ಸಮ್ಮಿಶ್ರ ಸರಕಾರದ ಸಾಲಮನ್ನಾ ಯೋಜನೆ ಗೊಂದಲದ ಗೂಡು: ಶಾಸಕ ಸಿ.ಟಿ.ರವಿ

Update: 2018-08-07 12:02 GMT

ಚಿಕ್ಕಮಗಳೂರು, ಆ.7: ಸಮ್ಮಿಶ್ರ ಸರಕಾರದ ಸಾಲಮನ್ನಾ ಯೋಜನೆ ಗೊಂದಲದ ಗೂಡಾಗಿದೆ. ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಸರಕಾರದ ಸಾಲಮನ್ನಾ ಯೋಜನೆ ಆದೇಶ ಇನ್ನೂ ತಲುಪಿಲ್ಲ, ಸಹಕಾರಿ ಬ್ಯಾಂಕ್‍ಗಳಿಗೂ ಹಣ ಬಿಡುಗಡೆ ಮಾಡಿಲ್ಲ. ಪರಿಣಾಮ ರೈತರು ಮರುಸಾಲ ಪಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ ಸಾಲಮನ್ನಾ ಯೋಜನೆ ಸಂಬಂಧದ ಗೊಂದಲವನ್ನು ಸರಕಾರ ಶೀಘ್ರವೇ ಪರಿಸಹರಿಸಬೇಕು ಎಂದು ಶಾಸಕ ಸಿ.ಟಿ.ರವಿ ಸರಕಾರನ್ನು ಆಗ್ರಹಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದು ಮೂರನೇ ತಿಂಗಳಿಗೆ ಕಾಲಿಟ್ಟಿದ್ದರೂ ಸರಕಾರದ ಆಡಳಿತದಲ್ಲಿ ಗೊಂದಲಗಳು ನಿವಾರಣೆಯಾಗಿಲ್ಲ ಎಂದು ಆರೋಪಿಸಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಐದು ಎಕರೆ ಸರಕಾರಿ ಭೂಮಿಯಲ್ಲಿ ಅನಧಿಕೃತ ಸಾಗುವಳಿ ಮಾಡುವ ರೈತರಿಗೆ ಭೂಮಿಯನ್ನು ಧೀರ್ಘ ಅವಧಿಗೆ ಲೀಸ್‍ಗೆ ನೀಡುವ ಶಾಸನ ಮಾಡಲಾಗಿತ್ತು. ಅದರ ಸರಕಾರಿ ಆದೇಶ ಮತ್ತು ನಿಯಮಗಳು ಇನ್ನೂ ಜಾರಿಗೆ ಬಂದಿಲ್ಲ, ಅನಧಿಕೃತ ಸಾಗುವಳಿ ಮಾಡುವ ರೈತರ ಮೇಲಿನ ಮೊಕದ್ದಮೆಗಳು ಮುಂದುವರೆದಿದ್ದು, ಶೀಘ್ರ ಈ ಶಾಸನದ ರೂಪುರೇಷೆಗಳ ಬಗ್ಗೆ ಆದೇಶ ಹೊರಡಿಸಿ ಲೀಸ್‍ಗೆ ನೀಡಲು ತಕ್ಷಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ಚಿಕ್ಕಮಗಳೂರು ತಾಲೂಕಿನಲ್ಲಿ ಪರಿಶಿಷ್ಟ ಜಾತಿಯ 538, ಪರಿಶಿಷ್ಟ ಪಂಗಡದ 17, ಇತರೆ 754 ಜನರ ಶವ ಸಂಸ್ಕಾರ ಸಹಾಯಧನವನ್ನು 2016ರಿಂದ ಬಿಡುಗಡೆ ಮಾಡಿಲ್ಲ. ಆಡಳಿತ ಮತ್ತು ಆಳುವವರ ಸಣ್ಣತನದಿಂದ ಮಾನವೀಯ ಯೋಜನೆಯೊಂದು ಹಳ್ಳ ಹಿಡಿಯುತ್ತಿದೆ. ತಕ್ಷಣ ಬಾಕಿ ಹಣವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ ಅವರು, ಹಿಂದಿನ ಸರಕಾರ ಅರಣ್ಯ, ಕೆರೆ ಜಾಗದಲ್ಲಿನ ಅಕ್ರಮ ನಿವೇಶನಗಳಿಗೆ ಹೊರತು ಪಡಿಸಿ ಉಳಿದೆಡೆ ಬಡವರು ನಿರ್ಮಿಸಿಕೊಂಡ ನಿವೇಶನ, ಮನೆಗಳಿಗೆ ಹಕ್ಕುಪತ್ರ ನೀಡುವ ಆದೇಶ ಹೊರಡಿಸಿತ್ತು. ಆದರೆ ಸಮ್ಮಿಶ್ರ ಸರಕಾರದ ಕಂದಾಯ ಸಚಿವ ದೇಶಪಾಂಡೆ ಅವರು, ಗೋಮಾಳ, ಡೀಮ್ಡ್ ಅರಣ್ಯ, ಸಿಆರ್‍ಜೆಡ್ ಜಾಗದಲ್ಲಿ ಹಕ್ಕುಪತ್ರ ನೀಡಲು ಸಾಧ್ಯವಿಲ್ಲ ಎಂದು ಆದೇಶ ಹೊರಡಿಸಿದ್ದಾರೆ. ಇದರಿಂದ ಲಕ್ಷಾಂತರ ಬಡವರು ಹಕ್ಕುಪತ್ರ ನಿವೇಶನಗಳಿಂದ ವಂಚಿತರಾಗುತ್ತಾರೆ. ಸರಕಾರ ಈ ಆದೇಶವನ್ನು ಪುನರ್ ಪರಿಶೀಲಿಸಿ ಬಡವರ ಪರವಾದ ಸುತ್ತೋಲೆ ಹೊರಡಿಸಬೇಕೆಂದರು. 

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎಚ್.ಡಿ.ತಮ್ಮಯ್ಯ, ಕೋಟೆ ರಂಗನಾಥ್ ಉಪಸ್ಥಿತರಿದ್ದರು.

ಹಾಸನ ಹಾಲು ಒಕ್ಕೂಟದಲ್ಲಿ ಹಾಲಿಗೆ ಕೆಮಿಕಲ್ ಮಿಕ್ಸ್ ಮಾಡುತ್ತಿದ್ದ ಪ್ರಕರಣದ ಬಗ್ಗೆ ದೂರು ಸಲ್ಲಿಕೆಯಾಗಿದ್ದು, ಇದರಲ್ಲಿ ಸುಮಾರು 16 ಕೋ. ರೂ. ಅವ್ಯವಹಾರ ನಡೆದಿದೆ ಎಂದು ಹೇಳಲಾಗುತ್ತಿದೆ. ಘಟನೆ ಸಂಬಂಧ ಚಿಕ್ಕಮಗಳೂರಿನ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಹಲವಾರು ವರ್ಷಗಳಿಂದ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಜಾಲವು ರಾಜ್ಯ ಮತ್ತು ಹೊರರಾಜ್ಯದಲ್ಲಿಯೂ ಹರಡಿರುವ ಶಂಕೆ ವ್ಯಕ್ತವಾಗಿದೆ. ರಾಜ್ಯ ಸರಕಾರ ವಿಶೇಷ ತನಿಖಾ ತಂಡ ರಚಿಸಿ ಅಕ್ರಮದ ಸಮಗ್ರ ತನಿಖೆ ನಡೆಸಬೇಕು.

- ಸಿ.ಟಿ. ರವಿ, ಶಾಸಕ

ಸೀನಿಯರ್ ಸಿಟಿಜನ್ ಆದ ಬಳಿಕ ಸಂಸತ್ ಚುನಾವಣೆ ಸ್ಪರ್ಧೆ ಆಲೋಚನೆ: ತಾನು ಮುಂಬರುವ ಲೋಕಸಭಾ ಚುನಾವಣೆ ಸ್ಫರ್ಧಿ ಆಕಾಂಕ್ಷಿಯಲ್ಲ, ರಾಜ್ಯ ರಾಜಕೀಯದಲ್ಲಿಯೇ ಉಳಿಯುವುದೇ ತನ್ನ ಆಸಕ್ತಿಯಾಗಿದ್ದು, ಈ ಬಗ್ಗೆ ಸೀನಿಯರ್ ಸಿಟಿಜನ್ ಆದ ಬಳಿಕ ಆಲೋಚಿಸುತ್ತೇನೆ. ಆದರೆ ಪ್ರಸಕ್ತ ಪಕ್ಷ ತೀರ್ಮಾನಿಸಿದರೆ ಸ್ಫರ್ಧಿಸುವೆ. ಶೋಭಾ ಕರಂದ್ಲಾಜೆ ಮುಂದಿನ ಚುನಾವಣೆಯಲ್ಲಿ ಸ್ಫರ್ಧಿಸುವುದಿಲ್ಲ ಎಂದು ಸಾರ್ವಜನಿಕವಾಗಿ ಹೇಳಿದ್ದಾರೆ. ಪಕ್ಷ ಯಾವ ತೀರ್ಮಾನ ತಗೆದುಕೊಳ್ಳುತ್ತದೋ ನೋಡಬೇಕು.
- ಸಿ.ಟಿ.ರವಿ, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News