ಔದಾರ್ಯ, ಅಭಿಮಾನಗಳ ಮಿಶ್ರಣವೇ ಬ್ಯಾರಿ ಸಮುದಾಯ: ವಿಧಾನ ಪರಿಷತ್ ಸದಸ್ಯ ಧರ್ಮೇಗೌಡ

Update: 2018-08-06 14:41 GMT

ಚಿಕ್ಕಮಗಳೂರು, ಆ.6: ಬ್ಯಾರಿ ಸಾಹಿತ್ಯ ಅಕಾಡಮಿ 25 ವರ್ಷಗಳ ಹೋರಾಟದ ಫಲವಾಗಿದ್ದು, ಈ ಹೋರಾಟದಲ್ಲಿ ಬ್ಯಾರಿ ಸಮುದಾಯದ ಮುಖಂಡರು ಎಷ್ಟು ಶ್ರಮಿಸಿದ್ದಾರೋ ಅಷ್ಟೇ ಶ್ರಮವನ್ನು ಜನಪ್ರತಿನಿಧಿಗಳೂ ಹಾಕಿದ್ದಾರೆ. ಜನಪ್ರತಿನಿಧಿಗಳ ಕೊಡುಗೆ, ಶ್ರಮವನ್ನು ಸ್ಮರಿಸುತ್ತಿರುವುದು ಸಮುದಾಯದವರಲ್ಲಿ ರಕ್ತಗತವಾಗಿರುವ ಪ್ರೀತಿ, ಔದಾರ್ಯ, ಅಭಿಮಾನಕ್ಕೆ ಸಾಕ್ಷಿ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಧರ್ಮೇಗೌಡ ಸ್ಮರಿಸಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಸೋಮವಾರ ಬ್ಯಾರಿ ಸಾಹಿತ್ಯ ಅಕಾಡಮಿ ಹಾಗೂ ಜಿಲ್ಲಾ ಬ್ಯಾರಿಗಳ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿಲಾಗಿದ್ದ ಸನ್ಮಾನ ಸಮಾರಂಭ ಹಾಗೂ ಬ್ಯಾರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪ್ರೀತಿ, ವಾತ್ಸಲ್ಯ, ಪರೋಪಕಾರ, ಔದಾರ್ಯ ಇವುಗಳ ಮಿಶ್ರಣವೇ ಬ್ಯಾರಿ ಸಮುದಾಯ. ಜಿಲ್ಲಾದ್ಯಂತ ಇರುವ ಬ್ಯಾರಿ ಸಮುದಾಯದ ಸದಸ್ಯರು ಇತರ ಸಮುದಾಯಗಳೊಂದಿಗೆ ನೂರಾರು ವರ್ಷಗಳಿಂದ ಸಾಮರಸ್ಯ, ಹೊಂದಾಣಿಕೆ, ಸೌಹಾರ್ದ ಕಾಯ್ದುಕೊಂಡು ಬರುವಲ್ಲಿ ಯಶಸ್ವಿಯಗಿದ್ದಾರೆಂದ ಅವರು, ಸಮುದಾಯದವರು ಸರಕಾರಿ ಸೌಲಭ್ಯಗಳ ಸದುಪಯೋಗ ಪಡೆದು ಶೈಕ್ಷಣಿಕವಾಗಿ, ಆರ್ಥಿಕವಾಗಿ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಬೇಕಿದೆ ಎಂದು ಕರೆ ನೀಡಿದರು.

ಬ್ಯಾರಿ ಅಕಾಡೆಮಿ ಸ್ಥಾಪನೆ ಹಿನ್ನೆಲೆಯಲ್ಲಿ ಈ ಹಿಂದೆ ಚಿಕ್ಕಮಗಳೂರಿನ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಬ್ಯಾರಿ ಸಮುದಾಯದ ಸಮಾವೇಶದಲ್ಲಿ ಸ್ಥಳದಲ್ಲೇ ತಾನು ಅಂದು ಸಿಎಂ ಆಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ದೂರವಾಣಿ ಕರೆ ಮಾಡಿ ಅಕಾಡಮಿ ಸ್ಥಾಪನೆ ವಿಚಾರ ಪ್ರಸ್ತಾಪಿಸಿದ್ದೆ. ಕೇವಲ ನಾಲ್ಕೇ ನಿಮಿಷ ಮಾತನಾಡಿದ ಅವರು, ಬ್ಯಾರಿ ಅಕಾಡೆಮಿ ಸ್ಥಾಪನೆಗೆ ಸಿಎಂ ಒಪ್ಪಿದ್ದಾರೆಂದು ಘೋಷಿಸಲು ತಿಳಿಸಿದ್ದರು. ನಂತರ ಅವರು ಹೇಳಿದಂತೆ ನಡೆದುಕೊಂಡು ಬ್ಯಾರಿ ಅಕಾಡೆಮಿಗೆ ಹಸಿರು ನಿಶಾನೆ ತೋರಿಸಿದ್ದರು ಎಂದ ಅವರು, ಬ್ಯಾರಿ ಸಮುದಾಯದ ಬಗ್ಗೆ ಸಿಎಂ ಕುಮಾರಸ್ವಾಮಿ ಅವರಿಗೆ ವಿಶೇಷವಾದ ಅಕ್ಕರೆ ಇದೆ. ತನ್ನ ಕುಟುಂಬಕ್ಕೂ ಈ ಸಮುದಾಯ ಅಚ್ಚುಮೆಚ್ಚು. ಸಮುದಾಯಕ್ಕೆ ತಾವು ನೀಡಿದ ಕೊಡುಗೆಗಳನ್ನು ಸ್ಮರಿಸುತ್ತಿರುವುದು ಸಂತಸವನ್ನುಂಟು ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಜಾತ್ಯತೀತತೆ ಈ ದೇಶದ ದೊಡ್ಡ ಆಸ್ತಿ. ಇದಕ್ಕೆ ಭಂಗಬಂದಲ್ಲಿ ದೇಶದ ಸಾಮರಸ್ಯ ಹದಗೆಡುತ್ತದೆ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಜಾತಿ-ಧರ್ಮಗಳ ನಡುವೆ ಒಡಕನ್ನುಂಟು ಮಾಡಿ ಸೌಹಾರ್ದದಿಂದಿರುವ ಸಮುದಾಯಗಳ ನಡುವೆ ಒಡಕನ್ನುಂಟು ಮಾಡಲು ಹುನ್ನಾರ ನಡೆಸುತ್ತಿವೆ. ಇದು ದೇಶದ ಸಾಮರಸ್ಯ, ಸಾಮಾಜಿಕ, ಆರ್ಥಿಕಾಭಿವೃದ್ಧಿಗೆ ಮಾರಕವಾಗಿರುವುದರಿಂದ ಜಾತಿ-ಧರ್ಮಗಳ ನಡುವೆ ಕಂದಕ ಸೃಷ್ಟಿಸುವವರಿಂದ ಎಲ್ಲ ಸಮುದಾಯಗಳೂ ಜಾಗೃತರಾಗಿರಬೇಕು. ಆತಂಕ ಸೃಷ್ಟಿಸುವ ಕೆಲ ಕಿಡಿಗೇಡಿಗಳು ಎಲ್ಲ ಧರ್ಮಗಳಲ್ಲೂ ಇದ್ದಾರೆ. ಯಾರೋ ಒಬ್ಬ ಆತಂಕ ಸೃಷ್ಟಿಗೆ ಮುಂದಾದರೆ ಇಡೀ ಸಮುದಾಯವನ್ನು ಅದಕ್ಕೆ ಗುರಿ ಮಾಡುವುದು ಅಕ್ಷಮ್ಯ ಎಂದ ಅವರು, ಮಲೆನಾಡಿನಲ್ಲಿರುವ ಬ್ಯಾರಿ ಸಮುದಾಯದ ಜನತೆ ಇಲ್ಲಿನ ಇತರ ಸಮುದಾಯಗಳೊಂದಿಗೆ ಬೆರೆತು ಹೋಗಿರುವುದರಿಂದ ಅವರು ಅಪ್ಪಟ ಕನ್ನಡಿಗರೇ ಆಗಿದ್ದಾರೆ. ಮಾತೃಭಾಷೆ ಬೇರೆಯಾದರೂ ಕನ್ನಡ ಭಾಷೆಯ ಬಗ್ಗೆ ಅಪಾರ ಅಭಿಮಾನ, ಜ್ಞಾನ ಹೊಂದಿದ್ದಾರೆ. ಇದು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಬ್ಯಾರಿ ಸಮುದಾಯದವರೂ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.

ನೈರುತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ಹಿಂದಿನ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗಲೇ ಬ್ಯಾರಿ ಸಾಹಿತ್ಯ ಅಕಾಡೆಮಿ ಸ್ಥಾಪನೆಯಾಗಿದೆ. ರಾಜ್ಯದಲ್ಲಿ ಈಗಲೂ ಸಮ್ಮಿಶ್ರ ಸರಕಾರ ಅಸ್ತಿತ್ವದಲ್ಲಿದ್ದು, ಕುಮಾರಸ್ವಾಮಿ ಅವರೇ ಸಿಎಂ ಆಗಿರುವುದರಿಂದ ಬ್ಯಾರಿ ಸಾಹಿತ್ಯ ಅಕಾಡೆಮಿ ಭವನ ಹಾಗೂ ದ.ಕ., ಚಿಕ್ಕಮಗಳೂರು ಜಿಲ್ಲಾ ಬ್ಯಾರಿ ಒಕ್ಕೂಟಗಳ ಕಚೇರಿ ಕಟ್ಟಡಗಳಿಗೂ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರೇ ಅಡಿಗಲ್ಲಿಡಲಿದ್ದಾರೆಂದು ಭರವಸೆ ನೀಡಿದ ಅವರು, ಜಿಲ್ಲೆಯ ಅಭಿವೃದ್ಧಿಯಲ್ಲಿ ಬ್ಯಾರಿ ಸಮುದಾಯದವರ ಕೊಡುಗೆ ಇದೆ. ಯಾವುದೇ ಕೆಲಸ ಮಾಡಿದರೂ ಸಮಾಜ ಒಪ್ಪುವಂತಹ ಕೆಲಸ ಮಾಡುವ ಮನೋಭಾವ ಬ್ಯಾರಿ ಸಮುದಾಯದವರಲ್ಲಿ ಹಾಸುಹೊಕ್ಕಾಗಿದೆ ಎಂದು ಶ್ಲಾಘಿಸಿದರು.

ಚಿಕ್ಕಮಗಳೂರು ಜಿಲ್ಲಾ ಬ್ಯಾರಿಗಳ ಒಕ್ಕೂಟದ ಅಧ್ಯಕ್ಷ ಸಿ.ಕೆ.ಇಬ್ರಾಹೀಂ ಮಾತನಾಡಿ, ಸಮುದಾಯದ ಏಳಿಗೆಗೆ ಜಿಲ್ಲೆಯ ರಾಜಕಾರಣಿಗಳು ಅಪಾರವಾಗಿ ಶ್ರಮಿಸಿದ್ದಾರೆ. ಇಂತಹವರನ್ನು ಬ್ಯಾರಿ ಸಮುದಾಯ ಎಂದಿಗೂ ಮರೆಯುವುದಿಲ್ಲ ಎಂದರು.

ಇದಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಮೂವರು ಶಾಸಕರನ್ನು ಬ್ಯಾರಿ ಸಾಹಿತ್ಯ ಅಕಾಡೆಮಿ ಹಾಗೂ ಜಿಲ್ಲಾ ಬ್ಯಾರಿಗಳ ಒಕ್ಕೂಟದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಅಕಾಡೆಮಿ ಸದಸ್ಯ ಕಿರುಗುಂದ ಅಬ್ಬಾಸ್ ಸನ್ಮಾನಿತರ ಬಗ್ಗೆ ಕಿರು ಪರಿಚಯ ಮಾಡಿಕೊಟ್ಟರು. ಸಮಾರಂಭದಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿ ಭವನ ನಿರ್ಮಾಣಕ್ಕೆ ವಿಶೇಷ ಅನುದಾನ ಹಾಗೂ ಜಿಲ್ಲಾ ಬ್ಯಾರಿ ಒಕ್ಕೂಟಗಳ ನಿವೇಶನ ಒದಗಿಸಲು ಕೋರಿ ಮೂವರು ಶಾಸಕರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ನಂತರ ನಡೆದ ಬ್ಯಾರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತನ್ಸಿಫ್ ಬಿ.ಎಂ, ಸತೀಶ್ ಸುರತ್ಕಲ್, ಬಶೀರ್ ಕಿನ್ಯ ಹಾಗೂ ಅಶ್ರಫ್ ಅಪೋಲೊ ನೇತೃತ್ವದಲ್ಲಿ ನಡೆದ ರಸಮಂಜರಿ ಕಾರ್ಯಕ್ರಮ ಸಭಿಕರ ಮನಸೆಳೆಯಿತು. 

ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೆ.ಮುಹಮ್ಮದ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್,  ಮಾಜಿ ಜಿಪಂ ಸದಸ್ಯರಾದ ಸತೀಶ್, ಮಂಜೇಗೌಡ, ಕಾಂಗ್ರೆಸ್ ಮುಖಂಡ ಸೋಮೇಶ್, ಅಂಜುಮನ್ ಇಸ್ಲಾಮಿಯ ಅಧ್ಯಕ್ಷ ಮುಹಮ್ಮದ್ ಅಕ್ಬರ್, ನಗರಸಭೆ ಮಾಜಿ ಅಧ್ಯಕ್ಷ ಶರೀಫ್, ಜಿಲ್ಲಾ ಬ್ಯಾರಿ ಒಕ್ಕೂಟದ ಖಲಂದರ್, ನಯೀದ್ ಅಹ್ಮದ್ ಮತ್ತಿತರರು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರದ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೆ.ಮುಹಮ್ಮದ್, ರಾಜ್ಯದಲ್ಲಿರುವ ಬ್ಯಾರಿ ಸಮುದಾಯದವರ ಸಂಘಟನೆಗಾಗಿ 1979ರಲ್ಲಿ ಬ್ಯಾರೀಸ್ ವೆಲ್ಫೇರ್ ಅಸೋಶಿಯೇಶನ್ ಸ್ಥಾಪಿಸಲಾಗಿದ್ದು, ದಿವಂಗತ ಬಿ.ಎ.ಮೊಹಿದೀನ್ ನೇತೃತ್ವದಲ್ಲಿ ಈ ಸಂಘ ರಾಜ್ಯದೆಲ್ಲೆಡೆ ಸಂಚರಿಸಿ ಬ್ಯಾರಿಗಳ ಸಂಘಟನೆಗೆ ಶ್ರಮಿಸಿದ್ದರು. 2004ರಲ್ಲಿ ಸಮುದಾಯದವರ ಸಂಘಟನೆಗಾಗಿ ಬ್ಯಾರಿಗಳ ಒಕ್ಕೂಟ ರಚಿಸಲಾಯಿತು. ಈ ಒಕ್ಕೂಟಗಳ ಮೂಲಕ ಬ್ಯಾರಿ ಸಾಹಿತ್ಯ ಅಕಾಡೆಮಿಗೆ ಒತ್ತಾಯಿಸಲಾಯಿತು. ಆದರೆ ಸರಕಾರಗಳು ತುಳು, ಕೊಂಕಣಿ, ಕೊಡವ ಸಾಹಿತ್ಯ ಅಕಾಡೆಮಿ ಸ್ಥಾಪನೆಗೆ ಒತ್ತು ನೀಡಿದ್ದವು. ಹಿರಿಯ ಸಂಶೋಧಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ್ದರಿಂದಲೂ ನಮ್ಮ ಬೇಡಿಕೆ ಈಡೇರಿಕೆಗೆ ಹಿನ್ನಡೆಯಾಗಿತ್ತು. ಆದರೆ ಈ ಹಿಂದೆ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಎಚ್ಡಿಕೆ ಸಿಎಂ ಆಗಿದ್ದಾಗ  ಧರ್ಮೇಗೌಡ, ಭೋಜೇಗೌಡ ಅವರ ಮೂಲಕ ಸರಕಾರಕ್ಕೆ ಅಕಾಡೆಮಿ ಸ್ಥಾಪನೆಗೆ ಮನವಿ ಮಾಡಲಾಗಿತ್ತು. ನಂತರ ಎಚ್ಡಿಕೆ ಅವರೇ ಬ್ಯಾರಿ ಅಕಾಡೆಮಿ ಸ್ಥಾಪನೆಗೆ ಅನುವು ಮಾಡಿದರು. ಅಕಾಡೆಮಿ ಸ್ಥಾಪನೆ ಹೋರಾಟದಲ್ಲಿ ಭೋಜೇಗೌಡ, ಧರ್ಮೇಗೌಡ ಸಹೋದರರ ಶ್ರಮ ಅಪಾರವಾಗಿದೆ ಎಂದು ವಿವರಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News