ಬ್ಯಾಂಕ್‌ಗಳಿಂದಲೇ ದರೋಡೆ

Update: 2018-08-07 05:03 GMT

ಇಂದಿರಾ ಗಾಂಧಿಯ ಆಡಳಿತ ಕಾಲದ ಹಲವು ಸಾಧನೆಗಳಲ್ಲಿ ‘ಬ್ಯಾಂಕ್ ರಾಷ್ಟ್ರೀಕರಣ’ವೂ ಒಂದು. ಉಳ್ಳವರಿಗೆ ಸೀಮಿತವಾಗಿದ್ದ ಬ್ಯಾಂಕ್‌ಗಳು, ರೈತರು, ಶ್ರೀಸಾಮಾನ್ಯರಿಗೆ ತನ್ನ ಬಾಗಿಲನ್ನು ತೆರೆದುದು ಆ ಬಳಿಕ. ಸಾಲಮೇಳಗಳ ಮೂಲಕ ಬಡವರು ಬ್ಯಾಂಕ್‌ನ ಮೆಟ್ಟಿಲೇರಿದಾಗ, ‘ಬ್ಯಾಂಕ್ ಏನು ಇಂದಿರಾ ಗಾಂಧಿಯ ಅಪ್ಪನದೋ’ ಎಂದು ಟೀಕಿಸಿದವರಿದ್ದರು. ಸಾಲಮೇಳಗಳ ಮೂಲಕ ಬ್ಯಾಂಕ್‌ಗಳನ್ನು ಇಂದಿರಾಗಾಂಧಿ ನಾಶ ಮಾಡುತ್ತಿದ್ದಾರೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬರತೊಡಗಿದ್ದವು. ಆದರೆ ಈ ದೇಶದ ಬ್ಯಾಂಕ್‌ಗಳನ್ನು ನಿಜಕ್ಕೂ ಲೂಟಿ ಮಾಡಿದವರು ಯಾರು ಮತ್ತು ಅವರೀಗ ಎಲ್ಲಿ ಬಚ್ಚಿಟ್ಟುಕೊಂಡಿದ್ದಾರೆ ಎನ್ನುವುದನ್ನು ನಾವು ನೋಡುತ್ತಿದ್ದೇವೆ. ಒಂದು ಕಾಲದಲ್ಲಿ ಬ್ಯಾಂಕ್ ರಾಷ್ಟ್ರೀಕರಣದ ಮೂಲಕ ಇಂದಿರಾಗಾಂಧಿ ಆರ್ಥಿಕ ಕ್ರಾಂತಿಯನ್ನು ಮಾಡಿದ್ದರೆ, ಇಂದು ನರೇಂದ್ರ ಮೋದಿಯ ಕಾಲದಲ್ಲಿ ಬ್ಯಾಂಕ್‌ಗಳನ್ನು ಮತ್ತೆ ಖಾಸಗೀಕರಣಗೊಳಿಸುವ ಸಂಚು ನಡೆಯುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮಲ್ಯ, ಮೋದಿಯಂಥವರು ಮುಳುಗಿಸಿದ ಬ್ಯಾಂಕ್‌ನ್ನು ಜನಸಾಮಾನ್ಯರ ಹಣವನ್ನು ಬಲವಂತದಿಂದ ಕಿತ್ತು ಉಳಿಸುವ ಪ್ರಯತ್ನ ನಡೆಯುತ್ತಿದೆ. ಶ್ರೀಸಾಮಾನ್ಯರ ನಂಬಿಕೆಯ ತಳಹದಿಯಲ್ಲಿ ನಿಂತಿದ್ದ ದೇಶದ ಬ್ಯಾಂಕ್‌ಗಳು ಇಂದು ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿವೆ.

‘ನೋಟು ನಿಷೇಧ’ದ ಉದ್ದೇಶ ಕಪ್ಪು ಹಣವನ್ನು ಪತ್ತೆ ಹಚ್ಚುವುದು ಆಗಿರಲಿಲ್ಲ ಎನ್ನುವುದು ಇದೀಗ ದೇಶಕ್ಕೆ ಮನವರಿಕೆಯಾಗಿದೆ. ಅದಾಗಲೇ ಬೃಹತ್ ಉದ್ಯಮಿಗಳ ವಸೂಲಾಗದ ಸಾಲ ಹಲವು ಲಕ್ಷ ಕೋಟಿಯನ್ನು ದಾಟಿದ್ದು, ಬ್ಯಾಂಕ್‌ಗಳನ್ನು ಮುಳುಗಿಸಿದ ಉದ್ಯಮಿಗಳು ಒಬ್ಬೊಬ್ಬರಾಗಿ ದೇಶ ಬಿಡುತ್ತಿದ್ದರು. ದೇಶದ ಬ್ಯಾಂಕ್‌ಗಳ ಸ್ಥಿತಿ ಮುಳುಗುತ್ತಿರುವ ಹಡಗಿನಂತಾಗಿತ್ತು. ಇಂತಹ ಸಂದರ್ಭದಲ್ಲಿ ದೇಶದ ಜನರು ಬೆವರಿಳಿಸಿ ದುಡಿದಿಟ್ಟಿದ್ದ ಹಣವನ್ನು ಬಲವಂತವಾಗಿ ಕಿತ್ತು ಬ್ಯಾಂಕ್ ತಿಜೋರಿ ತುಂಬಿಸಲೆಂದೇ ‘ನೋಟು ನಿಷೇಧ’ವನ್ನು ಘೋಷಿಸಿತು. ಜನಸಾಮಾನ್ಯರು ದಿನನಿತ್ಯ ಬಳಕೆ ಮಾಡುವ 500 ರೂಪಾಯಿ ನೋಟುಗಳ ನಿಷೇಧ, ದೇಶದ ಶ್ರೀಸಾಮಾನ್ಯನ ಬದುಕನ್ನೇ ಅಸ್ತವ್ಯಸ್ತಗೊಳಿಸಿತು. ನೋಟು ನಿಷೇಧದಿಂದ ಯಾವುದೇ ಅಂಬಾನಿ, ಅದಾನಿಗಳ ಕಪ್ಪು ಹಣ ಹೊರಗೆ ಬರಲಿಲ್ಲ. ಯಾವುದೇ ಬೃಹತ್ ಶ್ರೀಮಂತ ಉದ್ಯಮಿಗಳು ಬ್ಯಾಂಕ್‌ನ ಮುಂದೆ ಕ್ಯೂ ನಿಲ್ಲಲಿಲ್ಲ. ಮನೆಯಲ್ಲಿ ಬಚ್ಚಿಟ್ಟ ಕಪ್ಪು ಹಣ ಹೊರಬಿತ್ತು ಎಂದು ಯಾವುದೇ ಶ್ರೀಮಂತ ಬೀದಿ ಪಾಲಾದ ಪ್ರಕರಣಗಳು ವರದಿಯಾಗಲಿಲ್ಲ. ಆದರೆ ಮಧ್ಯಮ ವರ್ಗದ ಬದುಕು ಮಾತ್ರ ಮೂರಾಬಟ್ಟೆಯಾಯಿತು. ತಮ್ಮದೇ ಹಣವನ್ನು ಪಡೆಯಲು ಬ್ಯಾಂಕ್‌ನ ಮುಂದೆ ಸರದಿಯಲ್ಲಿ ನಿಲ್ಲಬೇಕಾಯಿತು. ಗ್ರಾಮೀಣ ಉದ್ದಿಮೆಗಳು ನೆಲಕಚ್ಚಿದವು. ಆ ವರೆಗೆ ಬ್ಯಾಂಕ್ ದರೋಡೆ ವರದಿಗಳನ್ನು ಕೇಳುತ್ತಿದ್ದವರು, ಬ್ಯಾಂಕುಗಳೇ ತಮ್ಮನ್ನು ದರೋಡೆ ಮಾಡುತ್ತಿರುವುದನ್ನು ಅಸಹಾಯಕರಂತೆ ನಿಂತು ನೋಡಬೇಕಾಯಿತು.

ನೋಟು ನಿಷೇಧದ ಬಳಿಕ, ಬ್ಯಾಂಕುಗಳನ್ನು ಉಳಿಸುವುದಕ್ಕಾಗಿ ಸರಕಾರ ಹೊಸ ತಂತ್ರವನ್ನು ಹೂಡಿತು. ಆವರೆಗೆ ಬ್ಯಾಂಕ್‌ಗಳು ಜನಸಾಮಾನ್ಯರ ನೆರವಿಗಿದ್ದಿದ್ದರೆ, ಇದೀಗ ಬ್ಯಾಂಕ್‌ಗಳನ್ನು ಉಳಿಸಲು ಜನಸಾಮಾನ್ಯರು ಎಂಬ ನೀತಿಯನ್ನು ಅನುಸರಿಸತೊಡಗಿತು. ಶ್ರೀಸಾಮಾನ್ಯ ಗ್ರಾಹಕರನ್ನು ಗರಿಷ್ಠ ಮಟ್ಟದಲ್ಲಿ ಸುಲಿಗೆ ಮಾಡುವುದೇ ಬ್ಯಾಂಕ್‌ಗಳನ್ನು ಲಾಭದಾಯಕವಾಗಿಸುವ ತಂತ್ರವಾಗಿಸಿತು. ಇದೀಗ ಆ ಲಾಭಗಳನ್ನು ಬ್ಯಾಂಕ್‌ಗಳು ಘೋಷಿಸಿವೆ. ಬಹುಶಃ ನರೇಂದ್ರ ಮೋದಿಯವರ ಆಡಳಿತದ ಅತಿ ದೊಡ್ಡ ಸಾಧನೆ ಇದೇ ಇರಬೇಕು.

ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದ ಬ್ಯಾಂಕ್ ಖಾತೆಯ ಮೇಲೆ ದಂಡವಿಧಿಸುವ ಮೂಲಕ ದೇಶದ 21 ಕ್ಕೂ ಅಧಿಕ ಸರಕಾರಿ ಬ್ಯಾಂಕ್‌ಗಳು ಮತ್ತು ಮೂರು ಪ್ರಮುಖ ಖಾಸಗಿ ಬ್ಯಾಂಕ್‌ಗಳು ಸುಮಾರು 5000 ಕೋಟಿ ರೂಪಾಯಿಯನ್ನು ಸಂಗ್ರಹಿಸಿವೆ. ತಿಂಗಳ ಸರಾಸರಿ ಬ್ಯಾಲೆನ್ಸ್ ಇಳಿಕೆಯ ಆಧಾರದಲ್ಲಿ ಠೇವಣಿ ಮೇಲೆ ದಂಡ ವಿಧಿಸುವುದನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2017ರ ಎಪ್ರಿಲ್‌ನಲ್ಲಿ ಮರು ಆರಂಭಿಸಿತ್ತು. ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದ ಗ್ರಾಹಕರಿಂದ ಎಲ್ಲ ಬ್ಯಾಂಕ್‌ಗಳು ಒಟ್ಟಾಗಿ 4,989 ಕೋಟಿ ರೂಪಾಯಿ ಸಂಗ್ರಹಿಸಿದೆ. ಇದರಲ್ಲಿ ಅರ್ಧ ಪಾಲು ಸ್ಟೇಟ್ ಬ್ಯಾಂಕಿನದ್ದು ಎನ್ನುವುದನ್ನು ಗಮನಿಸಬೇಕಾಗಿದೆ. ಇದೇ ಸ್ಟೇಟ್ ಬ್ಯಾಂಕ್ ವಿಜಯ ಮಲ್ಯ ಸೇರಿದಂತೆ 63 ಬೃಹತ್ ಉದ್ದಿಮೆದಾರರ ಸಾಲವನ್ನು ಪರೋಕ್ಷವಾಗಿ ಮನ್ನಾ ಮಾಡಿ ಮಾಧ್ಯಮಗಳಲ್ಲಿ ಸುದ್ದಿ ಮಾಡಿತ್ತು. ‘ವಸೂಲಾಗದ ಸಾಲ’ವೆಂದು ಘೋಷಿಸಲಾಗುವ ಉದ್ದೇಶವೂ ಪರೋಕ್ಷವಾಗಿ ಸಾಲ ಮನ್ನಾವೇ ಆಗಿದೆ. ವಿತ್ತ ಸಚಿವರು, ಇದನ್ನು ಸಾಲ ಮನ್ನಾ ಎಂದು ತಿಳಿಯಬಾರದು ಎಂದು ಸ್ಪಷ್ಟೀಕರಣ ನೀಡಿದ್ದರು. ಈ ದೇಶದಲ್ಲಿ ಪಡೆದ ಸಾಲವನ್ನು ವಸೂಲಿ ಮಾಡುವುದೇ ಕಷ್ಟವಿರುವಾಗ, ವಸೂಲಾಗದ ಸಾಲವೆಂದು ಪ್ರತ್ಯೇಕ ಪಡಿಸಿದ ಸಾವಿರಾರು ಕೋಟಿ ಹಣವನ್ನು ವಸೂಲು ಮಾಡಲು ಬ್ಯಾಂಕ್‌ಗಳು ಮುಂದಾಗುತ್ತವೆಯೇ? ಮುಂದಾಗುವುದಾಗಿದ್ದರೆ ಅವುಗಳನ್ನು ‘ವಸೂಲಾಗದ ಸಾಲ’ ಎಂದು ಪ್ರತ್ಯೇಕವಾಗಿ ವಿಂಗಡಿಸಿ, ಫೈಲ್‌ಗಳನ್ನು ಮುಚ್ಚುವ ಅಗತ್ಯವಿದೆಯೇ?

ಇಂದು ಗ್ರಾಹಕರಿಂದ ಬಲವಂತವಾಗಿ ದೋಚಿದ 5,000 ಕೋಟಿ ರೂಪಾಯಿ ವಸೂಲಿಯನ್ನು ಬ್ಯಾಂಕ್‌ಗಳು ತಮ್ಮ ಸಾಧನೆಯೆಂಬಂತೆ ಬಿಂಬಿಸುತ್ತಿವೆ. ಈ ಹಣ ನಿಜಕ್ಕೂ ಯಾರದ್ದು? ಸ್ಟೇಟ್ ಬ್ಯಾಂಕ್‌ನಂತಹ ಬ್ಯಾಂಕ್‌ಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳಲಾಗದ ವರ್ಗ ಯಾವುದು? ಅಂಬಾನಿ, ಅದಾನಿ, ಟಾಟಾ, ಬಿರ್ಲಾಗಳಂತೂ ಆಗಿರಲು ಸಾಧ್ಯವಿಲ್ಲ. ವಿವಿಧ ಖಾಸಗಿ ಮತ್ತು ಸರಕಾರಿ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಮಾಸಿಕ ವೇತನ ಪಡೆಯುವ ಸಿಬ್ಬಂದಿಯೇ ಇವರಲ್ಲಿ ಅಧಿಕ. ಇವರೇನೂ ಬ್ಯಾಂಕಿನಿಂದ ಸಾಲ ಪಡೆದವರಲ್ಲ. ಮನೆ, ಸಂಸಾರ, ಕಷ್ಟ, ನಷ್ಟ, ಮಾನ, ಮರ್ಯಾದೆ ಎಂದು ಒದ್ದಾಡುತ್ತಾ ಬದುಕಿನ ಬಂಡಿ ಎಳೆಯುವ ಈ ದೇಶದ ಪ್ರಜೆಗಳು ಇವರು. ರೈತರು, ಕಾರ್ಮಿಕರೂ ಈ ಸಾಲಿನಲ್ಲಿ ಬರುತ್ತಾರೆ. ಇವರಿಗೆ ಬ್ಯಾಂಕ್‌ಗಳ ಹೊಸ ಹೊಸ ನಿಯಮಗಳ ಬಗ್ಗೆ ವಿಶೇಷ ಅರಿವಿರುವುದಿಲ್ಲ. ಸ್ಮಾರ್ಟ್ ಫೋನ್‌ಗಳೂ ಇವರಲ್ಲಿಲ್ಲ. ಇವರ ಅಜ್ಞಾನವೇ ಬ್ಯಾಂಕ್‌ಗಳ ಪಾಲಿನ ಬಂಡವಾಳವಾಗಿದೆ.

ಸ್ಟೇಟ್‌ಬ್ಯಾಂಕ್‌ನಲ್ಲಿ ಕನಿಷ್ಠ ಬ್ಯಾಲೆನ್ಸ್‌ನಲ್ಲಿ 50 ರೂಪಾಯಿ ಅನಿರೀಕ್ಷಿತವಾಗಿ ಕಡಿಮೆಯಾದರೂ ಶ್ರೀಸಾಮಾನ್ಯ ದಂಡ ಪಾವತಿ ಮಾಡಬೇಕಾಗುತ್ತದೆ. ಇಲ್ಲಿ, ಆತ ಮಾಡಿದ ತಪ್ಪಾದರೂ ಏನು? ಬ್ಯಾಂಕುಗಳನ್ನು ನಂಬಿದ ಒಂದೇ ಕಾರಣಕ್ಕಾಗಿ ದಂಡವನ್ನು ತೆರಬೇಕೇ? ಮಲ್ಯರಂತಹ ಬೃಹತ್ ಉದ್ದಿಮೆಗಳು ಬ್ಯಾಂಕ್‌ನ ಕೋಟಿ ಗಟ್ಟಲೆ ಸಾಲವನ್ನು ಕಟ್ಟದೆ, ವಿದೇಶದಲ್ಲಿ ಅಡಗಿಕುಳಿತಿರುವ ಹೊತ್ತಿನಲ್ಲಿ, ಶ್ರೀಸಾಮಾನ್ಯ ತನ್ನ ಕನಿಷ್ಠ ಠೇವಣಿಯಲ್ಲಿ ನೂರು ರೂಪಾಯಿ ಕಡಿಮೆ ಇಟ್ಟಿದ್ದಾನೆ ಎಂದು ಆತನಿಗೆ ದಂಡ ವಿಧಿಸುವ ಬ್ಯಾಂಕ್ ನೀತಿ ಅತ್ಯಂತ ಅಮಾನುಷವಾದುದು. ನೋಟು ನಿಷೇಧದ ಗಾಯದ ಮೇಲೆ ಬ್ಯಾಂಕುಗಳು ಎಳೆದಿರುವ ಬರೆ ಇದು. ನಮ್ಮ ಅರ್ಥವ್ಯವಸ್ಥೆಯ ಹತಾಶೆ ಮತ್ತು ಅಸಹಾಯಕತೆಯ ಪರಮಾವಧಿಯನ್ನು ಇದು ಹೇಳುತ್ತದೆ. ಒಂದು ಕಾಲದಲ್ಲಿ ಫೈನಾನ್ಸ್ ಕಂಪೆನಿಗಳನ್ನು ಬ್ಲೇಡ್ ಕಂಪೆನಿಗಳು ಎಂದು ಮಾಧ್ಯಮಗಳು ವ್ಯಂಗ್ಯವಾಡುತ್ತಿದ್ದವು. ಇದೀಗ ಆ ಸ್ಥಾನದಲ್ಲಿ ಸರಕಾರ ನಡೆಸುವ ಬ್ಯಾಂಕ್‌ಗಳೇ ಜನರ ತಲೆ ಬೋಳಿಸುವುದಕ್ಕೆ ಬ್ಲೇಡ್ ಹಿಡಿದು ಕಾಯುತ್ತಿರುವ ಸ್ಥಿತಿ ನಿರ್ಮಾಣವಾಗಿರುವುದು, ಈ ದೇಶದ ಅರ್ಥ ವ್ಯವಸ್ಥೆ ಯಾವ ದಿಕ್ಕಿನತ್ತ ಸಾಗುತ್ತಿದೆ ಎನ್ನುವುದನ್ನು ಹೇಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News