ಉತ್ತರ ಪ್ರದೇಶ: ಹಣಕ್ಕಾಗಿ, ಭಡ್ತಿಗಾಗಿ ಪೊಲೀಸರಿಂದ ಅಮಾಯಕರ ನಕಲಿ ಎನ್ ಕೌಂಟರ್

Update: 2018-08-07 09:22 GMT

ಲಕ್ನೋ, ಆ.7: ಉತ್ತರ ಪ್ರದೇಶದ ಕೆಲ ಪೊಲೀಸ್ ಅಧಿಕಾರಿಗಳು ನಡೆಸುವ ನಕಲಿ ಎನ್‍ಕೌಂಟರ್ ಗಳ ಬಗ್ಗೆ ‘ಇಂಡಿಯಾ ಟುಡೆ’ ಟಿವಿ ಬಹಿರಂಗ ಪಡಿಸಿದ ಕೆಲವೊಂದು ವಿಚಾರಗಳ  ಹಿನ್ನೆಲೆಯಲ್ಲಿ  ರಾಜ್ಯ ಪೊಲೀಸ್ ಮಹಾನಿರ್ದೇಶಕ ಒ.ಪಿ. ಸಿಂಗ್ ಮೂವರು ಪೊಲೀಸ್ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿದ್ದಾರೆ.

ಲಂಚ ಪಡೆಯಲು, ಕೆಲವೊಮ್ಮೆ ಪ್ರಚಾರಕ್ಕಾಗಿ ಹಾಗೂ ಭಡ್ತಿಗಾಗಿ ಕೆಲ ಪೊಲೀಸರು ನಕಲಿ ಶೂಟೌಟ್  ನಡೆಸುತ್ತಿದ್ದಾರೆಂದು ‘ಇಂಡಿಯಾ ಟುಡೆ’ಯ  ವರದಿ  ಬಹಿರಂಗ ಪಡಿಸಿತ್ತು. ರಾಜ್ಯದಲ್ಲಿ ಆದಿತ್ಯನಾಥ್ ಸರಕಾರ ಅಧಿಕಾರ ವಹಿಸಿದಂದಿನಿಂದ ಸುಮಾರು 1,500 ಎನ್‍ಕೌಂಟರ್ ಗಳಲ್ಲಿ 60 ಮಂದಿಯ ಹತ್ಯೆ ನಡೆದು ಸುಮಾರು 400 ಮಂದಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಈ ವರದಿ ಪ್ರಾಮುಖ್ಯತೆ ಪಡೆದಿತ್ತು.

ಕೆಲ ಪೊಲೀಸರು ಹಣ ಮತ್ತು ಭಡ್ತಿಗಾಗಿ ನಿರಪರಾಧಿಗಳ ಮೇಲೆ ಆರೋಪ ಹೊರಿಸಿ ಎನ್‍ಕೌಂಟರ್ ಗಳಲ್ಲಿ ಅವರನ್ನು ಸಾಯಿಸಲು ಸಿದ್ಧರಿದ್ದಾರೆ ಎಂದು ‘ಇಂಡಿಯಾ ಟುಡೆ’ ವರದಿ ತಿಳಿಸಿತ್ತು.

ಆಗ್ರಾ ವಲಯದಲ್ಲಿ 241 ಎನ್‍ಕೌಂಟರ್ ನಡೆದಿದೆ. ಇಲ್ಲಿನ ಚಿತ್ರ ಹಟ್ ಪೊಲೀಸ್ ಠಾಣೆಯ ಎಸ್ಸೈ ಒಬ್ಬರು  ಅಮಾಯಕನೊಬ್ಬನನ್ನು ಬಲಿ ಪಡೆಯಲು ಸುಮಾರು 8 ಲಕ್ಷ ರೂ. ಬೇಡಿಕೆಯಿಟ್ಟಿದ್ದರೆಂದೂ ವರದಿ ಬಹಿರಂಗ ಪಡಿಸಿತ್ತು.

ಉತ್ತರ ಪ್ರದೇಶದ ಪೊಲೀಸ್ ಇಲಾಖೆಯು ಇಂಡಿಯಾ ಟುಡೆ ವರದಿಯನ್ನು ಗಂಭೀರವಾಗಿ ಪರಿಗಣಿಸಿದೆಯೆಂದು ಪೊಲೀಸ್ ಮಹಾನಿರ್ದೇಶಕರ ಕಚೇರಿ ತಿಳಿಸಿದೆಯಲ್ಲದೆ ಕ್ಯಾಮರಾದಲ್ಲಿ ಸೆರೆ ಸಿಕ್ಕ ಕೆಲ ಪೊಲೀಸರ ಕೃತ್ಯಗಳ ಬಗ್ಗೆಗಿನ ಮಾಹಿತಿ ಉತ್ತರ ಪ್ರದೇಶ ಪೊಲೀಸರ ವರ್ಚಸ್ಸನ್ನೇ ಹಾಳುಗೆಡಹಿದೆ ಎಂದಿದೆ.

ಈ  ನಕಲಿ ಎನ್‍ಕೌಂಟರ್ ಪ್ರಕರಣಗಳ ಬಗೆಗೆ ಅಡಿಷನಲ್ ಎಸ್ಪಿ ಶ್ರೇಣಿಯ ಅಧಿಕಾರಿ ಇಲಾಖಾ ತನಿಖೆ ನಡೆಸಲಿದ್ದಾರೆ ಎಂದು ಆಗ್ರಾದ ಹಿರಿಯ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಅಮಿತ್ ಪಾಠಕ್ ತಿಳಿಸಿದ್ದಾರೆ.

ಈ ನಕಲಿ ಎನ್‍ಕೌಂಟರ್ ವಿಚಾರವಾಗಿ ವಿಪಕ್ಷಗಳು ಬಿಜೆಪಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಸಮಾಜವಾದಿ ಪಕ್ಷದ ವಕ್ತಾರ ಸುನಿಲ್ ಸಜನ್ ಮಾತನಾಡುತ್ತಾ “ಇಂಡಿಯಾ ಟುಡೆ ವರದಿಯು ಪ್ರಬಲ ಸಾಕ್ಷಿ ಒದಗಿಸಿದೆ, ನಾವು ಇದನ್ನೇ ಹೇಳುತ್ತಿದ್ದೆವು. ಆದರೆ ಆದಿತ್ಯನಾಥ್ ಸರಕಾರ ಎನ್‍ಕೌಂಟರ್‍ಗಳ ಬಗ್ಗೆ ಹೆಮ್ಮೆ ಪಟ್ಟುಕೊಂಡಿತ್ತು. ಈ ಎನ್‍ಕೌಂಟರ್ ಗಳು ನೈಜ ಕಾರಣಗಳಿಗಾಗಿ ನಡೆದಿದ್ದರೆ  ಕಾನೂನು ಸುವ್ಯವಸ್ಥೆ ಉತ್ತಮಗೊಳ್ಳುತ್ತಿತ್ತು'' ಎಂದಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವ ಎನ್‍ಕೌಂಟರ್ ಗಳು ನಕಲಿ ಹಾಗೂ ಜನರನ್ನು ಭಯ ಹುಟ್ಟಿಸುವ ಉದ್ದೇಶ ಹೊಂದಿವೆ ಎಂದು ತಾನು ಈಗಾಗಲೇ ಹೇಳಿದ್ದನ್ನು ಕಾಂಗ್ರೆಸ್ ನೆನಪಿಸಿಕೊಂಡಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News