಳಿಗೆ ಅಗತ್ಯ ಬಿದ್ದಾಗಲೆಲ್ಲಾ ಹೀಗೆ ಸಾಲ ಪಡೆಯುತ್ತವೆ.  ಈ ಸಾಲಗಳು ಸಾಮಾನ್ಯವಾಗಿ ಎರಡು ವಾರಗಳ ಮಟ್ಟಿಗೆ ಪಡೆಯಲಾಗುತ್ತದೆ. ಹೀಗೆ ಆರ್‍ ಬಿಐ ಈ ರೆಪೊ ರೇಟ್ ಹೆಚ್ಚಿಸಿದಾಗಲೆಲ್ಲಾ ಬ್ಯಾಂಕುಗಳು ಆ ಹೊರೆಯನ್ನು ಗ್ರಾಹಕರಿಗೆ ಸಾಗಿಸುತ್ತದೆ.

ಮೋದಿ ಸರಕಾರ ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ಜನವರಿ 2014ರಲ್ಲಿ ಕಡೆಯ ಬಾರಿ ರೆಪೊ ರೇಟ್ ಏರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News