ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ನಿವಾಸದೆದುರು ತ್ಯಾಜ್ಯ ಸುರಿಯಿರಿ ಎಂದ ಸುಪ್ರಿಂ ಕೋರ್ಟ್

Update: 2018-08-07 09:08 GMT

ಹೊಸದಿಲ್ಲಿ, ಆ.7: ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸೋನಿಯಾ ವಿಹಾರ್ ಪ್ರದೇಶದ ಜನವಸತಿ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುವ ಕುರಿತಾದ ಪ್ರಸ್ತಾವಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಕಾಲನಿಯ ನಿವಾಸಿಗಳಿಗೆ ಕಿರುಕುಳ ಉಂಟು ಮಾಡುವ ಬದಲು ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರ ಅಧಿಕೃತ ನಿವಾಸದೆದುರು ಏಕೆ ತ್ಯಾಜ್ಯ ಸುರಿಯಬಾರದೆಂದು ದಿಲ್ಲಿ ಸರಕಾರವನ್ನು ಪ್ರಶ್ನಿಸಿದೆ.

ಅಸಂಸ್ಕರಿತ ತ್ಯಾಜ್ಯಗಳ ರಾಶಿ ರಾಜಧಾನಿಯ ರಸ್ತೆ ಬದಿಗಳಲ್ಲಿ ಕಂಡುಬಂದಿರುವುದು ಕಳವಳಕಾರಿ. ದಿಲ್ಲಿ ಸರಕಾರ ಈ ನಿಟ್ಟಿನಲ್ಲಿ ಸಾಕಷ್ಟು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜಸ್ಟಿಸ್ ಮದನ್ ಬಿ ಲೋಕೂರ್ ಹಾಗೂ ದೀಪಕ್ ಗುಪ್ತಾ ಅವರನ್ನೊಳಗೊಂಡ ಪೀಠ ಹೇಳಿತು.

ಸಿಗರೇಟ್ ಸೇವನೆಗಿಂತಲೂ ಹೆಚ್ಚಾಗಿ ವಾಯು ಮಾಲಿನ್ಯದಿಂದಾಗಿ ಶ್ವಾಸಕೋಶದ ಕ್ಯಾನ್ಸರ್ ಪ್ರಮಾಣ ಹೆಚ್ಚುತ್ತಿದೆ ಎಂಬ ಸರ್ ಗಂಗಾರಾಮ್ ಆಸ್ಪತ್ರೆ ನಡೆಸಿದ ಇತ್ತೀಚಿಗಿನ ಅಧ್ಯಯನ ವರದಿಯ ಬಗ್ಗೆ ಉಲ್ಲೇಖಿಸಿದ ನ್ಯಾಯಾಲಯ, ‘‘ಇಂತಹ ಸನ್ನಿವೇಶದಲ್ಲಿ ದಿಲ್ಲಿಯಲ್ಲಿ ಯಾರಾದೂ ಬದುಕುಳಿಯಬಹುದೇ ? ಇದೊಂದು ತುರ್ತು ಪರಿಸ್ಥಿತಿ. ಆದರೆ ನಿಮ್ಮ ಪ್ರತಿಕ್ರಿಯೆಯಲ್ಲಿ ಅಂತಹ ತುರ್ತೇನೂ ಕಾಣುತ್ತಿಲ್ಲ’’ ಎಂದು ದಿಲ್ಲಿ ಸರಕಾರದ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್ ಅವರನ್ನುದ್ದೇಶಿಸಿ ನ್ಯಾಯಾಲಯ ತರಾಟೆಗೈದಿತು.

ಇದಕ್ಕೆ ಪ್ರತಿಕ್ರಿಯಿಸಿದ ಪಿಂಕಿ ಆನಂದ್, ದಿಲ್ಲಿಯ ಸೋನಿಯಾ ವಿಹಾರ್ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುವ ಉದ್ದೇಶವಿದೆಯಾದರೂ ಸ್ಥಳೀಯರ ವಿರೋಧದಿಂದ ವಿಳಂಬವುಂಟಾಗಿದೆ ಎಂದರು.

ಸ್ಥಳೀಯ ನಿವಾಸಿಗಳನ್ನೇಕೆ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿಲ್ಲ. ಆ ಸ್ಥಳ ಹೇಗಿದೆಯೆಂದು ಗೊತ್ತಿಲ್ಲ. ಆದರೆ ಅಲ್ಲಿ ಶ್ರೀಮಂತ ಕುಟುಂಬಗಳು ವಾಸಿಸುತ್ತಿಲ್ಲವೆಂಬ ಕಾರಣಕ್ಕೆ ನೀವು ಈ ಪ್ರದೇಶ ಆಯ್ದುಕೊಂಡಿದ್ದೀರಿ ಎಂದು ಹೇಳಬಹುದು. ಜನವಸತಿ ಪ್ರದೇಸದಲ್ಲಿ ತ್ಯಾಜ್ಯ ಸುರಿಯುವುದು ಸ್ವೀಕಾರಾರ್ಹವಲ್ಲ ಎಂದು ನ್ಯಾಯಾಲಯ ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News