ಪತ್ರಕರ್ತ ಕರುಣಾನಿಧಿ ಬಗ್ಗೆ ನಿಮಗೆ ಗೊತ್ತೇ?

Update: 2018-08-08 04:03 GMT

ಚೆನ್ನೈ, ಆ.8: ತಮಿಳು ರಾಜಕಾರಣದ ಉದಯಸೂರ್ಯ ಎನಿಸಿದ್ದ ಎಂ.ಕರುಣಾನಿಧಿ ಹತ್ತು ಹಲವು ಕ್ಷೇತ್ರಗಳಲ್ಲಿ ಕೈಯಾಡಿಸಿದ ಸವ್ಯಸಾಚಿಯಾಗಿದ್ದು, ಪತ್ರಿಕೋದ್ಯಮದಲ್ಲೂ ಅವರ ಸಾಧನೆ ಗಮನಾರ್ಹ. ಇವರ ಪತ್ರಿಕೋದ್ಯಮ ಕ್ಷೇತ್ರ ಪಯಣ ತಿರುವರೂರಿನಲ್ಲಿ ಆರಂಭವಾಗಿದ್ದು, 80 ವರ್ಷಗಳ ಕಾಲ ಪತ್ರಕರ್ತರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದ ಅಪೂರ್ವ ಸಾಧನೆ ಇವರದ್ದು.

ಶಾಲಾ ಬಾಲಕನಾಗಿದ್ದಾಗ 15ನೇ ವಯಸ್ಸಿನಲ್ಲೇ ಅವರು "ಮನವರ್ ನೇಸನ್" ಎಂಬ ಕೈಬರಹದ ಪಾಕ್ಷಿಕವನ್ನು ಹೊರತರುತ್ತಿದ್ದರು. ಶಾಲೆಯ ಸಹಪಾಠಿಗಳು ಹಾಗೂ ಸ್ನೇಹಿತರಿಗೆ ಇದನ್ನು 1938ರಿಂದಲೂ ಹಂಚುತ್ತಾ ಬಂದಿದ್ದರು. ಆದರೆ ಬಳಿಕ ಎಂಟು ತಿಂಗಳ ಕಾಲ ಇದು ನಿಷ್ಕ್ರಿಯವಾಗಿತ್ತು. ಬಳಿಕ ಕರುಣಾನಿಧಿ 'ಮುರಸೋಳಿ' ಎಂಬ ಹೊಸ ಪತ್ರಿಕೆ ಆರಂಭಿಸಿದರು. ಇದನ್ನು ನನ್ನ ಮೊದಲ ಮಗು ಎಂದೇ ಕರುಣಾನಿಧಿ ಕರೆದಿದ್ದರು. 1942ರಲ್ಲಿ ಆರಂಭವಾದ ಈ ಪತ್ರಿಕೆಯಲ್ಲಿ 'ಚೇರನ್' ಎಂಬ ಹೆಸರಿನಲ್ಲಿ ಪ್ರಬಂಧಗಳನ್ನು ಬರೆಯುತ್ತಿದ್ದರು. ಇದರ ಪ್ರತಿನಿಧಿಗಳನ್ನು ಸ್ವಯಂಗೌರವ ಚಳವಳಿಯ ಬೆಂಬಲಿಗರಿಗೆ ಕಳುಹಿಸುತ್ತಿದ್ದರು.

"ಮುರಸೋಳಿ ಸಾಪ್ತಾಹಿಕ ಪತ್ರಿಕೆಯಾಗಿದ್ದಾಗ ಮುದ್ರಣ ವೆಚ್ಚಕ್ಕಾಗಿ ಮನೆಯ ವಸ್ತುಗಳನ್ನು ಒತ್ತೆ ಇಟ್ಟಿದ್ದೆ" ಎಂದು ಕರುಣಾನಿಧಿ ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ. ಕರುಣಾನಿಧಿ ಪ್ರಿಂಟಿಂಗ್ ಪ್ರೆಸ್‌ನಿಂದ ತಿರುವರೂರು ಬೀದಿಯಲ್ಲಿ ಪತ್ರಿಕೆಗಳನ್ನು ತಲೆಯ ಮೇಲೆ ಹೊತ್ತೊಯ್ಯುತ್ತಿದ್ದರು. 1942ರಲ್ಲಿ ಕರುಣಾನಿಧಿಯವರ ಮೊದಲ ಬೈಲೈನ್ ಪ್ರಕಟವಾಯಿತು. 'ಇಳಮೈ ಪಾಳಿ' ಎಂಬ ಇವರ ಲೇಖನ ಕಾಂಚಿಪುರಂನ ದ್ರಾವಿಡ ನಾಡು ಪತ್ರಿಕೆಯಲ್ಲಿ ಪ್ರಕಟವಾಯಿತು.

ಅದು ಸಂಪಾದಕರ ಮೇಲೆ ಎಷ್ಟು ಪ್ರಭಾವ ಬೀರಿತ್ತು ಎಂದರೆ ತಿರುವರೂರಿಗೆ ಸಮಾರಂಭವೊಂದಕ್ಕೆ ಆಗಮಿಸಿದ್ದ ಸಂಪಾದಕರು ಈ ಲೇಖನವನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿ, ಎಂ.ಕರುಣಾನಿಧಿ ಯಾರು ಎಂಬ ಕುತೂಹಲ ತಮಗಿದೆ ಎಂದು ಹೇಳಿದ್ದರು. ಕರುಣಾನಿಧಿಯನ್ನು ಅವರ ಮುಂದೆ ಕರೆತಂದಾಗ, ಶಾಲಾ ಬಾಲಕನನ್ನು ನೋಡಿ ಸಂಪಾದಕರು ದಿಗ್ಭ್ರಾಂತರಾಗಿದ್ದರು. ಇನ್ನೆಂದೂ ಪತ್ರಿಕೆಗೆ ಬರೆಯದಂತೆ ಮತ್ತು ಓದಿಗೆ ಗಮನಹರಿಸುವಂತೆ ಸಲಹೆ ಮಾಡಿದ್ದರು!

ಆದರೆ ಅದನ್ನು ಪಾಲಿಸದ ಕರುಣಾನಿಧಿ ಮುಂದೆ ಸಂಪಾದಕ ಸಿ.ಎನ್.ಅಣ್ಣಾದೊರೈ ಅವರನ್ನು ಅನುಸರಿಸಿ ದ್ರಾವಿಡ ಚಳವಳಿಗೆ ಧುಮುಕಿದರು. ಪೆರಿಯಾರ್ ಇ.ವಿ.ರಾಮಸ್ವಾಮಿಯವರ 'ಕುಡಿಯರಸು' ಪತ್ರಿಕೆಯ ಸಹಾಯಕ ಸಂಪಾದಕರಾಗಿಯೂ ಅವರು ಕೆಲಸ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News