ಚೀನಾ: ಎತ್ತರ ಪ್ರದೇಶಗಳಲ್ಲಿ ಬಳಕೆಗೆ ಅತ್ಯಾಧುನಿಕ ರಾಕೆಟ್ ನಿರ್ಮಾಣ

Update: 2018-08-04 14:31 GMT

ಬೀಜಿಂಗ್, ಆ. 4: ಚೀನಾವು ತನ್ನ ಫಿರಂಗಿ ಘಟಕಗಳಿಗಾಗಿ ‘ಇಲೆಕ್ಟ್ರೋಮ್ಯಾಗ್ನೆಟಿಕ್ ಕ್ಯಾಟಪಲ್ಟ್’ ತಂತ್ರಜ್ಞಾನದ ರಾಕೆಟ್‌ಗಳನ್ನು ನಿರ್ಮಿಸುತ್ತಿದೆ ಹಾಗೂ ಅವುಗಳನ್ನು ಟಿಬೆಟ್ ಸ್ವಾಯತ್ತ ವಲಯ (ಟಿಎಆರ್)ದಲ್ಲಿರುವ ಎತ್ತರದ ಪ್ರದೇಶಗಳಲ್ಲಿ ನಿಯೋಜಿಸಬಹುದಾಗಿದೆ ಎಂದು ಸರಕಾರಿ ಮಾಧ್ಯಮ ವರದಿ ಮಾಡಿದೆ.

ಈ ರಾಕೆಟ್‌ಗಳನ್ನು ಭಾರತದ ವಿರುದ್ಧ ನಿಯೋಜಿಸಬಹುದಾಗಿದೆ ಎಂಬ ಸೂಚನೆಯನ್ನು ಅದು ನೀಡಿದೆ.

ನೂತನ ತಂತ್ರಜ್ಞಾನವನ್ನು ‘ಅಭೂತಪೂರ್ವ’ ಎಂಬುದಾಗಿ ಬಣ್ಣಿಸಿರುವ ವರದಿಯು, ಇಲೆಕ್ಟ್ರೋಮ್ಯಾಗ್ನೆಟಿಕ್ ಕ್ಯಾಟಪಲ್ಟ್ ಚಾಲಿತ ರಾಕೆಟ್‌ಗಳು 200 ಕಿ.ಮೀ.ಗೂ ಅಧಿಕ ದೂರದ ಗುರಿಗಳನ್ನು ನಾಶಪಡಿಸಬಲ್ಲದು ಹಾಗೂ ಅವುಗಳು ಸಾಂಪ್ರದಾಯಿಕ ಫಿರಂಗಿ ಬಂದೂಕುಗಳಿಗಿಂತ ಹೆಚ್ಚು ಶಕ್ತಿಶಾಲಿ ಮತ್ತು ಪರಿಣಾಮಕಾರಿಯಾಗಿವೆ ಎಂದಿದೆ.

ಈ ರಾಕೆಟ್‌ಗಳನ್ನು ಭಾರತದ ವಿರುದ್ಧ ನಿಯೋಜಿಸಲಾಗುತ್ತದೆ ಎಂಬುದನ್ನು ವರದಿ ನಿರ್ದಿಷ್ಟವಾಗಿ ಹೇಳಿಲ್ಲವಾದರೂ, ಈ ರಾಕೆಟನ್ನು ಅಭಿವೃದ್ಧಿಪಡಿಸುತ್ತಿರುವ ಸೇನಾ ವಿಜ್ಞಾನಿಯೊಬ್ಬರ ಮಾತುಗಳು ಈ ಸಾಧ್ಯತೆಯತ್ತ ಬೆಟ್ಟು ಮಾಡುತ್ತಿವೆ. ನೈರುತ್ಯ ಚೀನಾದ ಗಡಿ ವಲಯದಲ್ಲಿರುವ ಪ್ರಸ್ಥಭೂಮಿಯಲ್ಲಿ ಸೇನಾ ಕಾರ್ಯಾಚರಣೆಯ ಸಂದರ್ಭದಲ್ಲಿ ಈ ರಾಕೆಟ್‌ಗಳನ್ನು ಬಳಸಬಹುದಾಗಿದೆ ಎಂದು ಆ ವಿಜ್ಞಾನಿ ಹೇಳಿರುವುದನ್ನು ವರದಿ ಉಲ್ಲೇಖಿಸಿದೆ.

ಒಳಗೆ ಬಾಕ್ಸ್

ಡೋಕಾ ಲಾ ಮುಖಾಮುಖಿಯ ನೆನಪು

ಚೀನಾ ತನ್ನ ಅತ್ಯಾಧುನಿಕ ರಾಕೆಟ್‌ಗಳನ್ನು ಎಲ್ಲಿ ನಿಯೋಜಿಸಬಹುದು ಎಂಬ ಬಗ್ಗೆ ಹೆಚ್ಚಿನ ಅನುಮಾನ ಪಡುವ ಅಗತ್ಯವಿಲ್ಲ. ಕಳೆದ ವರ್ಷ ಸಿಕ್ಕಿಂ ಗಡಿ ಸಮೀಪದ ಡೋಕಾ ಲಾದಲ್ಲಿ ಭಾರತ ಮತ್ತು ಚೀನಾದ ಸೇನೆಗಳು 73 ದಿನಗಳ ಕಾಲ ಮುಖಾಮುಖಿಯಾಗಿ ನಿಂತಿದ್ದನ್ನು ಸ್ಮರಿಸಬಹುದಾಗಿದೆ.

ಭೂತಾನ್ ತನ್ನದೆಂದು ಹೇಳುತ್ತಿರುವ, ಆದರೆ ಚೀನಾದ ನಿಯಂತ್ರಣದಲ್ಲಿರುವ ಡೋಕಾ ಲಾ ಪ್ರದೇಶದಲ್ಲಿ ಚೀನಾ ಪಡೆಗಳು ಆಯಕಟ್ಟಿನ ರಸ್ತೆ ನಿರ್ಮಿಸಲು ಮುಂದಾದಾಗ ಭಾರತೀಯ ಪಡೆಗಳು ಅದನ್ನು ತಡೆದಿದ್ದವು.

73 ದಿನಗಳ ಬಳಿಕ ಉಭಯ ಸೇನೆಗಳು ಹಿಂದಕ್ಕೆ ಸರಿದು ತಾತ್ಕಾಲಿಕವಾಗಿ ಆ ಬಿಕ್ಕಟ್ಟು ನಿವಾರಣೆಯಾಗಿದ್ದರೂ, ಚೀನಾ ತನ್ನ ಪ್ರಯತ್ನಗಳನ್ನು ಮುಂದುವರಿಸುತ್ತಲೇ ಇದೆ.

ಹಾಗಾಗಿ, ಈ ವಲಯದಲ್ಲಿ ಚೀನಾ ತನ್ನ ಶಕ್ತಿಶಾಲಿ ರಾಕೆಟ್‌ಗಳನ್ನು ನಿಯೋಜಿಸುವ ಸಾಧ್ಯತೆ ಹೆಚ್ಚಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News