ಸೋನಿಯಾ, ದೇವೇಗೌಡ ಜತೆ ಸೇರಿ ವಿಪಕ್ಷಗಳ ಸಂಘಟನೆ: ಶರದ್ ಪವಾರ್

Update: 2018-08-06 05:00 GMT

ಹೊಸದಿಲ್ಲಿ, ಆ.6: ಪ್ರಧಾನಿ ಹುದ್ದೆಯ ಆಕಾಂಕ್ಷೆಯಲ್ಲದ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ತಾನು ಜತೆ ಸೇರಿ ದೇಶಾದ್ಯಂತ ಪ್ರವಾಸ ಕೈಗೊಂಡು ವಿರೋಧ ಪಕ್ಷಗಳನ್ನು ಸಂಘಟಿಸುವ ಪ್ರಸ್ತಾವವನ್ನು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಮುಂದಿಟ್ಟಿದ್ದಾರೆ.

ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಸಲುವಾಗಿ ದೇಶಾದ್ಯಂತ ಪ್ರವಾಸ ಕೈಗೊಂಡು ಜನತೆಯಲ್ಲಿ ವಿಶ್ವಾಸ ತುಂಬಬೇಕು ಹಾಗೂ 2019ರ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಗೆ ಪ್ರಬಲ ಪರ್ಯಾಯವನ್ನು ಸೃಷ್ಟಿಸಬೇಕು ಎಂದು ಪವಾರ್ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್- ಎನ್‌ಸಿಪಿ ಮೈತ್ರಿಕೂಟಕ್ಕೆ ಮೊಟ್ಟಮೊದಲ ಬಾರಿಗೆ ಬಿಎಸ್ಪಿ ಸೇರ್ಪಡೆಗೆ ದ್ವಾರವನ್ನು ಮುಕ್ತಗೊಳಿಸಿರುವ ಪವಾರ್, ಈ ಬಗ್ಗೆ ಬಿಎಸ್ಪಿ ನಾಯಕಿ ಮಾಯಾವತಿ ಜತೆ ಚರ್ಚಿಸಿಲ್ಲವಾದರೂ ಈ ಮೈತ್ರಿಕೂಟ ದೊಡ್ಡ ಲಾಭ ತರಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.

ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಪವಾರ್, 2019ರ ಚುನಾವಣೆಗೆ ವಿರೋಧ ಪಕ್ಷಗಳ ಮಾರ್ಗಸೂಚಿಯ ವಿವರ ನೀಡಿದರು. ಪ್ರಸ್ತುತ ರಾಜಕೀಯವನ್ನು 1975-77ರ ಅವಧಿಯ ರಾಜಕೀಯ ಪರಿಸ್ಥಿತಿಗೆ ಅವರು ಹೋಲಿಸಿದರು. ಇಂದಿರಾ ಗಾಂಧಿ ಬಗ್ಗೆ ಇದ್ದಂತೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆಯೂ ಜನರಿಗೆ ಭ್ರಮನಿರಸನವಾಗಿದೆ. ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ರಾಷ್ಟ್ರೀಯ ಮೈತ್ರಿಕೂಟ ರಚಿಸುವ ಬದಲು ರಾಜ್ಯವಾರು ಮೈತ್ರಿಕೂಟ ರಚಿಸಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದ್ದಾರೆ.

ನಾಯಕತ್ವ ಪ್ರಶ್ನೆಯನ್ನು ಚುನಾವಣೆ ಬಳಿಕ ಇತ್ಯರ್ಥಪಡಿಸಿಕೊಳ್ಳಬೇಕು ಎಂದೂ ಅಭಿಪ್ರಾಯಪಟ್ಟಿದ್ದಾರೆ. ರಾಜ್ಯವಾರು ಮೈತ್ರಿ ಬಗ್ಗೆ ಕಾಂಗ್ರೆಸ್ ತಾರ್ಕಿಕ ದೃಷ್ಟಿಕೋನವನ್ನು ಹೊಂದಬೇಕು ಎಂದಿದ್ದಾರೆ. ಇತ್ತೀಚೆಗೆ ನಡೆಸಿದ ಮಾತುಕತೆಯಿಂದ ರಾಹುಲ್‌ ಗಾಂಧಿ ಸಾಕಷ್ಟು ಸುಧಾರಿಸಿದ್ದಾರೆ ಎನ್ನುವುದು ದೃಢಪಟ್ಟಿದೆ ಎಂದು ಅವರು ಹೇಳಿದ್ದಾರೆ.

ತುರ್ತು ಪರಿಸ್ಥಿತಿಗೂ ಪ್ರಸ್ತುತ ರಾಜಕೀಯ ಸ್ಥಿತಿಗೂ ಇರುವ ಸಾಮ್ಯತೆಯನ್ನು ವಿವರಿಸಿದ ಅವರು, "ಇಂದಿರಾ ಗಾಂಧಿಯವರಂತೆ ಮೋದಿ ಕೂಡಾ ಮಧ್ಯಮ, ಸರ್ಕಾರ ಹಾಗೂ ಸರ್ಕಾರಿ ಸಂಸ್ಥೆಗಳನ್ನು ನಿಯಂತ್ರಿಸುತ್ತಿದ್ದಾರೆ" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News