ಸ್ವಾಭಿಮಾನದಿಂದ ಬಾಳುವಂತೆ ಮಾಡುವುದೇ ಶಿಕ್ಷಣ: ಶಾಸಕ ಮಾಧುಸ್ವಾಮಿ

Update: 2018-08-06 12:12 GMT

ಹುಳಿಯಾರು,ಆ.06: ಬೌದ್ಧಿಕವಾಗಿ ಶಕ್ತಿ ನೀಡಿ ಸ್ವಾಭಿಮಾನದಿಂದ ಬಾಳುವಂತೆ ಮಾಡುವುದು ಶಿಕ್ಷಣದ ಮೂಲ ಉದ್ದೇಶವಾಗಿದ್ದು, ಬದಲಾಗಿ ಉದ್ಯೋಗಕ್ಕಾಗಿ, ಅಂಕಗಳಿಕೆಗಾಗಿ ಅಲ್ಲ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಹುಳಿಯಾರಿನ ಬಿಎಂಎಸ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ 2018-19 ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ರೆಡ್‍ಕ್ರಾಸ್ ಮತ್ತು ಎನ್‍ಎಸ್‍ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡು ಅವರು, ಮೊಸರನ್ನು ಕಡೆಯುತ್ತಾ, ಬೆಣ್ಣೆ ಹೊರಗೆ ತೆಗೆಯುವ ಹಾಗೆ ನ್ಯಾಯಾಧೀಶರು ವಾದ ಪ್ರತಿವಾದ ಆಲಿಸುತ್ತಾ ಆಲಿಸುತ್ತಾ ತೀರ್ಪು ಬರೆಯುತ್ತಾರೆ. ಹಾಗೆಯೇ ಪಠ್ಯದ ಕಠಿಣ ಅಭ್ಯಾಸವಿಲ್ಲದೆ ಉಪನ್ಯಾಸಕರ ಬೋದನೆಯ ವೇಳೆ ಆಸಕ್ತಿಯಿಂದ ಕೇಳಿಸಿ ಕೊಂಡರೂ ಸಾಕುಮ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಬಹುದು ಎಂದರು.

ವಿದ್ಯಾರ್ಥಿಗಳು ಉತ್ತಮ ಕೇಳುಗರಾಗಲು ಮಾನಸಿಕ ಮತ್ತು ದೈಹಿಕ ಸದೃಢತೆಯ ಅಗತ್ಯವಿದೆ. ಈ ಸದೃಡತೆಯು ಯೋಗ, ಧ್ಯಾನ, ಸಂಗೀತ, ಕ್ರೀಡೆಯಿಂದ ಲಭಿಸುತ್ತದೆ. ಹಾಗಾಗಿ ಸದಾ ಲವಲವಿಕೆಯಿಂದಿರಲು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಎಂದು ಕಿವಿ ಮಾತು ಹೇಳಿದ ಅವರು, ಮಾನಸಿಕವಾಗಿ ನನ್ನಲ್ಲಿ ಶಕ್ತಿಯಿಲ್ಲ ಎಂದುಕೊಂಡರೆ ಶಕ್ತಿ ತುಂಬಿ ಕೊಳ್ಳುವುದು ಅಸಾಧ್ಯವಾಗಿದ್ದು, ಯಾವುದೇ ಸಾಧನೆ ಮಾಡಲಾಗುವುದಿಲ್ಲ. ಹಾಗಾಗಿ ಋಣಾತ್ಮಕ ಚಿಂತನೆಯಿಂದ ಹೊರಬಂದು ನಾನು ಶಕ್ತ, ನಾನಿದನ್ನು ಸಾಧಿಸಬಲ್ಲೆ ಎಂದು ಹೊರಟರೆ ಸಾಧನೆ ಸುಲಭ ಸಾಧ್ಯ ಎಂದು ಹೇಳಿದರು.

ವಿಮರ್ಶಕ ಪ್ರೊ.ನಟರಾಜ್ ಬೂದಾಳ್, ಪ್ರಾಚಾರ್ಯ ಬಿಳಿಕೆಗೆ ಕೃಷ್ಣಮೂರ್ತಿ, ಉಪನ್ಯಾಸಕ ಮೋಹನ್, ತಾಪಂ ಸದಸ್ಯ ಏಜೆಂಟ್ ಕುಮಾರ್, ತಾಪಂ ಮಾಜಿ ಸದಸ್ಯ ಕೆಂಕೆರೆ ನವೀನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News