ತಿಪ್ಪೇಸ್ವಾಮಿ ನಿಧನಕ್ಕೆ ದೇವೇಗೌಡ, ಕುಮಾರಸ್ವಾಮಿ ಸಂತಾಪ

Update: 2018-08-08 14:16 GMT

ಬೆಂಗಳೂರು, ಆ.8: ರಾಜ್ಯದ ಹಿರಿಯ ಮುಖಂಡರೂ ಹಾಗೂ ಮಾಜಿ ಸಚಿವ ತಿಪ್ಪೇಸ್ವಾಮಿ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಬಹಳ ನೋವುಂಟಾಯಿತು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ನನ್ನ ಹಾಗೂ ಜೆ.ಎಚ್.ಪಟೇಲರ ಸಚಿವ ಸಂಪುಟದಲ್ಲಿ ಸಚಿವರಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದ ತಿಪ್ಪೇಸ್ವಾಮಿ ನಿಧನದಿಂದ ಇಂದು ಜನತಾ ಪರಿವಾರದ ಹಿರಿಯ ನಾಯಕರೊಬ್ಬರನ್ನು ಕಳೆದು ಕೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.

ಸಮಾಜಕ್ಕೆ ಅವರು ನೀಡಿದ ಸೇವೆಯನ್ನು ಗಮನಿಸಿ ರಾಜ್ಯ ಸರಕಾರ ತಿಪ್ಪೇಸ್ವಾಮಿ ಅವರಿಗೆ ವಾಲ್ಮೀಕಿ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಭಗವಂತ ಮೃತರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ತುಂಬಲಿ ಎಂದು ದೇವೇಗೌಡ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಕುಮಾರಸ್ವಾಮಿ ಸಂತಾಪ
ಮಾಜಿ ಸಚಿವ ತಿಪ್ಪೇಸ್ವಾಮಿ(76) ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಚ್.ಡಿ.,ಕುಮಾರಸ್ವಾಮಿ ನಮ್ಮ ಜೊತೆಯಲ್ಲಿ ರಾಜಕೀಯಲದಲ್ಲಿ ಹಲವಾರು ವರ್ಷ ಇದ್ದು, ನಂತರ ಬೇರೆ ಪಕ್ಷಕ್ಕೆ ಹೋದ ನಾಯಕ ಸಮಾಜದ ಮುಖಂಡ ತಿಪ್ಪೇಸ್ವಾಮಿ ನಿಧನ ಹೊಂದಿರುವು ನಮಗೆ ನೋವು ತಂದಿದೆ ಎಂದರು.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುದೀರ್ಘವಾಗಿ ಆರೋಗ್ಯದ ತೊಂದರೆಯಲ್ಲಿದ್ದ ತಿಪ್ಪೇಸ್ವಾಮಿ, ನಮ್ಮ ತಂದೆಯ ಜೊತೆಯಲ್ಲಿ ಮೊದಲ ಬಾರಿ ಮಂತ್ರಿಯಾಗಿ ಕೆಲಸ ಮಾಡಿದ್ದರು. ನಾನು ಲೋಕಸಭಾ ಸದಸ್ಯನಾಗಿದ್ದ ಸಂದರ್ಭದಲ್ಲಿಯೂ ಹಲವಾರು ಬಾರಿ ಅವರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದರು.

ತಿಪ್ಪೇಸ್ವಾಮಿ ಒಬ್ಬ ಸರಳ ಜೀವಿ, ಅವರನ್ನು ಕಳೆದುಕೊಂಡಿರುವುದು ದುಃಖಕರ ಘಟನೆ. ನಾಲ್ಕು ದಶಕಗಳ ಕಾಲ ರಾಜಕೀಯ ಹೋರಾಟ, ವಾಲ್ಮೀಕಿ ಸಮುದಾಯಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿದ ರಾಜ್ಯ ಸರಕಾರವು 2017ರಲ್ಲಿ ಇವರಿಗೆ ‘ಮಹರ್ಷಿ ವಾಲ್ಮೀಕಿ ಪ್ರಶಸ್ತಿ’ ನೀಡಿ ಪುರಸ್ಕರಿಸಿತ್ತು ಎಂದು ಅವರು ಹೇಳಿದರು.

ಚಳ್ಳಕೆರೆ ಪುರಸಭಾ ಅಧ್ಯಕ್ಷರಾಗಿ ರಾಜಕೀಯ ಪ್ರವೇಶಿಸಿದ ತಿಪ್ಪೇಸ್ವಾಮಿ, ಪ್ರಥಮ ಬಾರಿಗೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ ಗಮನಾರ್ಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರು. ಎಚ್.ಡಿ.ದೇವೇಗೌಡರ ನೇತೃತ್ವದ ಸರಕಾರದಲ್ಲಿ ಅಬಕಾರಿ ಹಾಗೂ ಜೆ.ಎಚ್.ಪಟೇಲ್ ಆಡಳಿತದಲ್ಲಿ ಸಣ್ಣ ನೀರಾವರಿ ಸಚಿವರಾಗಿದ್ದರು ಎಂದು ಅವರು ಕುಮಾರಸ್ವಾಮಿ ತಿಳಿಸಿದರು.

ತಮ್ಮ ಅಧಿಕಾರಾವಧಿಯಲ್ಲಿ ವಾಲ್ಮೀಕಿ ಸಮುದಾಯವನ್ನು ಸಂಘಟಿಸಿ, ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ‘ಶ್ರೀ ವಾಲ್ಮೀಕಿ ಗುರುಪೀಠ’ ಸ್ಥಾಪಿಸಲು ಶ್ರಮಿಸಿದ ಅವರ ಸಾಧನೆ ನಿಜಕ್ಕೂ ಸ್ಮರಣೀಯ ಎಂದು ಮುಖ್ಯಮಂತ್ರಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News