ಮಡಿಕೇರಿ: ದಲಿತ ಸಂಘರ್ಷ ಸಮಿತಿ ವತಿಯಿಂದ ಶಾಲಾ ಶಿಕ್ಷಕರಿಗೆ ಸನ್ಮಾನ

Update: 2018-08-04 18:33 GMT

ಮಡಿಕೇರಿ ಆ.4 : ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಗ್ರಾಮೀಣ ವಿದ್ಯಾರ್ಥಿಗಳು ಸರಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಶೈಕ್ಷಣಿಕ ಪ್ರಗತಿಯನ್ನು ಸಾಧಿಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ.ಹರೀಶ್ ಕರೆ ನೀಡಿದ್ದಾರೆ.

ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ.100 ರಷ್ಟು ಸಾಧನೆ ಮಾಡಲು ಕಾರಣಕರ್ತರಾದ ಮಕ್ಕಂದೂರು ಶಾಲಾ ಶಿಕ್ಷಕರಿಗೆ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ಶಾಲಾ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಬಿ.ಎ.ಹರೀಶ್ ಸರಕಾರಿ ಶಾಲೆಗಳು ಶಿಕ್ಷಕರ ಪರಿಶ್ರಮದಿಂದ ಉತ್ತಮ ಸಾಧನೆ ಮಾಡುತ್ತಿವೆ ಎಂದು ಶ್ಲಾಘಿಸಿದರು. ಓದಿದ ಶಾಲೆಗೆ ಮತ್ತು ವಿದ್ಯೆ ಕಲಿಸಿದ ಶಿಕ್ಷಕರುಗಳಿಗೆ ಉತ್ತಮ ನಡೆ, ನುಡಿ, ವಿದ್ಯಾರ್ಜನೆಯ ಮೂಲಕ ಗೌರವ ಸಲ್ಲಿಸಬೇಕೆಂದು ಕಿವಿಮಾತು ಹೇಳಿದರು.

ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.ಚಿದ್ವಿಲಾಸ್ ಮಾತನಾಡಿ ವಿದ್ಯಾರ್ಥಿಗಳು ಸಮಯ ಪ್ರಜ್ಞೆಯನ್ನು ಬೆಳೆಸಿಕೊಂಡಾಗ ಮಾತ್ರ ಗುರಿ ಸಾಧಿಸಲು ಸಾಧ್ಯವೆಂದು ಅಭಿಪ್ರಾಯಪಟ್ಟರು. ಜೀವನದಲ್ಲಿ ಸಮಯ ಅತ್ಯಂತ ಅಮೂಲ್ಯವಾದದ್ದು, ವಿದ್ಯಾರ್ಥಿಗಳು ಯಾವುದೇ ಕಾರ್ಯವನ್ನು ಒತ್ತಾಯ ಪೂರ್ವಕವಾಗಿ ಮಾಡಬಾರದು. ಅದರಿಂದ ಪರಿಪೂರ್ಣತೆಯನ್ನು ಸಾಧಿಸಲು ಸಾಧ್ಯವಿಲ್ಲವೆಂದರು. 

ಯಾವುದಾದರೊಂದು ವಿಷಯವನ್ನು ಗುರಿಯಾಗಿಟ್ಟುಕೊಂಡು ಅದನ್ನು ಆಸಕ್ತಿಯಿಂದ ನಿಭಾಯಿಸಿದಾಗ ಮಾತ್ರ್ರ ಆ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವೆಂದರು. ಶಿಕ್ಷಕರು ಅತ್ಯಂತ ಸೂಕ್ಷ್ಮ ಮತ್ತು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ, ಅದಕ್ಕೆ ಪೂರಕವಾಗಿ ವಿದ್ಯಾರ್ಥಿಗಳು ಕೂಡ ಶ್ರಮವಹಿಸಿ ಕಲಿಯಬೇಕು ಹಾಗೂ ಶಿಕ್ಷಕರನ್ನು ಪೂಜ್ಯನೀಯ ಭಾವದಿಂದ ಕಾಣಬೇಕು ಎಂದು ಚಿದ್ವಿಲಾಸ್ ಕರೆ ನೀಡಿದರು. 

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮಾಜ ಸೇವಕ ಟಿ.ಆರ್. ವಾಸುದೇವ್, ವಿದ್ಯಾರ್ಥಿಗಳ ಕಣ್ಣಿಗೆ ಕಾಣುವ ದೇವರು ಎಂದರೆ ಅದು ಶಿಕ್ಷಕರು . ಲೋಕಜ್ಞಾನ ಮತ್ತು ವಿದ್ಯಾದಾನವನ್ನು ಶಿಕ್ಷಕರಿಂದ ಮಾತ್ರ ಪಡೆಯಲು ಸಾಧ್ಯವೆಂದರು. ವಿದ್ಯಾರ್ಥಿಗಳು ಯಾವುದೇ ಒಂದು ಕೆಲಸವನ್ನು ಕಷ್ಟಪಟ್ಟು ಮಾಡುವ ಬದಲು ಇಷ್ಟಪಟ್ಟು ಮಾಡಿದಾಗ ಮಾತ್ರ ಸಾಧನೆಯ ಶಿಖರಕ್ಕೇರಲು ಸಾಧ್ಯ. ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಮುನ್ನಡೆದರೆ ಮತ್ತು ವಿದ್ಯಾರ್ಜನೆಗೆ ಮುಂದಾದರೆ ಶೇ.100 ರಷ್ಟು ಫಲಿತಾಂಶ ಗಳಿಸಬಹುದಾಗಿದೆ ಎಂದು ವಾಸುದೇವ್ ಹೇಳಿದರು.

ದಸಂಸ ಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳು ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿದರು. ಮಡಿಕೇರಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀ ಚಂದ್ರಶೇಖರ್, ಉದ್ಯಮಿ ಶರಿನ್, ದಸಂಸ ತಾಲೂಕು ಸಂಘಟನಾ ಸಂಚಾಲಕ ದೀಪಕ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News