ಬಾಗೇಪಲ್ಲಿ: ರಕ್ಷಿತಾ ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಒತ್ತಾಯಿಸಿ ಎಸ್‍ಎಫ್‍ಐ ಧರಣಿ

Update: 2018-08-04 12:11 GMT

ಬಾಗೇಪಲ್ಲಿ,ಆ.04: ಮಾಲೂರಿನ ವಿದ್ಯಾರ್ಥಿನಿ ರಕ್ಷಿತಾ ಹತ್ಯೆ ಆರೋಪಿಗೆ ಕಠಿಣ ಶಿಕ್ಷೆ, ಶಾಲಾ ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ಹಾಗೂ ವಿದ್ಯಾರ್ಥಿನಿಯ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಎಸ್‍ಎಫ್ ಐ ತಾಲೂಕು ಸಮಿತಿಯ ನೇತೃತ್ವದಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.

ಡಾ.ಎಚ್.ಎನ್.ವೃತ್ತದಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಬಂದ ವಿದ್ಯಾರ್ಥಿಗಳು ಮತ್ತು ಎಸ್.ಎಫ್.ಐ ಕಾರ್ಯಕರ್ತರು ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಎಸ್.ಎಫ್.ಐ ರಾಜ್ಯ ಸಮಿತಿ ಸದಸ್ಯ ಸೋಮಶೇಖರ್, ರಾಜ್ಯದಲ್ಲಿ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿನಿಯರಿಗೆ ರಕ್ಷಣೆ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ದೇಶದಲ್ಲಿ ಮಹಿಳೆಯರನ್ನು ಗೌರವದಿಂದ ನೋಡಿ, ಅವರಿಗೆ ದೇವರ ಸ್ಥಾನವನ್ನು ಕಲ್ಪಿಸಿದ್ದೇವೆ. ಇಂತಹ ದೇಶದಲ್ಲಿ ಮಹಿಳೆಯರ ಹಾಗೂ ವಿದ್ಯಾರ್ಥಿನಿಯರ ಮೇಲೆ ಪ್ರತಿ ದಿನ ನಡೆಯುವ ವಿವಿಧ ರೀತಿಯ ದೌರ್ಜನ್ಯಗಳಿಂದ ಇಡೀ ದೇಶದ ಜನ ತಲೆ ತಗ್ಗಿಸುವಂತಾಗಿದೆ. ಇತ್ತೀಚಿನ ದಿನಗಳಲ್ಲಿ ಲೈಂಗಿಕ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ಕಾವ್ಯ, ದಾನಮ್ಮ ರವರ ಪ್ರಕರಣಗಳು ಇದಕ್ಕೆ ನಿದರ್ಶನ. ಕಳೆದ ಎರಡು ದಿನಗಳ ರಕ್ಷಿತಾಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ಹಾಗೂ ಬಾಗೇಪಲ್ಲಿ ತಾಲೂಕಿನ ಸೋಮನಾಥಪುರದ ಮಮತಾ ವಿಷ ಸೇವೇಸಿ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿವೆ. ಶಾಲಾ-ಕಾಲೇಜುಗಳಿಗೆ ಹೋಗುತ್ತಿರುವ ವಿದ್ಯಾರ್ಥಿನಿಗಳ ಮೇಲೆ ನಡೆಯುವ ಈ ರೀತಿಯ ದೌರ್ಜನ್ಯಗಳಿಗೆ ಕಡಿವಾಣ ಹಾಕಲು ಬಸ್ ನಿಲ್ದಾಣಗಳಲ್ಲಿ, ವಿದ್ಯಾರ್ಥಿನಿಯರು ಓಡಾಡುವ ಸ್ಥಳಗಳಲ್ಲಿ ಸಿಸಿ ಕ್ಯಾಮರಗಳನ್ನು ಅಳವಡಿಸಿ ಹೆಚ್ಚಿನ ಭದ್ರತೆ ಒದಗಿಸಬೇಕಾಗಿದೆ ಎಂದ ಅವರು, ರಕ್ಷಿತಾಳನ್ನು ಹತ್ಯೆ ಮಾಡಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಹಾಗೂ ಕುಟುಂಭದವರಿಗೆ ಸೂಕ್ತ ಪರಿಹಾರವನ್ನು ನೀಡುವಂತೆ ಒತ್ತಾಯಿಸಿದರು.

ಈ ಸಂದರ್ಭ ರಾಜ್ಯ ಸಮಿತಿ ಸದಸ್ಯ ವೈ.ಎನ್.ರಮೇಶ್, ತಾಲೂಕು ಅಧ್ಯಕ್ಷ ವಿ.ಸತೀಷ್, ಪ್ರಧಾನ ಕಾರ್ಯದರ್ಶಿ ದಿವಾಕರ್, ಕಾರ್ಯದರ್ಶಿ ಪವನ್ ಕುಮಾರ್, ವಿದ್ಯಾರ್ಥಿನಿಯರ ಕಾರ್ಯದರ್ಶಿ ಆಶಿಯಾ, ಮುಖಂಡರಾದ ಮಂಜುನಾಥ್, ವಿಜಯರಾಘವರೆಡ್ಡಿ, ಚಂದ್ರಶೇಖರ್, ಶ್ವೇಥ, ಮಂಜುಳಾ, ಗಾಯಾತ್ರಿ, ಚಂದನಾ, ನಂದಿನಿ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News