ಪ್ಲಾಸ್ಟಿಕ್ ಧ್ವಜ ಬೇಡ

Update: 2018-08-06 18:31 GMT

ಮಾನ್ಯರೇ,

ದೇಶದಾದ್ಯಂತ ಪ್ಲಾಸ್ಟಿಕ್ ಮತ್ತು ಕಾಗದದಲ್ಲಿ ತಯಾರಿಸಿದ ತ್ರಿವರ್ಣ ಧ್ವಜದ ಬಳಕೆ ಮತ್ತು ಮಾರಾಟ ಮಾಡದಂತೆ ಕೇಂದ್ರ ಗೃಹ ಸಚಿವಾಲಯ ನಿಷೇಧ ಹೇರಿದೆಯಾದರೂ, ಪ್ಲಾಸ್ಟಿಕ್ ಮತ್ತು ಕಾಗದದ ರಾಷ್ಟ್ರ ಧ್ವಜಗಳ ಬಳಕೆ ಮತ್ತು ಮಾರಾಟ ಇನ್ನೂ ನಿಲ್ಲುವಂತೆ ಕಾಣುತ್ತಿಲ್ಲ. ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನದಂದು ದೇಶದಾದ್ಯಂತ ಸರಕಾರಿ ಶಾಲಾ ಕಾಲೇಜು, ಸಂಘ ಸಂಸ್ಥೆಗಳಲ್ಲಿ ಶುದ್ಧ ಖಾದಿಯಿಂದ ತಯಾರಿಸಿದ ಧ್ವಜಗಳನ್ನೇ ಹಾರಿಸುತ್ತಾರೆ. ಆದರೆ ಶಾಲಾ ಮಕ್ಕಳ ಕೈಯಲ್ಲಿ ಹೆಚ್ಚಾಗಿ ಕಾಗದ ಅಥವಾ ಪ್ಲಾಸ್ಟಿಕ್‌ನಿಂದ ತಯಾರಿಸಿದ ಧ್ವಜಗಳು ಕಂಡು ಬರುತ್ತಿವೆ. ಮಾರುಕಟ್ಟೆಯಲ್ಲಿ ಇವುಗಳ ಮಾರಾಟವೇ ಅಧಿಕವಾಗಿದೆ. ಕಡಿಮೆ ಬೆಲೆಗೆ ಸಿಗುವ ಈ ಪ್ಲಾಸ್ಟಿಕ್ ಧ್ವಜಗಳನ್ನು ಮಕ್ಕಳು ಖರೀದಿಸಿ ಕಾರ್ಯಕ್ರಮ ಮುಗಿದ ನಂತರ ಶಾಲಾ ಆವರಣದಲ್ಲಿ ಅಥವಾ ರಸ್ತೆ, ಚರಂಡಿ ಪಕ್ಕದಲ್ಲಿ ಎಸೆದು ಬಿಡುತ್ತಾರೆ. ಈ ಧ್ವಜಗಳು ತ್ಯಾಜ್ಯದಲ್ಲಿ ಸೇರಿ ತಿಪ್ಪೆಗುಂಡಿಯಲ್ಲಿ ಛಿದ್ರ ಛಿದ್ರವಾಗಿ ಬಿದ್ದಿರುತ್ತವೆ. ಇಂತಹ ನಡವಳಿಕೆಯಿಂದಾಗಿಯೇ ನಾವು ರಾಷ್ಟ್ರಧ್ವಜಕ್ಕೆ ಅಗೌರವ ತೋರಿದಂತಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಭಾರತೀಯರು ಕೂಡ ಈ ಸಮಸ್ಯೆಯ ಬಗ್ಗೆ ಗಂಭೀರ ಚಿಂತನೆ ಮಾಡಬೇಕಾಗಿದೆ. ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಕೆಲವೇ ದಿನಗಳು ಬಾಕಿ ಉಳಿದಿವೆೆ. ಈ ಸಂದರ್ಭದಲ್ಲಿ ಯಾರೂ ಪ್ಲಾಸ್ಟಿಕ್ ಮತ್ತು ಕಾಗದದ ಧ್ವಜಗಳು ಬಳಸದಂತೆ ಹಾಗೂ ಮಾರಾಟ ಮಾಡದಂತೆ ರಾಷ್ಟ್ರ ಧ್ವಜದ ಮಹತ್ವದ ಕುರಿತು ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಇಲಾಖೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ.

Writer - -ಮೌಲಾಲಿ ಕೆ. ಆಲಗೂರ, ಬೋರಗಿ

contributor

Editor - -ಮೌಲಾಲಿ ಕೆ. ಆಲಗೂರ, ಬೋರಗಿ

contributor

Similar News