ಮಡಿಕೇರಿ: ಮೂರ್ನಾಡಿನಲ್ಲಿ ಜಾನಪದ ಆಟಿ ಊಟದ ಸಂಭ್ರಮ

Update: 2018-08-06 11:45 GMT

ಮಡಿಕೇರಿ, ಆ.6 : ಮೂರ್ನಾಡು ವಿದ್ಯಾಸಂಸ್ಥೆ ಹಾಗೂ ಜಾನಪದ ಪರಿಷತ್ ನ ಮೂರ್ನಾಡು ಹೋಬಳಿ ಘಟಕದ ವತಿಯಿಂದ ಮೂರ್ನಾಡು ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಜಾನಪದ ಆಟಿ ತಿನಿ (ಆಟಿ ಊಟ) ಆಯೋಜಿಸಲಾಗಿತ್ತು.

ಆಟಿ ಮಾಸದಲ್ಲಿ ಕೊಡಗಿನಲ್ಲಿ ಹೆಚ್ಚು ಬಳಸಲ್ಪಡುವ ಪತ್ರೋಡೆ, ಆಟಿ ಪಾಯಸ, ಆಟಿ ಹಲ್ವ, ಕೋಳಿ ಕರಿ, ಕಡುಂಬುಟ್ಟ್, ಪಾಪುಟ್ಟು, ಸೊಪ್ಪಿನ ಪಲ್ಯಗಳು ಸೇರಿದಂತೆ ಬಾಯಲ್ಲಿ ನೀರೂರಿಸುವ ರುಚಿ ರುಚಿಯಾದ ಖಾದ್ಯಗಳನ್ನು ಮೂರ್ನಾಡು ವಿದ್ಯಾಸಂಸ್ಥೆಯ ಶಿಕ್ಷಕಿಯರು ತಯಾರಿಸಿ ಪ್ರದರ್ಶನಕ್ಕಿಟ್ಟಿದ್ದರು. 

ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ಮಳೆಗಾಲದಲ್ಲಿ ಕೊಡಗಿನಲ್ಲಿ ಅನೇಕ ರೀತಿಯ ಖಾದ್ಯಗಳನ್ನು ಮಹಿಳೆಯರು ತಯಾರಿಸುವ ಮೂಲಕ ವಿಶಿಷ್ಟವಾದ ಆಹಾರ ಸಂಸ್ಕೃತಿಗೆ ಕಾರಣಕರ್ತರಾಗಿದ್ದಾರೆ. ಹೀಗಾಗಿಯೇ ಕೊಡಗಿನ ಆತಿಥ್ಯ ಮನೋಭಾವದಂತೆ ಇಲ್ಲಿನ ವಿಶಿಷ್ಟ, ಸವಿಯಾದ ತಿನಿಸುಗಳು ಕೂಡ ಪ್ರವಾಸಿಗರಿಂದಲೂ ಮುಕ್ತ ಪ್ರಶಂಶಗೆ ಕಾರಣವಾಗಿದೆ ಎಂದ ಅವರು, ನಮ್ಮ ಪೂರ್ವಿಕರು ನಮಗಾಗಿ ನೀಡಿರುವ ಆಚಾರ ವಿಚಾರಗಳೊಂದಿಗೆ ಶ್ರೀಮಂತ ಸಂಸ್ಕೃತಿಯನ್ನೂ ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಈ ನಿಟ್ಟಿನಲ್ಲಿ ಆಟಿ ತಿನಿಯಂಥ ಕಾರ್ಯಕ್ರಮಗಳು ಹೆಚ್ಚು ಆಯೋಜಿತಗೊಳ್ಳಬೇಕು ಎಂದರು.

ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ  ಬಾಚೆಟ್ಟೀರ ಜಿ.ಮಾದಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾನಪದ ಸಂಸ್ಕೃತಿಯೇ ಕೊಡಗಿನ ಶ್ರೀಮಂತ ಸಂಸ್ಕೃತಿಯಾಗಿದ್ದು, ಇದನ್ನು ರಕ್ಷಿಸುವ ನಿಟ್ಟಿನಲ್ಲಿ ಜಾನಪದ ಪರಿಷತ್ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ವಿದ್ಯಾಸಂಸ್ಥೆಯ ವತಿಯಿಂದ ಕೊಡಗಿನ ಸಂಸ್ಕೃತಿ ಉಳಿಸುವ ಎಲ್ಲಾ ಕಾರ್ಯಕ್ರಮಗಳಿಗೂ ಪ್ರೋತ್ಸಾಹ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ಕೊಡಗಿನಲ್ಲಿ ಜಾನಪದ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ಮೂರು ತಾಲೂಕು ಸಂಘಗಳೊಂದಿಗೆ 3 ಹೋಬಳಿ ಘಟಕಗಳೂ ಸಕ್ರಿಯವಾಗಿದ್ದು, ರಾಜ್ಯದಲ್ಲಿಯೇ ಕೊಡಗಿನ ಜಾನಪದ ಪರಿಷತ್ ಕಾರ್ಯಚಟುವಟಿಕೆಗಳು ಮೆಚ್ಚುಗೆಗಳಿಸುವಂತಿದೆ. ಮೂರ್ನಾಡು ಹೋಬಳಿ ಘಟಕದ ವತಿಯಿಂದ ಆಟಿ ಊಟದ ಮೂಲಕ ಕೊಡಗಿನ ಸವಿಯಾದ ಖಾದ್ಯ ಸಂಸ್ಕೃತಿಯನ್ನು ಮಳೆಗಾಲದ ದಿನಗಳಲ್ಲಿ ಪರಿಚಯಿಸಿದ್ದು ಪ್ರಶಂಸನೀಯ ಎಂದರು. 

ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷ  ಎಸ್.ಡಿ. ಪ್ರಶಾಂತ್ ಮಾತನಾಡಿ, ಮಳೆಗಾಲದಲ್ಲಿ ಕೊಡಗಿನ ನಿಜವಾದ  ಜಾನಪದ ಸಂಸ್ಕೃತಿ ಹೆಚ್ಚು ಅನಾವರಣಗೊಳ್ಳುತ್ತದೆ. ಜಾನಪದವೇ ನಮ್ಮ ಮೂಲ ಸಂಸ್ಕೃತಿಯಾಗಿದೆ. ಈ ಪೈಕಿ ಮಳೆಗಾಲದಲ್ಲಿ ತಯಾರಿಸಲ್ಪಡುವ ವಿಶಿಷ್ಟ ತಿನಿಸುಗಳೂ ಮುಖ್ಯವಾಗಿದೆ. ಇದನ್ನು ಪರಿಚಯಿಸಬೇಕೆಂಬ ಉದ್ದೇಶದಿಂದ ಮೊದಲ ಬಾರಿಗೆ ಹೋಬಳಿ ಘಟಕದಿಂದ ಆಟಿ ಊಟ ಆಯೋಜಿಸಲ್ಪಟ್ಟಿದೆ ಎಂದು  ತಿಳಿಸಿದರು.

ವಿದ್ಯಾಸಂಸ್ಥೆಯ ಪ್ರಾಂಶುಪಾಲ ಪಟ್ಟಡ ಪೂವಣ್ಣ, ಉಪಾಧ್ಯಕ್ಷ ಪುದಿಯೊಕ್ಕಡ ಸುಬ್ರಹ್ಮಣಿ, ಆಡಳಿತ ಮಂಡಳಿ ನಿರ್ದೇಶಕರಾದ ಎ.ಎಂ.ಶೈಲಾ, ನಂದೇಟಿರ  ರಾಜಾ ಮಾದಪ್ಪ, ಸುಶೀಲ ಸುಬ್ರಹ್ಮಣಿ, ಪ್ರೌಡಶಾಲೆ ಮುಖ್ಯ ಶಿಕ್ಷಕಿ ಎ.ಎಸ್.ರಶ್ಮಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಿ.ಎಂ.ದೇವಕಿ, ಜಿಲ್ಲಾ ಜಾನಪದ ಪರಿಷತ್ ಖಜಾಂಜಿ ಎಸ್.ಎಸ್.ಸಂಪತ್ ಕುಮಾರ್, ಉಪಾಧ್ಯಕ್ಷ ಅಂಬೆಕಲ್ ಕುಶಾಲಪ್ಪ, ಮೂರ್ನಾಡು ಹೋಬಳಿ ಘಟಕದ ಗೌರವಾಧ್ಯಕ್ಷ ಕಿಗ್ಗಾಲು ಗಿರೀಶ್, ವಿದ್ಯಾಸಂಸ್ಥೆಯ ಶಿಕ್ಷಕ, ಶಿಕ್ಷಕಿಯರು, ಜಾನಪದ ಪರಿಷತ್ ಸದಸ್ಯರು  ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  ಜಾನಪದ ಪರಿಷತ್ ಪದಾಧಿಕಾರಿ ಹರೀಶ್ ಕಿಗ್ಗಾಲು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News