ರಾಜ್ಯಸಭಾ ಉಪಸಭಾಪತಿ ಸ್ಥಾನಕ್ಕೆ ವಿಪಕ್ಷಗಳ ಅಭ್ಯರ್ಥಿಯಾಗಿ ಬಿ.ಕೆ. ಹರಿಪ್ರಸಾದ್

Update: 2018-08-08 09:13 GMT

ಹೊಸದಿಲ್ಲಿ, ಆ.8: ಕಾಂಗ್ರೆಸ್ ಸಂಸದ ಬಿ.ಕೆ. ಹರಿಪ್ರಸಾದ್ ಅವರು ರಾಜ್ಯಸಭಾ ಉಪಸಭಾಪತಿ ಸ್ಥಾನಕ್ಕೆ ವಿಪಕ್ಷಗಳ ಅಭ್ಯರ್ಥಿಯಾಗಲಿದ್ದಾರೆ.  ಎನ್‍ಡಿಎ ಅಭ್ಯರ್ಥಿ, ಜೆಡಿ(ಯು) ಪಕ್ಷದ ಹರಿವಂಶ್ ನಾರಾಯಣ್ ಸಿಂಗ್ ವಿರುದ್ಧ  ಆಗಸ್ಟ್ 9ರ ಚುನಾವಣೆಯಲ್ಲಿ ಹರಿಪ್ರಸಾದ್ ಸ್ಪರ್ಧಿಸಲಿದ್ದಾರೆ. ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.

66 ವರ್ಷದ ಹರಿಪ್ರಸಾದ್ ಅವರು ಕರ್ನಾಟಕದಿಂದ ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭೆಗೆ ಆಯ್ಕೆಯಾದವರು. ಅವರು ವಿಪಕ್ಷಗಳ ಜಂಟಿ ಅಭ್ಯರ್ಥಿಯಾಗಿದ್ದು ಅವರಿಗೆ ಬೆಂಬಲವಾಗಿ ಇತರ ವಿಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ.

ಎಲ್ಲಾ ವಿಪಕ್ಷ ನಾಯಕರೂ ಜತೆ ಸೇರಿ ಮುಂದಿನ ಕಾರ್ಯಯೋಜನೆಯ ಬಗ್ಗೆ ಚರ್ಚಿಸಲಿದ್ದಾರೆ ಎಂದು ಹರಿಪ್ರಸಾದ್ ಹೇಳಿದ್ದಾರೆ. ಈ ಹಿಂದೆ ಇತರ ಪಕ್ಷಗಳು ಕಾಂಗ್ರೆಸ್ ಅಭ್ಯರ್ಥಿ ಕಣಕ್ಕಿಳಿಸುವ ಕುರಿತಾಗಿ ಅಷ್ಟೊಂದು ಸಹಮತ ಹೊಂದಿರಲಿಲ್ಲ. ಆದರೆ  ವಂದನಾ ಚವಾಣ್ ಅವರನ್ನು ಕಣಕ್ಕಿಳಿಸುವುದಾಗಿ ಹೇಳಿದ್ದ ಶರದ್ ಪವಾರ್ ಅವರ ಎನ್‍ಸಿಪಿ, ನವೀನ್ ಪಟ್ನಾಯಕ್ ಆಕೆಯ ಅಭ್ಯರ್ಥಿತನವನ್ನು ಬೆಂಬಲಿಸುವುದಿಲ್ಲವೆಂದು ತಿಳಿದ ನಂತರ ಮಂಗಳವಾರ ಸಂಜೆ  ಹಿಂದೆ ಸರಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಬಿಜೆಡಿ ಹಾಗೂ ಶಿವಸೇನೆ ಬೆಂಬಲಿಸುವುದಾದರೆ ಮಾತ್ರ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಎನ್‍ಸಿಪಿ ತಿಳಿಸಿತ್ತು.

ಸರಕಾರವು ಎಐಎಡಿಎಂಕೆ, ಟಿಆರ್‍ಎಸ್ ಹಾಗೂ ನವೀನ್ ಪಟ್ನಾಯಕ್ ಅವರ ಬೆಂಬಲ ದೊರೆಯುವುದೆಂಬ ಆಶಾವಾದದಲ್ಲಿದೆ. ಇಷ್ಟಾದರೆ ಎನ್‍ಡಿಎ ಅಭ್ಯರ್ಥಿಗೆ ರಾಜ್ಯಸಭೆಯ ಒಟ್ಟು 245 ಸದಸ್ಯರ ಪೈಕಿ 123 ಮತಗಳು ದೊರೆಯಲಿದೆ. ವಿಪಕ್ಷಗಳ ಬಳಿ ರಾಜ್ಯಸಭೆಯಲ್ಲಿ 117 ಸ್ಥಾನಗಳಿವೆ. ಟಿಡಿಪಿ, ಎಎಪಿ ಹಾಗೂ ಪಿಡಿಪಿ ಕೂಡ ವಿಪಕ್ಷಗಳ ಅಭ್ಯರ್ಥಿಗೆ ಬೆಂಬಲ ಘೋಷಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News