ತಮಿಳುನಾಡಿನ ಅಭಿವೃದ್ಧಿಗೆ ಕರುಣಾನಿಧಿ ಕೊಡುಗೆ ಅಪಾರ: ಎಚ್.ಡಿ.ಕುಮಾರಸ್ವಾಮಿ

Update: 2018-08-08 13:47 GMT

ಬೆಂಗಳೂರು, ಆ.8: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ, ದಕ್ಷಿಣ ಭಾರತದ ಒಬ್ಬ ಪ್ರಮುಖ ಮುತ್ಸದ್ದಿ ರಾಜಕಾರಣಿ. ಬಡವರು, ದೀನ ದಲಿತರ ಪರವಾಗಿ ಸುದೀರ್ಘವಾಗಿ ರಾಜಕಾರಣ ಮಾಡಿದವರು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಬುಧವಾರ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ 18ನೆ ಪುಣ್ಯತಿಥಿ ಅಂಗವಾಗಿ ವಿಧಾನಸೌಧದ ಆವರಣದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ತಮಿಳುನಾಡಿನಲ್ಲಿ ಐದು ಬಾರಿ ಮುಖ್ಯಮಂತ್ರಿಯಾಗಿ, ಹಲವಾರು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದು, ತಮಿಳುನಾಡಿನ ಅಭಿವೃದ್ಧಿಗೆ ದೊಡ್ಡಮಟ್ಟದ ಕೊಡುಗೆ ನೀಡಿರುವ ಕರುಣಾನಿಧಿ, ನಿಧನರಾಗಿರುವುದು ನಮ್ಮೆಲ್ಲರಿಗೂ ನೋವು ತಂದಿದೆ ಎಂದು ಕುಮಾರಸ್ವಾಮಿ ಹೇಳಿದರು.

ಸುದೀರ್ಘವಾದ ರಾಜಕೀಯ ಜೀವನ ನಡೆಸಿದ ಅವರು, ರೈತ ಕುಟುಂಬದಲ್ಲಿ ಜನಿಸಿ, ಚಿತ್ರರಂಗದಲ್ಲಿ ಲೇಖಕನಾಗಿ ಜೀವನ ಆರಂಭಿಸಿದರು. ನಂತರದ ದಿನಗಳಲ್ಲಿ ರಾಜಕೀಯದಲ್ಲಿ ಅವರು ತೊಡಗಿಕೊಂಡಿದ್ದು ನಮ್ಮಂತಹ ಯುವಕರಿಗೆ ಮಾರ್ಗದರ್ಶನವಾಗಿದೆ ಎಂದು ಅವರು ತಿಳಿಸಿದರು.

ಕರುಣಾನಿಧಿಯವರನ್ನು ಹಲವಾರು ಬಾರಿ ತಾನು ಭೇಟಿಯಾಗಿದ್ದೇನೆ. ಅವರೊಂದಿಗೆ ನನ್ನ ಭಾವನೆಗಳನ್ನು ಮುಕ್ತವಾಗಿ ಚರ್ಚೆ ಮಾಡಿದ್ದೇನೆ. 1996ರಲ್ಲಿ ಕೇಂದ್ರದಲ್ಲಿ ಸಮ್ಮಿಶ್ರ ಸರಕಾರ ರಚನೆಯಾಗಿ ಕನ್ನಡಿಗರೊಬ್ಬರು (ಎಚ್.ಡಿ. ದೇವೇಗೌಡ) ಪ್ರಧಾನಿಯಾಗಲು ಪ್ರಮುಖ ಪಾತ್ರ ನಿರ್ವಹಿಸಿದವರು ಕರುಣಾನಿಧಿ ಎಂದು ಕುಮಾರಸ್ವಾಮಿ ಸ್ಮರಿಸಿದರು.

ಅದೇ ರೀತಿ ನಮ್ಮ ರಾಜ್ಯದ ಸಾಹಿತಿ ಹಾಗೂ ಲೇಖಕ ಸುಮತೀಂದ್ರ ನಾಡಿಗರು ನಿನ್ನೆ ನಿಧನರಾಗಿದ್ದಾರೆ. ಭಗವಂತ ಕರುಣಾನಿಧಿ ಹಾಗೂ ಸುಮತೀಂದ್ರ ನಾಡಿಗ ಅವರ ಕುಟುಂಬಕ್ಕೆ ಈ ನೋವಿನಿಂದ ಹೊರಬರುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News