ಚಿಕ್ಕಮಗಳೂರು: ಉಪನ್ಯಾಸಕರ ವರ್ಗಾವಣೆ ರದ್ದುಗೊಳಿಸಲು ಒತ್ತಾಯಿಸಿ ವಿದ್ಯಾರ್ಥಿಗಳಿಂದ ಧರಣಿ

Update: 2018-08-04 11:55 GMT

ಚಿಕ್ಕಮಗಳೂರು, ಆ.4: ಬೇಲೂರು ರಸ್ತೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕೆ.ಆರ್.ಶಿವಕುಮಾರ್ ಅವರ ಕಡ್ಡಾಯ ವರ್ಗಾವಣೆಯನ್ನು ರದ್ದುಗೊಳಿಸುವಂತೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಶನಿವಾರ ಧರಣಿ ನಡೆಸಿ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ವಿದ್ಯಾರ್ಥಿನಿ ಚಿನ್ಮಯ ಮಾತನಾಡಿ, ನಮ್ಮ ಕಾಲೇಜಿನ ಕನ್ನಡ ಉಪನ್ಯಾಸಕ ಕೆ.ಆರ್.ಶಿವಕುಮಾರ್ ರವರ ಕಡ್ಡಾಯ ವರ್ಗಾವಣೆಯ ಕಾರಣದಿಂದ ಕಾಲೇಜಿನಲ್ಲಿರುವ ನೂರಾರು ಬಡ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತದೆ. ಅವರು 1ಎಚ್, 2ಜಿ, 2ಬಿ ಮುಂತಾದ ತರಗತಿಗಳಿಗೂ ಉಪನ್ಯಾಸ ಮಾಡುತ್ತಿದ್ದು, ಅವರ ವರ್ಗಾವಣೆಯಿಂದ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳು ಅತ್ಯುತ್ತಮ ಶಿಕ್ಷಣ ಮತ್ತು ಪಾಠ ಪ್ರವಚನದಿಂದ ವಂಚಿತರಾಗುತ್ತಾರೆ ಎಂದರು.

ಈ ಶೈಕ್ಷಣಿಕ ವರ್ಷದ ಮದ್ಯದಲ್ಲಿ ಅವರ ಕಡ್ಡಾಯ ವರ್ಗಾವಣೆಯು ನೂರಾರು ವಿದ್ಯಾರ್ಥಿಗಳ ಶಿಕ್ಷಣ ಭವಿಷ್ಯದ ಮೇಲೆ ಪರಿಣಾಮವಾಗುವುದರಿಂದ ಅವರ ಕಡ್ಡಾಯ ವರ್ಗಾವಣೆಯನ್ನು ರದ್ದುಗೊಳಿಸಬೇಕಾಗಿ ಮನವಿ ಮಾಡಿಕೊಳ್ಳುತ್ತೇವೆ ಎಂದರು.

ವಿದ್ಯಾರ್ಥಿಗಳು ಕಾಲೇಜು ಆವರಣದಿಂದ ಪದವಿ ಪೂರ್ವ ಉಪನಿರ್ದೇಶಕರ ಕಚೇರಿವರೆಗೆ ಮೆರವಣಿಗೆ ನಡೆಸಿ ಮನವಿ ನೀಡಿದರು. ವಿದ್ಯಾರ್ಥಿಗಳಾದ ಗಾನವಿ, ಗಾಯಿತ್ರಿ, ಜಸಂತಾ, ನಿತಿನ್, ಹರ್ಷ, ಹರೀಶ್, ಕೀರ್ತಿರಾಜ್, ಜೀವನ್, ಕುಮಾರ್, ವಿವೇಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News