ಬಿಜೆಪಿ ಶಾಸಕನ ಪತ್ನಿ ಸೇರಿ ಹಲವು ಹಿಂದೂಗಳ ಹೆಸರು ಪಟ್ಟಿಯಲ್ಲಿಲ್ಲ!

Update: 2018-08-01 11:10 GMT

ಹೊಸದಿಲ್ಲಿ,ಆ.1: ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಝನ್ಸ್ ನ ಕರಡು ಪ್ರತಿಯಲ್ಲಿ ತಮ್ಮ ಹೆಸರುಗಳಿಲ್ಲದೇ ಇರುವುದು ಅಸ್ಸಾಂ ರಾಜ್ಯದ ಹಲವು ಕುಟುಂಬಗಳಿಗೆ ಆಘಾತ ತಂದಿದೆ. ಮಾಜಿ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರ ಕೆಲ ಸಂಬಂಧಿಕರ ಹೆಸರುಗಳೂ ಈ ಪಟ್ಟಿಯಲ್ಲಿಲ್ಲ. “ನಮಗೆ ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸಲು ಆಗಿರಲಿಲ್ಲ” ಎಂದು  ಫಕ್ರುದ್ದೀನ್ ಅಲಿ ಅವರ ಮರಿ ಸೋದರಳಿಯ ಸಾಜಿದ್ ಅಲಿ ಅಹ್ಮದ್ ಹೇಳುತ್ತಾರೆ. 

ರಂಗಿಯಾದಲ್ಲಿ  ನೆಲೆಸಿರುವ ಅವರ ಕುಟುಂಬದ ನಾಲ್ಕು ಸದಸ್ಯರ ಹೆಸರುಗಳು 1951ರ ಎನ್‍ಆರ್ ಸಿ ಹಾಗೂ ಮಾರ್ಚ್ 25, 1971ರ ತನಕದ ಮತದಾರರ ಪಟ್ಟಿಯಲ್ಲಿ ಕಾಣಿಸದೇ ಇದ್ದುದರಿಂದ ಅವರಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿರಲಿಲ್ಲ. “ಇದಲ್ಲದೇ ಹೋದರೂ ಬೇರೆ ದಾಖಲೆಗಳು ಸಲ್ಲಿಸಬಹುದೆಂದು ನಮಗೆ ತಿಳಿದು ಬಂದಿದ್ದರೂ ಅಷ್ಟೊತ್ತಿಗಾಗಲೇ ಬಹಳ ತಡವಾಗಿತ್ತು” ಎಂದು ಸಾಜಿದ್ ಹೇಳುತ್ತಾರೆ. ಅವರ ಮುತ್ತಾತ ಇಕ್ರಮುದ್ದೀನ್ ಅಲಿ ಅಹ್ಮದ್ ಅವರು ಮಾಜಿ ರಾಷ್ಟ್ರಪತಿಯ ಸೋದರನಾಗಿದ್ದರು. ಈಗ ಅಗತ್ಯ ದಾಖಲೆಗಳನ್ನು ಸಲ್ಲಿಸುವುದಾಗಿ ಕುಟುಂಬ ತಿಳಿಸಿದೆ.

ಹಲವಾರು ಹಿಂದೂ ಬಂಗಾಳಿಗಳ ಹೆಸರುಗಳೂ ಪಟ್ಟಿಯಲ್ಲಿಲ್ಲ. ಸಿಲ್ಚರ್ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಅಸ್ಸಾಂ ವಿಧಾನಸಭೆಯ ಮಾಜಿ ಸ್ಪೀಕರ್  ದಿಲೀಪ್ ಕುಮಾರ್ ಪಾಲ್ ಅವರ ಪತ್ನಿಯ ಹೆಸರು ಕೂಡ ಪಟ್ಟಿಯಲ್ಲಿಲ್ಲ. ಸಾವಿರಾರು ಇತರ ಹಿಂದುಗಳಂತೆ ಪಾಲ್ ಅವರ ಕುಟುಂಬ ಕೂಡ ಹಿಂದಿನ ಪೂರ್ವ ಪಾಕಿಸ್ತಾನದ ಬರಕ್ ಕಣಿವೆಯಿಂದ ದೌರ್ಜನ್ಯಕ್ಕೆ ಹೆದರಿ ದೇಶ ವಿಭಜನೆಯ ನಂತರ ಭಾರತಕ್ಕೆ ಆಗಮಿಸಿತ್ತು. ತಮ್ಮ ಪತ್ನಿ ಅಗತ್ಯವಾದ ಎಲ್ಲಾ ದಾಖಲೆಗಳನ್ನೂ ಸಲ್ಲಿಸಿದ್ದರು ಎಂದು ಅವರು ಹೇಳುತ್ತಾರೆ.

ಗುವಹಾಟಿಯ ಪಾಂಡು ಎಂಬಲ್ಲಿನ ಬಸಂತಿ ದಾಸ್ ಅವರ ಕುಟುಂಬದ ಸದಸ್ಯರ ಹೆಸರುಗಳೂ ಪಟ್ಟಿಯಲ್ಲಿಲ್ಲ. 1956ರಲ್ಲಿ ತಮ್ಮ ಪತಿಗೆ ನೀಡಲಾಗಿದ್ದ ನಿರಾಶ್ರಿತರ ರಿಜಿಸ್ಟ್ರೇಶನ್ ಕಾರ್ಡ್ ಅನ್ನು ದಾಖಲೆಯಾಗಿ ಸಲ್ಲಿಸಲಾಗಿತ್ತು. ಬಸಂತಿ, ಆಕೆಯ ಪುತ್ರಿ, ಪುತ್ರ ಹಾಗೂ ಅವರ ಮೂರು ಮಕ್ಕಳ ಹೆಸರುಗಳು ಪಟ್ಟಿಯಲ್ಲಿ ಕಾಣಿಸಿದೇ ಇದ್ದರೆ ಆಕೆಯ ಪತಿಯ ಇತರ ಕುಟುಂಬಸ್ಥರ ಹೆಸರುಗಳಿವೆ.

ಪಾಂಡು ಪ್ರದೇಶದ ಜನರು ಸಲ್ಲಿಸಿದ್ದ 51,000 ಅರ್ಜಿಗಳ ಪೈಕಿ ಶೇ 20ರಷ್ಟು ಜನರ ಹೆಸರುಗಳು ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ ಎಂದು ಅಲ್ಲಿನ ಅಧಿಕಾರಿಯೊಬ್ಬರು ಹೇಳುತ್ತಾರೆ. ಮುಸ್ಲಿಮರು ಮಾತ್ರವಲ್ಲದೆ ಬಂಗಾಳಿಗಳು, ಹಿಂದುಗಳು ಹಾಗೂ ಬಿಹಾರಿಗಳ ಹೆಸರುಗಳೂ ಪಟ್ಟಿಯಲ್ಲಿಲ್ಲ ಎಂದು ಅವರು ವಿವರಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News