ಭಾರತದಲ್ಲಿ ವಾಟ್ಸ್ಯಾಪ್, ಫೇಸ್‍ ಬುಕ್, ಇನ್‍ಸ್ಟಾಗ್ರಾಂ ಬ್ಲಾಕ್?

Update: 2018-08-07 07:07 GMT

ಹೊಸದಿಲ್ಲಿ, ಆ.7: ರಾಷ್ಟ್ರೀಯ ಭದ್ರತೆಗೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಗಂಡಾಂತರ ಎದುರಾಗುವಂತಹ ಸನ್ನಿವೇಶಗಳುಂಟಾದಾಗ ಸಾಮಾಜಿಕ ಜಾಲತಾಣಗಳಾದ ವಾಟ್ಸ್ಯಾಪ್, ಇನ್‍ಸ್ಟಾಗ್ರಾಂ, ಫೇಸ್‍ ಬುಕ್, ಟೆಲಿಗ್ರಾಂ ಮುಂತಾದವುಗಳನ್ನು ಬ್ಲಾಕ್ ಮಾಡುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ತಾಂತ್ರಿಕ ಕ್ರಮಗಳ ಬಗ್ಗೆ  ಟೆಲಿಕಾಂ ಇಲಾಖೆ ಸಂಬಂಧಿತರಿಂದ  ಅಭಿಪ್ರಾಯ ಕೇಳಿದೆ.

ಜುಲೈ 18ರಂದು ಈ ಬಗ್ಗೆ  ಎಲ್ಲಾ  ಟೆಲಿಕಾಂ ಆಪರೇಟರುಗಳು, ಇಂಟರ್ನೆಟ್ ಸರ್ವಿಸ್ ಪ್ರೊವೈಡರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ, ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ  ಮುಂತಾದ ಸಂಘಟನೆಗಳಿಗೆ ಟೆಲಿಕಾಂ ಇಲಾಖೆ ಪತ್ರ ಬರೆದು ಈ ಮೊಬೈಲ್ ಅಪ್ಲಿಕೇಶನ್‍ಗಳನ್ನು ಐಟಿ ಕಾಯಿದೆಯ ಸೆಕ್ಷನ್ 69ಎ ಅನ್ವಯ ನಿರ್ಬಂಧಿಸುವ ಕುರಿತಂತೆ ಅವುಗಳ ಅಭಿಪ್ರಾಯ ಕೇಳಿದೆ.

ಐಟಿ ಕಾಯಿದೆಯ ಸೆಕ್ಷನ್ 66ಎ  ಸಾರ್ವಜನಿಕರಿಗೆ ಯಾವುದೇ ಮಾಹಿತಿ ನಿರ್ಬಂಧಿಸುವ ಅಧಿಕಾರವನ್ನು ಸರಕಾರಕ್ಕೆ ನೀಡುತ್ತದೆ. ಇತ್ತೀಚೆಗೆ ದೇಶದಲ್ಲಿ ಸಂಭವಿಸಿರುವ ಹಲವಾರು ಗುಂಪು ಥಳಿತ ಪ್ರಕರಣಗಳ ಹಿನ್ನೆಲೆಯಲ್ಲಿ  ಈ ಬೆಳವಣಿಗೆ ನಡೆದಿದೆಯೆನ್ನಲಾಗಿದೆ. ಹೆಚ್ಚಿನ ಗುಂಪು ಥಳಿತ ಘಟನೆಗಳಿಗೆ ವಾಟ್ಸ್ಯಾಪ್ ನಕಲಿ ಸಂದೇಶಗಳು ಹಾಗೂ ವದಂತಿಗಳೇ ಕಾರಣವೆಂದು ಈಗಾಗಲೇ ತಿಳಿದು ಬಂದಿದೆ.

ಇಂತಹ ನಕಲಿ ಹಾಗೂ ಫಾರ್ವರ್ಡ್ ಸಂದೇಶಗಳ ರವಾನೆ ನಿಯಂತ್ರಿಸುವ ಕುರಿತಂತೆ ವಾಟ್ಸ್ಯಾಪ್ ಇತ್ತೀಚೆಗೆ ಸೂಚಿಸಿದ  ಕ್ರಮಗಳು ಸರಕಾರಕ್ಕೆ ಸಮಾಧಾನ ತಂದಿಲ್ಲವೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News