ಬಾಗೇಪಲ್ಲಿ: ಪೊಲೀಸ್ ಗೋಲಿಬಾರ್ ಗೆ ಹುತಾತ್ಮರಾದ ರೈತರಿಗೆ ಶ್ರದ್ದಾಂಜಲಿ

Update: 2018-08-07 11:36 GMT

ಬಾಗೇಪಲ್ಲಿ,ಆ.07:1980 ಆಗಸ್ಟ್ 7ರಂದು ರೈತರು ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ಪೊಲೀಸರು ಹಾರಿಸಿದ ಗುಂಡೇಟಿಗೆ ಇಬ್ಬರು ರೈತರು ಹುತಾತ್ಮರಾದರು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಜೆಸಿಬಿ ಪಿ.ಮಂಜುನಾಥರೆಡ್ಡಿ ತಿಳಿಸಿದರು.

ಅವರು ಮಂಗಳವಾರ ಸಿಪಿಎಂ ಪಕ್ಷದ ಆಶ್ರಯದಲ್ಲಿ ಪ್ರವಾಸಿ ಮಂದಿರದ ಬಳಿ ಹುತಾತ್ಮ ಸ್ತೂಪದ ಮುಂದೆ ಹುತಾತ್ಮ ರೈತರಿಗೆ ಏರ್ಪಡಿಸಿದ್ದ  ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿ, ಅಂದಿನ ರಾಜ್ಯದ ಮುಖ್ಯಮಂತ್ರಿ ಗುಂಡೂರಾವ್ ಸರಕಾರದ ಆಡಳಿತ ಕಾಲದಲ್ಲಿ ರೈತರು ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ರಾಜ್ಯ ವಿವಿಧ ಕಡೆಗಳಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ನವಲಗುಂದ, ನರಗುಂದಗಳಲ್ಲಿ ರೈತರು ಹೋರಾಟಕ್ಕೆ ಇಳಿದಾಗ ಪೊಲೀಸರು ಹಾರಿಸಿದ ಗುಂಡಿಗೆ ರೈತರು ಬಲಿಯಾಗಿದ್ದರು. ಇದನ್ನು ಪ್ರತಿಭಟಿಸಿ ಮಾಜಿ ಶಾಸಕ ಎ.ವಿ.ಅಪ್ಪಸ್ವಾಮಿರೆಡ್ಡಿ ನೇತೃತ್ವದಲ್ಲಿ ಸಾವಿರಾರರು ಜನರು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಿದ್ದರೂ ಪೊಲೀಸರು ವಿನಾಕಾರಣ ಲಾಠಿ ಪ್ರಹಾರ ಮಾಡಿ ಕೊನೆಗೆ ಗೋಲಿಬಾರ್ ಮಾಡಿದಾಗ ತಾಲೂಕಿನ ಆಚೇಪಲ್ಲಿ ಗ್ರಾಮದ ದದ್ದಿಮಪ್ಪ,ಮದ್ದಲಖಾನ ಗ್ರಾಮದ ಆದಿನಾರಾಯಣರೆಡ್ಡಿ ಎಂಬ ರೈತರು ಹುತಾತ್ಮರಾದರು. ಅನೇಕ ರೈತರು ಗಾಯಗೊಂಡರು. ಆ ಸಂದರ್ಭ ಸಿಪಿಐ ಆಗಿದ್ದ ಪೃಥ್ವೀರಾಜ್ ರೈತರ ಮೇಲೆ ಏಕಾಏಕಿ ಗುಂಡು ಹಾರಿಸಿದ್ದರು ಎಂದ ಅವರು ಈ ಪ್ರಕರಣವನ್ನು ಹೋರಾಟಗಾರರ ಮೇಲೆ ಹೊರಿಸಲು ಪೊಲೀಸರು ಪಟ್ಟಣದ ಅಂಗಡಿಗಳ ಮಾಲಿಕರೊಂದಿಗೆ ನಮ್ಮ ಅಂಗಡಿಗಳನ್ನು ಹೋರಾಟಗಾರರು ಲೂಟಿ ಮಾಡಿದ್ದಾರೆ ಎಂದು ಸುಳ್ಳು ದೂರು ಸ್ವೀಕರಿಸಿ ಪ್ರಕರಣಗಳನ್ನು ದಾಖಲು ಮಾಡಿದ್ದರು ಎಂದ ಅವರು, ರೈತರು ಯಾವುದೇ ನ್ಯಾಯಸಮ್ಮತ ಹೋರಾಟಗಳನ್ನು ಮಾಡಲಿ, ಪೊಲೀಸರು ಹಾಗೂ ಅಧಿಕಾರಿಗಳು ರೈತರಿಗೆ ಹಿಂದಿನಿಂದಲೂ ಕಿರುಕುಳ ನೀಡುತ್ತಾ ಬಂದಿದ್ದಾರೆ ಎಂದರು.

ಹುತಾತ್ಮರ ಸ್ತೂಪಕ್ಕೆ ಪುಷ್ಪಗಳನ್ನು ಹಾಕುವುದರ ಮೂಲಕ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಿಪಿಎಂ ನಗರ ಘಟಕದ ಅಧ್ಯಕ್ಷ ವಾಲ್ಮೀಕಿ ನಗರದ ಅಶ್ವಥ್ಥಪ್ಪ, ತಾಲೂಕು ಸಿಐಟಿಯು ಅಧ್ಯಕ್ಷ ಬಿ.ಆಂಜನೇಯರೆಡ್ಡಿ, ಡಿವೈಎಫ್‍ಐ ಅಧ್ಯಕ್ಷ ಬಿ.ಎಂ.ಹೇಮಚಂದ್ರ, ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀರಾಮಪ್ಪ, ಗ್ರಾಪಂ ಅಧ್ಯಕ್ಷ ಶಂಕರಪ್ಪ , ಸದಸ್ಯ ಬೂರಗಮಡುಗು ನರಸಿಂಹಪ್ಪ, ಪುರಸಭೆ ಸದಸ್ಯರಾದ ಪಿ.ಒಬಳರಾಜು, ಮಹಮದ್ ಅಕ್ರಂ ಹಾಗೂ ಮುಖಂಡರಾದ ನರಸಿಂಹರೆಡ್ಡಿ, ಕಂಚುಕೋಟ ಮೂರ್ತಿ, ಜಿ.ಎಂ.ರಾಮಕೃಷ್ಣಪ್ಪ, ಗಂಗಾಧರ್ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News