ಮಾವೋವಾದಿ ದಂಪತಿ ಶಸ್ತ್ರಾಸ್ತ್ರ ತೊರೆಯಲು ಕಾರಣವಾದ ಸೇತುವೆ

Update: 2018-08-06 04:53 GMT

ಮಲ್ಕನ್‌ಗಿರಿ (ಒಡಿಶಾ), ಆ.6: ನಕ್ಸಲ್ ಪೀಡಿತ ಮಲ್ಕನ್‌ಗಿರಿ ಜಿಲ್ಲೆಯಲ್ಲಿ ನಿರ್ಮಾಣವಾದ ಒಂದು ಸೇತುವೆ ಇಡೀ ಜಿಲ್ಲೆಯ ಜನಜೀವನವನ್ನೇ ಬದಲಿಸಿದೆ. ಜುಲೈ 26ರಂದು ಉದ್ಘಾಟನೆಯಾದ ಗುರುಪ್ರಿಯ ಸೇತುವೆ ಮಲ್ಕನ್‌ಗಿರಿಯ ಪ್ರಮುಖ ಭೂ ಪ್ರದೇಶದ ಜತೆ 151 ಗ್ರಾಮಗಳನ್ನು ಬೆಸೆದಿರುವುದು ಮಾತ್ರವಲ್ಲದೇ ಯುವ ಮಾವೋವಾದಿ ದಂಪತಿ ಮುಖ್ಯವಾಹಿನಿಗೆ ಮರಳಲು ಕೂಡಾ ಪ್ರೇರಣೆಯಾಗಿದೆ!

ಜಲ ವಿದ್ಯುತ್ ಯೋಜನೆಯ ಕಾರಣದಿಂದ ಕಳೆದ 50 ವರ್ಷಗಳಿಂದ 151 ಗ್ರಾಮಗಳ ಜನತೆ ಮುಖ್ಯವಾಹಿನಿಯಿಂದ ಬೇರ್ಪಟ್ಟಿದ್ದರು. ಇದೀಗ ಈ ಸೇತುವೆ ಲೋಕಾರ್ಪಣೆಗೊಳ್ಳುವುದರೊಂದಿಗೆ ಅವರ ಜೀವನದ ಹೊಸ ಅಧ್ಯಾಯ ಆರಂಭವಾಗಿದೆ.

ಸೇತುವೆಯ ಸಂರಕ್ಷಣೆಗೆ ಜಂತಪೈ ಎಂಬಲ್ಲಿ ಖಾಯಂ ಭದ್ರತಾ ಕ್ಯಾಂಪ್ ನಿರ್ಮಿಸಿರುವುದು, ಸೇತುವೆ ಉದ್ಘಾಟನೆ ಹಿನ್ನೆಲೆಯಲ್ಲಿ ಹೆಚ್ಚಿದ ಕೂಂಬಿಂಗ್ ಕಾರ್ಯಾಚರಣೆಯಿಂದ ಪ್ರೇರಿತರಾಗಿ ಜುಲೈ 29ರಂದು ಶಸ್ತ್ರಾಸ್ತ್ರ ತೊರೆದು ಮುಖ್ಯವಾಹಿನಿಗೆ ಮರಳುವ ನಿರ್ಧಾರ ಕೈಗೊಂಡಿರುವುದಾಗಿ ಯುವ ದಂಪತಿ ವಾಗಾ ಉಮ್ರಾಮಿ (26) ಮತ್ತು ಪತ್ನಿ ಮುದೆ ಮಧಿ ಹೇಳಿದ್ದಾರೆ.

ಉಮ್ರಾಮಿ ಅಲಿಯಾಸ್ ಮುಖೇಶ್ ಮತ್ತು ಮಧಿ ಅಲಿಯಾಸ್ ಮೆಸಿ ಅವರ ಸುಳಿವು ನೀಡಿದವರಿಗೆ ಐದು ಲಕ್ಷ ರೂಪಾಯಿಗಳ ನಗದು ಬಹುಮಾನ ಘೋಷಿಸಲಾಗಿತ್ತು. ಉಮ್ರಾಮಿ ಏಳು ಹತ್ಯೆ ಮತ್ತು ಹತ್ಯೆ ಯತ್ನ ಪ್ರಕರಣಗಳು ಸೇರಿದಂತೆ 26 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಪತ್ನಿ ಮಧಿ ವಿರುದ್ಧ ಎಂಟು ಹತ್ಯೆ ಸೇರಿದಂತೆ 15 ದಾಳಿಯ ಸಂಚು ರೂಪಿಸಿದ ಆರೋಪ ಇತ್ತು. ಇದೀಗ ಅವರು ಹತ್ತು ವರ್ಷಗಳ ಅರಣ್ಯವಾಸ ತೊರೆದು ಮಾವೋವಾದಿ ಶಿಬಿರಗಳಿಂದ ಹೊರಗೆ ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

"ಅರಣ್ಯದ ಬದುಕು ದಯನೀಯ. ಬಡವರ ಸೇವೆ ಮಾಡುತ್ತಿದ್ದೇನೆ ಎಂಬ ತಪ್ಪು ಕಲ್ಪನೆಯಿಂದ ನನ್ನ ಅಮೂಲ್ಯ 10 ವರ್ಷಗಳನ್ನು ನಾನು ಕಳೆದುಕೊಂಡೆ" ಎಂದು ಸಿಪಿಐ(ಮಾವೋವಾದಿ) ಸಂಘಟನೆಯ ಮಲ್ಕನ್‌ಗಿರಿ-ಕೋರಪುಟ್-ವಿಶಾಖಪಟ್ಟಣಂ ಗಡಿ ಸಮಿತಿ ಸದಸ್ಯರಾಗಿದ್ದ ಉಮ್ರಾಮಿ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News