ಕರುಣಾನಿಧಿಗೆ ಗೌರವ ಸಲ್ಲಿಸಿ ಕಲಾಪ ಮುಂದೂಡಿಕೆ: ಲೋಕಸಭೆಯ ಇತಿಹಾಸದಲ್ಲೇ ಇದು ಮೊದಲು

Update: 2018-08-08 15:04 GMT

ಹೊಸದಿಲ್ಲಿ, ಆ. 8: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ವರಿಷ್ಠ ಕರುಣಾನಿಧಿ ಅವರ ನಿಧನಕ್ಕೆ ಸಂತಾಪ ಸೂಚಿಸಿ ಬುಧವಾರ ಲೋಕಸಭೆ ಹಾಗೂ ರಾಜ್ಯ ಸಭೆ ಕಲಾಪವನ್ನು ಮುಂದೂಡಲಾಯಿತು. ಯಾವತ್ತೂ ಸಂಸದರಾಗಿರದ ವ್ಯಕ್ತಿಯೊಬ್ಬರಿಗೆ ಸಂತಾಪ ಸೂಚಿಸಿ ಕಲಾಪವನ್ನು ಮುಂದೂಡಿರುವುದು ಲೋಕಸಭೆಯ ಇತಿಹಾಸದಲ್ಲೇ ಇದೇ ಮೊದಲು.

 ಐದು ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಅವರು, 13 ಬಾರಿ ಶಾಸಕರಾಗಿದ್ದರು. ಆದರೆ, ಅವರು ಒಂದು ಬಾರಿ ಕೂಡ ಸಂಸದರಾಗಿ ಆಯ್ಕೆಯಾಗಿರಲಿಲ್ಲ. ಲೋಕಸಭೆ ಸೇರಿದ ಕೂಡಲೇ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಕರುಣಾನಿಧಿ ಅವರ ನಿಧನದ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು. ಕರುಣಾನಿಧಿ ಅವರನ್ನು ‘ದಾರ್ಶನಿಕ’ ಹಾಗೂ ‘ಜನನಾಯಕ’ ಎಂದು ವಿವರಿಸಿದ ಅವರು, ಕರುಣಾನಿಧಿ ಅವರು ಚಿತ್ರಕಥೆ ಬರೆಯುವ ಮೂಲಕ ಹಾಗೂ ಕೆಲವು ಹಿಟ್ ಚಲನಚಿತ್ರಗಳನ್ನು ನಿರ್ಮಿಸುವ ಮೂಲಕ ತನ್ನ ರಾಜಕೀಯ ಸಿದ್ಧಾಂತ ಹರಡಿದರು ಎಂದರು. ರಾಜ್ಯಸಭೆಯ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರು ಸಂತಾಪವನ್ನು ಓದಿದರು. ಕರುಣಾನಿಧಿ ಅವರು ಬಹುಮುಖಿ ವ್ಯಕ್ತಿತ್ವ ಹೊಂದಿದ್ದರು ಹಾಗೂ ಸಮಸ್ಯೆಗಳನ್ನು ಮೆಟ್ಟಿನಿಲ್ಲುವ ಕೆಚ್ಚೆದೆಯ ನಾಯಕರಾಗಿದ್ದರು ಎಂದರು.

 ಚಿತ್ರಕತೆ ಬರೆಯುವುದರೊಂದಿಗೆ ತನ್ನ ವೃತ್ತಿ ಜೀವನವನ್ನು ಆರಂಭಿಸಿದ ಕರುಣಾನಿಧಿ ತಮಿಳು ಸಿದ್ಧಾಂತವನ್ನು ಪ್ರಚಾರ ಮಾಡಲು ತಮಿಳು ಸಿನೆಮಾಗಳನ್ನು ಬಳಸಿಕೊಂಡರು ಹಾಗೂ ತಮಿಳು ಸಂಸ್ಕೃತಿಗೆ ಕೊಡುಗೆ ನೀಡಿದರು ಎಂದು ವೆಂಕಯ್ಯ ನಾಯ್ಡು ಹೇಳಿದರು. ವೌನಾಚರಣೆ ಬಳಿಕ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಸದನವನ್ನು ಒಂದು ದಿನ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News