ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಕೆ.ಎಂ.ಜೋಸೆಫ್ ಪದೋನ್ನತಿ: ಕೇಂದ್ರ ಅನುಮತಿ

Update: 2018-08-04 06:23 GMT

 ಹೊಸದಿಲ್ಲಿ, ಆ. 3: ಸರ್ವೋಚ್ಚ ನ್ಯಾಯಾಲಯ ಶಿಫಾರಸು ಮಾಡಿದ 7 ತಿಂಗಳ ಬಳಿಕ ಕೇಂದ್ರ ಸರಕಾರ ಶುಕ್ರವಾರ ಉತ್ತರಾಖಂಡ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರನ್ನು ಸುಪ್ರೀಂಕೋರ್ಟ್‌ಗೆ ಪದೋನ್ನತಿಗೊಳಿಸಲು ಅನುಮತಿ ನೀಡಿದೆ. ಮದ್ರಾಸ್ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಹಾಗೂ ಒರಿಸ್ಸಾ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ವಿನೀತ್ ಸರಣ್ ಅವರೊಂದಿಗೆ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರನ್ನು ಸುಪ್ರೀಂಕೋರ್ಟ್‌ಗೆ ಪದೋನ್ನತಿಗೆ ಕೇಂದ್ರ ಸರಕಾರ ಅನುಮತಿ ನೀಡಿದೆ. 2018 ಜನವರಿ 10ರಂದು ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಜೆ. ಚಲಮೇಶ್ವರ್, ರಂಜನ್ ಗೊಗೋಯ್, ಮದನ್ ಬಿ. ಲೋಕುರ್ ಹಾಗೂ ಕುರಿಯನ್ ಜೋಸೆಪ್ ಅವರನ್ನು ಒಳಗೊಂಡ ಐವರು ಸದಸ್ಯರ ಸುಪ್ರೀಂ ಕೋರ್ಟ್‌ನ ಕೊಲೀಜಿಯಂ ಹಿರಿಯ ನ್ಯಾಯವಾದಿ ಹಾಗೂ ಪ್ರಸ್ತುತ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಆಗಿರುವ ಇಂದು ಮಲ್ಹೋತ್ರ ಅವರೊಂದಿಗೆ ಕೆ.ಎಂ. ಜೋಸೆಫ್ ಅವರ ಹೆಸರನ್ನು ಮೊದಲ ಭಾರಿಗೆ ಶಿಫಾರಸು ಮಾಡಿತ್ತು. ಕೇಂದ್ರ ಸರಕಾರ ಇಂದು ಮಲ್ಹೋತ್ರ ಅವರ ಹೆಸರನ್ನು ಅನುಮೋದಿಸಿತ್ತು. ಆದರೆ, ಕೆ.ಎಂ. ಜೋಸೆಫ್ ಅವರ ಹೆಸರನ್ನು ತಡೆ ಹಿಡಿದಿತ್ತು. ಎಪ್ರಿಲ್ 30ರಂದು ಶಿಫಾರಸನ್ನು ಮರು ಪರಿಶೀಲಿಸಲು ಕೊಲೀಜಿಯಂಗೆ ಹಿಂದೆ ಕಳುಹಿಸಿತ್ತು ಹಾಗೂ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರಿಗೆ ಹಿರಿತನದ ಕೊರತೆ ಇದೆ ಎಂದು ತನ್ನ ಆಕ್ಷೇಪವನ್ನು ಉಲ್ಲೇಖಿಸಿತ್ತು. ಅಖಿಲ ಭಾರತ ಹಿರಿಯ ನ್ಯಾಯಮೂರ್ತಿಗಳ ಪಟ್ಟಿಯಲ್ಲಿ ಕೆ.ಎಂ. ಜೋಸೆಫ್ ಅವರ ಹೆಸರು ಇದೆ. ಅವರಿಗೆ ಪದೋನ್ನತಿ ನೀಡದರೆ, ಇತರ ಹಲವು ನ್ಯಾಯಮೂರ್ತಿಗಳನ್ನು ಕಡೆಗಣಿಸಿದಂತಾಗುತ್ತದೆ. ಇದರಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕವಾಗುವ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ನ್ಯಾಯೋಚಿತ ನಿರೀಕ್ಷೆ ಹುಸಿಯಾಗುತ್ತದೆ ಎಂದು ಕೇಂದ್ರ ಸರಕಾರ ಹೇಳುವ ಮೂಲಕ ಕೆ.ಎಂ. ಜೋಸೆಫ್ ಅವರ ಪದೋನ್ನತಿಗೆ ಆಕ್ಷೇಪ ವ್ಯಕ್ತಪಡಿಸಿತ್ತು.

ಆದಾಗ್ಯೂ, ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರ ಹೆಸರನ್ನು ಶಿಫಾರಸು ಮಾಡುವ ತನ್ನ ನಿರ್ಧಾರವನ್ನು ಕೊಲೀಜಿಯಂ ಮೇ 16ರಂದು ಸರ್ವಸಮ್ಮತವಾಗಿ ಪುನರುಚ್ಚರಿಸಿತ್ತು. ಆದರೆ, ಸರಕಾರಕ್ಕೆ ಹೆಸರು ಕಳುಹಿಸಿರಲಿಲ್ಲ. ಆ ಸಂದರ್ಭದಲ್ಲಿ 6 ಹುದ್ದೆಗಳು ಖಾಲಿ ಇರುವುದರಿಂದ ಸರ್ವೋಚ್ಚ ನ್ಯಾಯಾಲಯಕ್ಕೆ ಇನ್ನಷ್ಟು ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕೊಲೀಜಿಯಂ ಬಯಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News