ಜಾತಿಯ ಗಡಿ ಮೀರಿ ಭಾಷೆ ಬೆಳೆಯಬೇಕು: ಜೆ.ಎನ್.ಯು ಪ್ರಾಧ್ಯಾಪಕ ಡಾ.ಪುರುಷೋತ್ತಮ ಬಿಳಿಮಲೆ ಕರೆ

Update: 2018-08-01 11:48 GMT

ಮಡಿಕೇರಿ, ಆ.1: ಭಾಷೆಗಳು ಜಾತಿಯ ಚೌಕಟ್ಟು ಮೀರಿ ಬೆಳೆದಾಗ ವಿಶಾಲ ಮತ್ತು ವಿಸ್ತಾರವಾಗುತ್ತದೆ. ಅರೆಭಾಷೆ ಕೂಡ ಜಾತಿಯ ಗಡಿ ರೇಖೆಯನ್ನು ಮೀರಿ ಬೆಳೆಯಬೇಕು ಎಂದು ನವದೆಹಲಿಯ ಜವಹಾರ್ ಲಾಲ್ ನೆಹರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕ ಡಾ. ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸುಳ್ಯದ ಕೆವಿಜಿ ಕಾನೂನು ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದ ಅರೆಭಾಷೆ ಲಿಪಿ, ವ್ಯಾಕರಣ ಮತ್ತು ಸಬಲೀಕರಣ ಗೋಷ್ಠಿಯಲ್ಲಿ ಅವರು ಮಾತನಾಡಿದರು.ಅರೆಭಾಷೆಯಂತಹ ಸಣ್ಣ ಭಾಷೆಯನ್ನು ದೇಶದ ಜನಗಣತಿಯ ಸಂದರ್ಭದಲ್ಲಿರಿಸಿ ಚರ್ಚಿಸುವುದರ ಮೂಲಕ ಸಣ್ಣ ಭಾಷೆಗಳ ಸಬಲೀಕರಣ ಆಗಬೇಕು. ಪ್ರತಿ ಐದು ವರ್ಷಗಳಿಗೊಮ್ಮೆ ಜನಗಣತಿ ನಡೆಯಬೇಕು ಎಂದ ಅವರು ಅರೆಭಾಷೆಯ ಕೆಲವು ಅತ್ಯುತ್ತಮ ಪದಗಳು ಸುಳ್ಯ ಪರಿಸರದ ಸ್ಥಳನಾಮಗಳಲ್ಲಿ ಇನ್ನೂ ಉಳಿದುಕೊಂಡು ಬಂದಿದೆ. ಈ ಸ್ಥಳನಾಮಗಳ ಸಾಂಸ್ಕೃತಿಕ ಪದಕೋಶ ತಯರಾಗಬೇಕು ಎಂದರು.

ಪ್ರೊ. ಕೋಡಿ ಕುಶಾಲಪ್ಪ ಗೌಡರ ಸಾಹಿತ್ಯ ಅವಲೋಕನ

ಆಶಯ ಭಾಷಣಗೈದ ಭಾಷಾ ವಿಜ್ಞಾನಿ, ಪ್ರೊ.ಕೋಡಿ ಕುಶಾಲಪ್ಪ ಗೌಡ ಮಾತನಾಡಿ, ಅರೆಭಾಷೆ ಬೇರೆ ಬೇರೆ ಪ್ರದೇಶಗಳಲ್ಲಿ ವಿಸ್ತಾರಗೊಂಡಿದೆ. ಆಯಾ ಪ್ರದೇಶಗಳ ಭಾಷಾ ವೈವಿಧ್ಯತೆ, ಶಬ್ಧಗಳನ್ನು ಸಂಗ್ರಹಿಸಿ ದಾಖಲಿಸುವ ಮತ್ತು ಅಧ್ಯಯನ ನಡೆಸುವ ಕಾರ್ಯಕ್ರಮ ನಡೆಯಬೇಕು. ಈ ನಿಟ್ಟಿನಲ್ಲಿ ಲಿಪಿ ಸಬಲೀಕರಣ ಉತ್ತಮ ಕಾರ್ಯ ಎಂದರು.

ಅರೆಭಾಷೆ ಅಕಾಡೆಮಿ ಅಧ್ಯಕ್ಷ ಪಿ.ಸಿ. ಜಯರಾಂ ಮಾತನಾಡಿ, ಅಕಾಡೆಮಿ ಸ್ಥಾಪನೆಯಿಂದ ಅರೆಭಾಷೆಗೆ ಬದ್ಧತೆ ಮತ್ತು ದಕ್ಷತೆ ಬಂದಿದೆ. ಮುಂದೆ ಅರೆಭಾಷೆ ಕಲಾ ಗ್ರಾಮ ಸ್ಥಾಪನೆ, ಇನ್ನಷ್ಟು ಕೃತಿಗಳ ಬಿಡುಗಡೆ, ನೃತ್ಯ ತಂಡ ರಚನೆ, ಅರೆಭಾಷೆ ಸಾಹಿತ್ಯ ಸಮ್ಮೇಳನ ನಡೆಸುವ ಯೋಚನೆ ಇದೆ ಎಂದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಭಾಷೆ ಲಿಪಿ, ವ್ಯಾಕರಣ ಮತ್ತು ಭಾಷಾ ಸಬಲೀಕರಣ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಪ್ರೊ. ಕೋಡಿ ಕುಶಾಲಪ್ಪ ಗೌಡರ ಸಾಹಿತ್ಯ ಕೊಡುಗೆಯ ಅವಲೋಕನ ಕಾರ್ಯಕ್ರಮವನ್ನು ಅರೆಭಾಷೆ ಅಕಾಡೆಮಿಯ ಮಾಜಿ ಅಧ್ಯಕ್ಷ ಎನ್.ಎಸ್.ದೇವಿಪ್ರಸಾದ್ ಸಂಪಾಜೆ ಉದ್ಘಾಟಿಸಿದರು.

ಅಕಾಡೆಮಿ ಸದಸ್ಯರು ಮತ್ತು ಕಾರ್ಯಕ್ರಮ ಸಂಚಾಲಕರು ಎ.ಕೆ. ಹಿಮಕರ ಸ್ವಾಗತಿಸಿ, ಪ್ರಸ್ತಾವನೆಗೈದು, ಕೆ.ಟಿ.ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿದರು. ಸದಸ್ಯರಾದ ಚಿದಾನಂದ ಬೈಲಾಡಿ, ಬಾರಿಯಂಡ ಜೋಯಪ್ಪ, ಕುಂಬುಗೌಡನ ಪ್ರಸನ್ನ, ದಿನೇಶ್ ಹಾಲೆಮಜಲು, ಬೇಕಲ್ ದೇವರಾಜ್, ಕಡ್ಲೇರ ತುಳಸಿ ಮೋಹನ್, ಸುರೇಶ್ ಎಂ.ಎಚ್.ಕಾನೆಹಿತ್ಲು ಮೊಣ್ಣಪ್ಪ ಉಪಸ್ಥಿತರದ್ದರು. ದಿನೇಶ್ ಹಾಲೆಮಜಲು ವಂದಿಸಿದರು.

ಅಪರಾಹ್ನ ಪ್ರೊ.ಕೋಡಿ ಕುಶಾಲಪ್ಪ ಗೌಡರ ಬರಹ ಅವಲೋಕನ-ಭಾಷೆ, ಅಧ್ಯಯನ, ಅಭಿವ್ಯಕ್ತಿ ಕುರಿತು ವಿಚಾರಗೋಷ್ಠಿ ನಡೆಯಿತು. ಸಾಹಿತಿ ಮತ್ತು ಸಂಶೋಧಕ ಡಾ. ಕೆ.ಚಿನ್ನಪ್ಪ ಗೌಡ, ಡಾ. ಹರಿಕೃಷ್ಣ ಭರಣ್ಯ, ಪ್ರತಿಭಾ ನಂದಕುಮಾರ್ ವಿಚಾರ ಮಂಡಿಸಿದರು. ಸಾಹಿತಿ, ಸಂಶೋಧಕ ಡಾ.ಬಿ.ಎ. ವಿವೇಕ ರೈ ಅಧ್ಯಕ್ಷತೆ ವಹಿಸಿದ್ದರು.

ಸಮಾರೋಪ ಸಮಾರಂಭದಲ್ಲಿ ಪ್ರೊ.ಕೋಡಿ ಕುಶಾಲಪ್ಪ ಗೌಡರ ಅರೆಭಾಷೆ ಧ್ವನಿಮಾಶಾಸ್ತ್ರ ಲಿಪಿಯ ತರಬೇತು ಶಿಬಿರ ಸಾಂಕೇತಿಕ ಆರಂಭ ಮತ್ತು ಕೋಡಿ ಕುಶಾಲಪ್ಪ ಗೌಡರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು. ಅಕಾಡೆಮಿ ರಿಜಿಸ್ಟ್ರಾರ್ ಉಮ್ಮರಬ್ಬ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News