ತುಮಕೂರು: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬಿಸಿಯೂಟ ನೌಕರರಿಂದ ಧರಣಿ

Update: 2018-08-04 13:31 GMT

ತುಮಕೂರು,ಆ.04: ಬಿಸಿಯೂಟ ತಯಾರಕರಿಗೆ ಕನಿಷ್ಠ 10,500 ರೂ ಕನಿಷ್ಠ ವೇತನ ನೀಡಬೇಕು, ಸೇವಾ ಭದ್ರತೆಯ ಜೊತೆಗೆ ತಮಿಳುನಾಡು ರೀತಿಯಲ್ಲಿ ಸರಕಾರಿ ನೌಕರರೆಂದು ಪರಿಗಣಿಸಿ ಸವಲತ್ತು ನೀಡಬೇಕೆಂದು ಆಗ್ರಹಿಸಿ ಶನಿವಾರ ಬಿಸಿಯೂಟ ನೌಕರರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಎಐಟಿಯುಸಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‍ನ ನೂರಾರು ಕಾರ್ಯಕರ್ತರು ಟೌನ್‍ಹಾಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಹಲವು ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಆರ್ಪಿಸಿದರು.

ನಗರದ ಟೌನ್‍ಹಾಲ್‍ನಲ್ಲಿ ಸಮಾವೇಶಗೊಂಡ ಬಿಸಿಯೂಟ ತಯಾರಕರನ್ನು ಉದ್ದೇಶಿಸಿ ಮಾತನಾಡಿದ ಎಐಟಿಯುಸಿ ರಾಜ್ಯ ಕಾರ್ಯಕಾರಣಿ ಮಂಡಳಿ ಸದಸ್ಯ ಎನ್.ಶಿವಣ್ಣ, 2010 ರಿಂದ ಕೇಂದ್ರದಲ್ಲಿ ಅಧಿಕಾರ ನಡೆಸಿದ ಯಾವುದೇ ಸರಕಾರ ಬಿಸಿಯೂಟ ಸೇರಿದಂತೆ ಸ್ಕೀಂ ನೌಕರರಿಗೆ ವೇತನ ಹೆಚ್ಚಿಸಿಲ್ಲ. ಕರ್ನಾಟಕದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಸರಕಾರ ಬಿಸಿಯೂಟ ನೌಕರರ ಹೋರಾಟಕ್ಕೆ ಮಣಿದು ಮುಖ್ಯ ಅಡುಗೆಯವರಿಗೆ 2700 ರೂ ಮತ್ತು ಅಡುಗೆ ಸಹಾಯಕರಿಗೆ 2600 ರೂ ನೀಡುತ್ತಿದೆ. ರಾಜ್ಯ ಸರಕಾರವೇ ಘೋಷಣೆ ಮಾಡಿರುವಂತೆ ಬಿಸಿಯೂಟ ತಯಾರಕರಿಗೆ ಕನಿಷ್ಠ 10,500ರೂ ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದರು.

ಚುನಾವಣೆ ಪೂರ್ವದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಎಲ್ಲಾ ಸ್ಕೀಂ ನೌಕರರನ್ನು ಖಾಯಂಗೊಳಿಸುವ ಭರವಸೆ ನೀಡಿದ್ದರು. ಇದನ್ನು ಪ್ರಸ್ತಾಪಿಸಿದರೆ ಮೊದಲು ರೈತರ ಸಾಲ ಮನ್ನಾ ಎಂಬ ಸಬೂಬು ಹೇಳುತ್ತಿದ್ದಾರೆ. ಬಿಸಿಯೂಟ ನೌಕರರಾಗಿ ಕೆಲಸ ಮಾಡುತ್ತಿರುವವರು ರೈತರ,ಕೃಷಿ ಕಾರ್ಮಿಕ ಹೆಣ್ಣು ಮಕ್ಕಳೇ ಆಗಿದ್ದಾರೆ. ಆದ್ದರಿಂದ ಸರಕಾರ ಬಿಸಿಯೂಟ ನೌಕರರಿಗೆ ಆರೋಗ್ಯ ವಿಮೆ ಸೇರಿದಂತೆ ಎಲ್ಲಾ ರೀತಿ ಸವಲತ್ತು ನೀಡಬೇಕು. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ನೆಪವೊಡ್ಡಿ ನೌಕರರ ಸಂಖ್ಯೆ ಕಡಿತಗೊಳಿಸಬಾರದು ಎಂದು ಎನ್.ಶಿವಣ್ಣ ಒತ್ತಾಯಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾವೇಶಗೊಂಡ ಬಿಸಿಯೂಟ ತಯಾರಕರನ್ನು ಉದ್ದೇಶಿಸಿ ಮಾತನಾಡಿದ ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಗಿರೀಶ್, ಅಕ್ಷರ ದಾಸೋಹ ಯೋಜನೆಯಲ್ಲಿ ಕೆಲಸ ಮಾಡಿ ನಿವೃತ್ತರಾಗುವ ನೌಕರರಿಗೆ ಕನಿಷ್ಠ 2ಲಕ್ಷ ರೂ ಇಡಿಗಂಟು ನೀಡಬೇಕೆಂಬುದು ಸಂಘದ ಬೇಡಿಕೆಯಾಗಿದೆ. ಅಲ್ಲದೆ ಸಹಜ ಸಾವಿಗೆ 2 ಲಕ್ಷ ರೂ ಪರಿಹಾರ, ಅಂತ್ಯಕ್ರಿಯೆಗೆ 20 ಸಾವಿರ ರೂ ಹಾಗೂ ಮಾಸಿಕ 3000 ರೂ ಪಿಂಚಿಣಿ ನೀಡಬೇಕೆಂದು ಹಲವು ವರ್ಷಗಳಿಂದ ಆಗ್ರಹಿಸುತ್ತಾ ಬಂದಿದ್ದರೂ ಸರಕಾರ ಗಮನಹರಿಸುತ್ತಿಲ್ಲ. ಮತ್ತೊಮ್ಮೆ ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ. ಸರಕಾರ ಕಿವಿಗೊಡದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಚಳವಳಿ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಪ್ರತಿಭಟನೆಯಲ್ಲಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೇಡರೇಷನ್‍ನ ಜಿಲ್ಲಾ ಸಂಚಾಲಕರಾದ ಸತ್ಯನಾರಾಯಣ, ಕಾಂತರಾಜು, ಆಶ್ವಥನಾರಾಯಣ, ನಾಗಣ್ಣ, ವನಜಾಕ್ಷಮ್ಮ, ಉಮಾದೇವಿ, ರಾಧಮ್ಮ, ಶಶಿಕಾಂತ್ ಸೇರಿದಂತೆ ನೂರಾರು ನೌಕರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News