ಎಪಿಎಂಸಿ ಜಾಗ ಖಾಸಗಿ ಬಸ್ ನಿಲ್ದಾಣಕ್ಕೆ ನೀಡಲ್ಲ: ಅಧ್ಯಕ್ಷ ಕಾಂಗೀರ ಸತೀಶ್ ಸ್ಪಷ್ಟನೆ

Update: 2018-08-06 11:39 GMT

ಮಡಿಕೇರಿ, ಆ.6: ಕೃಷಿ ಉತ್ಪನ್ನ ಮಾರುಕಟ್ಟೆ ಜಾಗವನ್ನು ಯಾವುದೇ ಕಾರಣಕ್ಕೂ ಖಾಸಗಿ ಬಸ್ ನಿಲ್ದಾಣ ಸೇರಿದಂತೆ ಇತರ ಉದ್ದೇಶಗಳಿಗೆ ನೀಡುವ ಪ್ರಶ್ನೆಯೇ ಇಲ್ಲವೆಂದು ಎಪಿಎಂಸಿ ಅಧ್ಯಕ್ಷ ಕಾಂಗೀರ ಸತೀಶ್ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಉತ್ಪನ್ನ ಮಾರುಕಟ್ಟೆ ಜಾಗವನ್ನು ಇತರ ಉದ್ದೇಶಗಳಿಗೆ ನೀಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಆದುದರಿಂದ ಮುಂದಿನ ದಿನಗಳಲ್ಲಿ ಎಪಿಎಂಸಿ ಜಾಗವನ್ನು ಬಳಸಿಕೊಳ್ಳ್ಳುವಂತೆ ಯಾವುದೇ ಸಂಘ ಸಂಸ್ಥೆಗಳು ಹೇಳಿಕೆಗಳನ್ನು ನೀಡಬಾರದು ಎಂದು ಮನವಿ ಮಾಡಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಜಾಗವನ್ನು 1981-82 ರಲ್ಲಿ ನಿಡ್ಯಮಲೆ ಕುಟುಂಬಸ್ಥರಿಂದ ಹಣ ನೀಡಿ ಖರೀದಿಸಲಾಗಿದ್ದು, ಹಾಗಾಗಿ ಈ ಸ್ಥಳದ ಬಗ್ಗೆ ಸಂಘ ಸಂಸ್ಥೆಗಳು, ರಾಜಕಾರಣಿಗಳು ಗೊಂದಲದ ಹೇಳಿಕೆ ನೀಡಬಾರದೆಂದು ಒತ್ತಾಯಿಸಿದರು. 

ಖಾಸಗಿ ಬಸ್ ನಿಲ್ದಾಣಕ್ಕೆ ಈಗಾಗಲೆ ಜಾಗವನ್ನು ಗುರುತಿಸಿ ನಗರಸಭೆಯಲ್ಲಿ ನಿರ್ಣಯ ಕೈಗೊಂಡು ಬಹುಕೋಟಿ ಹಣವನ್ನು ವೆಚ್ಚಮಾಡಿ ಬಸ್ ನಿಲ್ದಾಣ ನಿರ್ಮಿಸಲಾಗಿದ್ದು, ಇದೀಗ ಅದನ್ನು ತಿರಸ್ಕರಿಸುವುದು ಸರಿಯಲ್ಲ. ಕೃಷಿ ಉತ್ಪನ್ನ ಮಾರುಕಟ್ಟೆ ಜಾಗವು ರೈತರಿಗೆ ಸಮಬಂಧಿಸಿದ ಜಾಗವಾಗಿದ್ದು, ರೈತರ ಒತ್ತಾಯದ ಮೇರೆಗೆ ಈ ಜಾಗದಲ್ಲಿ ಈಗಾಗಲೆ ಪ್ರತಿ ಶುಕ್ರವಾರ ರೈತ ಸಂತೆ ಯಶಸ್ವಿಯಾಗಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ಕೃಷಿ ಹುಟ್ಟುವಳಿಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲೆ ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಇದರೊಂದಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಜಾಗದಲ್ಲಿ ಗೋದಾಮು ವ್ಯವಸ್ಥೆ ಇದ್ದು, ಭತ್ತ ಸೇರಿದಂತೆ ಹಲವಾರು ಆಹಾರ ಧಾನ್ಯಗಳನ್ನು ಇಲ್ಲಿ ಖರೀದಿಸಿ ದಾಸ್ತಾನು ಮಾಡಲು ಉದ್ದೇಶಿಸಲಾಗಿದೆಯೆಂದು ತಿಳಿಸಿದರು.

ಈಗಾಗಲೆ ನಬಾರ್ಡ್ ನೆರವಿನಿಂದ ಸುಮಾರು 50 ಲಕ್ಷ ವೆಚ್ಚದಲ್ಲಿ ಮಾರುಕಟ್ಟೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ರೈತರಿಂದ ಭತ್ತ ಖರೀದಿಸುವ ಯೋಜನೆಯೂ ಇದೆಯೆಂದು ಅವರು ನುಡಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಬೆಪ್ಪುರನ ಮೇದಪ್ಪ, ವಾಂಚೀರ ಜಯಾ ನಂಜಪ್ಪ ಹಾಗೂ ಅಂಬಿ ಕಾರ್ಯಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News