ಸೊರಬ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಧರಣಿ

Update: 2018-08-04 12:05 GMT

ಸೊರಬ,ಆ.04: ಬಿಸಿಯೂಟ ತಯಾರಕರಿಗೆ ರಾಜ್ಯ ಸರ್ಕಾರ 10,500 ರೂ. ಕನಿಷ್ಠ ವೇತನ ಜಾರಿಗೆ ತರಬೇಕು ಮತ್ತು ಕೆಲಸದ ಭದ್ರತೆ, ಜೀವನ ಭದ್ರತೆಗಾಗಿ ತಮಿಳುನಾಡು ಮಾದರಿಯಲ್ಲಿ ಸವಲತ್ತುಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿ ತಾಲೂಕು ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‍ನಿಂದ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು.

ಶನಿವಾರ ಪಟ್ಟಣದಲ್ಲಿ ಶ್ರೀ ರಂಗನಾಥ ದೇವಸ್ಥಾನದಿಂದ ಮುಖ್ಯರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ರಿಗೆ ಮನವಿ ಸಲ್ಲಿಸಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಮೇಶ್ವರ ಕೆ ಹೊಸಕೊಪ್ಪ ಮಾತನಾಡಿದರು. ಕರ್ನಾಟಕ ರಾಜ್ಯದ ಪ್ರಾಥಮಿಕ ಮತ್ತು ಫ್ರೌಢಶಾಲೆಗಳಲ್ಲಿ ಕಳೆದ 16 ವರ್ಷಗಳಿಂದ ಅಕ್ಷರ ದಾಸೋಹ ಬಿಸಿಯೂಟ ಯೋಜನೆಯಲ್ಲಿ ಮುಖ್ಯ ಅಡುಗೆಯವರಾಗಿ ಮತ್ತು ಸಹಾಯಕ ಅಡುಗೆಯವರಾಗಿ 1 ಲಕ್ಷದ 18 ಸಾವಿರ ಜನ ಮಹಿಳೆಯರು  ದುಡಿಯುತ್ತಿದ್ದಾರೆ. ಯೋಜನೆಯಲ್ಲಿ ದುಡಿಯುತ್ತಿರುವ ಬಿಸಿಯೂಟ ತಯಾರಕರರಿಗೆ ಯಾವುದೇ ರೀತಿಯ ಕೆಲಸ ಭದ್ರತೆಯಾಗಲೀ, ಜೀವನ ಭದ್ರತೆಯಾಗಲೀ, ನಿವೃತ್ತಿ ವೇತನವಾಗಲೀ, ಸಾವು ನೋವಿಗೆ ಪರಿಹರವಾಗಲಿ ಸರ್ಕಾರದಿಂದ ಇದುವರೆಗೂ ದೊರೆತಿಲ್ಲ ಎಂದು ಆರೋಪಿಸಿದರು. 

ಪ್ರತಿಭಟನಾ ಮೆರವಣಿಗೆಯಲ್ಲಿ ಫೆಡರೇಷನ್‍ ಜಿಲ್ಲಾ ಉಪಾಧ್ಯಕ್ಷ ಬಸವರಾಜ್ ಹಿರೇಮಠ್ ಕೆರೆಹಳ್ಳಿ, ಜಿಲ್ಲಾ ಪ್ರಧಾನ ಕಾರ್ಯದಶಿ ಪರಮೇಶ್ವರ ಕೆ ಹೊಸಕೊಪ್ಪ, ಖಜಾಂಜಿ ಉಮಾ ಕರಡಿಗೆರೆ, ತಾಲೂಕು ಸಂಚಾಲಕಿ ಗೌರಮ್ಮ ವಿಟ್ಲಾಪುರ, ಚಿಕ್ಕ ಚೌಟಿ ಶಿವಲೀಲಾ, ಜಯಮ್ಮ ತಲ್ಲೂರು, ಅಗಸನಹಳ್ಳಿ ಲಲಿತಮ್ಮ ಮತ್ತಿರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News