ರಾಜ್ಯಸಭಾ ಉಪಸಭಾಪತಿ ಚುನಾವಣೆಗೆ ಯುಪಿಎ ಅಭ್ಯರ್ಥಿಯಾಗಿ ಹರಿಪ್ರಸಾದ್ ನಾಮಪತ್ರ

Update: 2018-08-08 13:42 GMT

ಬೆಂಗಳೂರು, ಆ. 8: ಹಿಂದುಳಿದ ವರ್ಗಗಳ ಪ್ರಬಲ ನಾಯಕ, ಕೋಮು ಸೌಹಾರ್ದದ ಗಟ್ಟಿ ಧ್ವನಿಯಾಗಿರುವ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ಅವರು ರಾಜ್ಯಸಭಾ ಉಪಸಭಾಪತಿ ಚುನಾವಣೆಗೆ ಯುಪಿಎ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

1954ರ ಜುಲೈ 29ರಂದು ಬೆಂಗಳೂರಿನಲ್ಲಿ ಎ.ಕೆಂಪಯ್ಯ ಮತ್ತು ಕೆ.ಗುಣವತಿ ದಂಪತಿ ಪುತ್ರರಾಗಿ ಜನಿಸಿದ ಬಿ.ಕೆ.ಹರಿಪ್ರಸಾದ್, ಮಲ್ಲೇಶ್ವರಂನ ಎಂಇಎಸ್ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ ಮುಗಿಸಿದರು. ಶೇಷಾದ್ರಿಪುರಂ ಕಾಲೇಜಿನಲ್ಲಿ ಪದವಿ, ರೇಣುಕಾಚಾರ್ಯ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದಾರೆ.

ವಿದ್ಯಾರ್ಥಿ ನಾಯಕರಾಗಿ ಗುರುತಿಸಿಕೊಂಡಿದ್ದ ಹರಿಪ್ರಸಾದ್ ಅವರು, 1977ರಲ್ಲಿ ಡಿ.ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕಾರ್ಯಕರ್ತನ ಸ್ಥಾನದಿಂದ ಉನ್ನತ ನಾಯಕನ ಸ್ಥಾನಕ್ಕೇರಿರುವ ಏಕೈಕ ನಾಯಕ ಹರಿಪ್ರಸಾದ್, ಕಟ್ಟಾ ಕಾಂಗ್ರೆಸ್ ಕಾರ್ಯಕರ್ತ. ವಿದ್ಯಾರ್ಥಿ ಹಂತದಲ್ಲೆ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಸಂಘಟನೆ ಎನ್‌ಎಸ್‌ಯುಐ ಮೂಲಕ ಮುಂಚೂಣಿಗೆ ಬಂದ ಹರಿಪ್ರಸಾದ್, ವಿದ್ಯಾರ್ಥಿ ನಾಯಕರಾಗಿ ಎನ್‌ಎಸ್‌ಯುಐ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಎನ್‌ಎಸ್‌ಯುಐ, ಯುವ ಕಾಂಗ್ರೆಸ್, ಸೇವಾದಳ ಸೇರಿ ಕಾಂಗ್ರೆಸ್ ಪಕ್ಷದಲ್ಲಿ ಉನ್ನತ ಸ್ಥಾನಕ್ಕೇರಿದವರು.

ಹೋರಾಟಕ್ಕೆ ಎತ್ತಿದ ಕೈ: 1983ರಲ್ಲಿ ಬೆಂಗಳೂರಿನ ಗಾಂಧಿನಗರ ವಿಧಾನಸಭಾ ಕ್ಷೇತ್ರದಿಂದ, 1989ರಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದಾರೆ. 1980ರಲ್ಲಿ ಆರ್.ಗುಂಡೂರಾವ್ ‘ಪತ್ರಕರ್ತರನ್ನು ಅರಬ್ಬಿ ಸಮುದ್ರಕ್ಕೆ ಹಾಕಬೇಕು’ ಎಂಬ ಹೇಳಿಕೆ ನೀಡಿದ್ದರು. ಇದನ್ನು ಖಂಡಿಸಿ ಪತ್ರಿಕೆಗಳು ಖಾರವಾಗಿ ಲೇಖನಗಳನ್ನು ಪ್ರಕಟಿಸಿದ್ದವು. ಇದರ ವಿರುದ್ಧ ಯುವ ಕಾರ್ಯಕರ್ತರು ಹರಿಪ್ರಸಾದ್ ನೇತೃತ್ವದಲ್ಲಿ ಪತ್ರಿಕಾ ಕಚೇರಿಗಳಿಗೆ ಬೀಗ ಜಡಿದು, ಪತ್ರಿಕೆ ಪ್ರತಿಗಳನ್ನು ಸುಟ್ಟು ಹಾಕುವ ಮೂಲಕ ದೊಡ್ಡ ಆಂದೋಲವನ್ನು ರೂಪಿಸಿದ್ದರು. ಹೀಗಾಗಿ ಅಲ್ಲಿಂದ 1987ರ ವರೆಗೆ ಹರಿಪ್ರಸಾದ್ ಅವರಿಗೆ ಪಕ್ಷದಲ್ಲಿ ಯಾವುದೇ ಸ್ಥಾನವೂ ಸಿಗಲಿಲ್ಲ.

ಪ್ರಸ್ತುತ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಹರಿಪ್ರಸಾದ್, ಒಡಿಸ್ಸಾ, ಜಾರ್ಖಂಡ್ ಹಾಗೂ ಛತ್ತಿಸ್‌ಘಡ ರಾಜ್ಯಗಳ ಮುಂಬರುವ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಅವರನ್ನು ಕಾಂಗ್ರೆಸ್ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.

ಕೋಮುವಾದಿ ವಿರೋಧಿ ಧ್ವನಿ:

ಹಿಂದುಳಿದ ವರ್ಗಗಳ ಧ್ವನಿಯಾಗಿ, ಕೋಮು ಸಾಮರಸ್ಯಕ್ಕೆ ಮಿಡಿಯುವ ಹರಿಪ್ರಸಾದ್, ಮೂಲಭೂತವಾದಿಗಳು, ಕೋಮುವಾದಿಗಳಾದ ಆರೆಸೆಸ್ಸ್, ಸಂಘಪರಿವಾರದ ಷಡ್ಯಂತ್ರಗಳನ್ನು ಬಯಲು ಮಾಡುವ, ತರ್ಕಬದ್ಧ ವಿಚಾರ ಮಂಡಿಸುವ ವೈಚಾರಿಕ ಪ್ರಜ್ಞೆಯುಳ್ಳ ನಾಯಕರು ಎಂದರೆ ಖಂಡಿತ ಉತ್ಪ್ರೇಕ್ಷೆಯಲ್ಲ. 64 ವರ್ಷದ ಹರಿಪ್ರಸಾದ್ ಕರ್ನಾಟಕ ರಾಜ್ಯದಿಂದ ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದು, ಇದೀಗ ರಾಜ್ಯಸಭಾ ಉಪಸಭಾಪತಿ ಸ್ಥಾನವನ್ನು ಅಲಂಕರಿಸುವ ಸಾಧ್ಯತೆಗಳಿವೆ. ನಾಳೆ(ಆ.9) ಉಪಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಎಲ್ಲರ ಚಿತ್ತ ರಾಜ್ಯಸಭಾ ಚುನಾವಣೆಯತ್ತ ನೆಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News