ರೈತರ ಬೆಳೆ ಸರ್ವೆಗೆ ‘ಡ್ರೋನ್ ಬಳಕೆ’: ಕೃಷಿ ಸಚಿವ ಶಿವಶಂಕರ ರೆಡ್ಡಿ

Update: 2018-08-08 16:49 GMT

ಬೆಂಗಳೂರು, ಆ. 8: ರಾಯಚೂರು, ಕೊಪ್ಪಳ, ಬೀದರ್, ಕಲಬುರಗಿ, ದಾವಣಗೆರೆ, ಚಿತ್ರದುರ್ಗ ಸೇರಿ ರಾಜ್ಯದ 13 ಜಿಲ್ಲೆಗಳಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ ಎಂದು ಕೃಷಿ ಸಚಿವ ಎಚ್.ಎನ್.ಶಿವಶಂಕರರೆಡ್ಡಿ ತಿಳಿಸಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿ ಸುದ್ಧಿಗೋಷ್ಠಿಯಲಿ ಮಾತನಾಡಿದ ಅವರು, ಈ ಮುಂಗಾರು ಹಂಗಾಮಿನಲ್ಲಿ 74.69 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಆಗಸ್ಟ್ ಮೊದಲ ವಾರದ ವರೆಗೆ 49.47 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದ್ದು, ಇದು ನಿಗದಿತ ಗುರಿಗೆ ಶೇ.66ರಷ್ಟು ಪ್ರಮಾಣದಲ್ಲಿರುತ್ತದೆ ಎಂದರು.

ಪರ್ಯಾಯ ಬೆಳೆ: ತೀವ್ರ ಮಳೆ ಕೊರತೆಯಿಂದ ನಿಗದಿತ ಪ್ರಮಾಣದಲ್ಲಿ ಬಿತ್ತನೆ ಆಗಿಲ್ಲ. ಹೀಗಾಗಿ ಮಳೆ ಕೊರತೆ ಉಂಟಾಗಿರುವ 13 ಜಿಲ್ಲೆಗಳಲ್ಲಿ ಪರ್ಯಾಯ ಬೆಳೆ ಬೆಳೆಯಲು ಅಗತ್ಯ ಬಿತ್ತನೆಬೀಜ, ರಸಗೊಬ್ಬರ ಪೂರೈಕೆಗೆ ಕ್ರಮ ವಹಿಸಲಾಗಿದೆ ಎಂದು ಅವರು ತಿಳಿಸಿದರು.

ಮುಂಗಾರು ಹಂಗಾಮಿನ ನಂತರ ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳಲ್ಲಿ ಸುಮಾರು 8 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಲಿದ್ದು, ಆಹಾರ ಉತ್ಪಾದನೆ ಗುರಿಯಾದ 110 ಲಕ್ಷ ಮೆಟ್ರಿಕ್ ಟನ್ ಗುರಿ ತಲುಪುವ ವಿಶ್ವಾಸವಿದೆ ಎಂದು ಶಿವಶಂಕರ ರೆಡ್ಡಿ ಭರವಸೆ ವ್ಯಕ್ತಪಡಿಸಿದರು.

ಡ್ರೋನ್ ಸರ್ವೆ: ರಾಜ್ಯದ ವಿವಿಧ ಪ್ರದೇಶಗಳಲ್ಲಿ ರೈತರು ಬೆಳೆಯುವ ಬೆಳೆಗಳ ಸರ್ವೆ ಕಾರ್ಯಕ್ಕೆ ‘ಡ್ರೋನ್’ ತಂತ್ರಜ್ಞಾನ ಬಳಸಿ ನಡೆಸಲು ಉದ್ದೇಶಿಸಲಾಗಿದೆ. ಇದರಿಂದ ಯಾವ ಪ್ರದೇಶದಲ್ಲಿ ಯಾವ ಬೆಳೆ ಬೆಳೆದಿದ್ದಾರೆಂಬುದರ ನಿಖರ ಮಾಹಿತಿ ಸಿಗಲಿದೆ. ಇದರಿಂದ ಬೆಲೆ ವಿಮೆಗೆ ಇದು ಅನುಕೂಲವಾಗಲಿದೆ ಎಂದು ಹೇಳಿದರು.

ಯಾವುದೇ ಪಹಣಿಗಳಲ್ಲಿ ನಿಗದಿತ ಬೆಳೆಯ ಉಲ್ಲೇಖ ಆಗುತ್ತಿಲ್ಲ. ಹೀಗಾಗಿ ಸರ್ವೆ ಕೈಗೊಳ್ಳಲು ಉದ್ದೇಶಿಸಿದ್ದು, ಒಂದು ವಾರದಲ್ಲಿ ಸರ್ವೆ ಕಾರ್ಯ ಆರಂಭಿಸಲಾಗುವುದು ಎಂದ ಅವರು, ಈ ಸರ್ವೆ ಕಾರ್ಯಕ್ಕೆ 15ರಿಂದ 20ಕೋಟಿ ರೂ.ಗಳು ವೆಚ್ಚವಾಗಲಿದೆ ಎಂದು ಅಂದಾಜು ಮಾಡಲಾಗಿದೆ ಎಂದರು.

ಕೃಷಿಗೆ ಉತ್ತೇಜನ: ಶೂನ್ಯ ಬಂಡವಾಳ ಕೃಷಿಗೆ ಉತ್ತೇಜನ ನೀಡಲಾಗುತ್ತಿದ್ದು, ಸದ್ಯದಲ್ಲೇ ತಮ್ಮ ನೇತೃತ್ವದ ಅಧಿಕಾರಿಗಳ ತಂಡ ಆಂಧ್ರದ ಅನಂತಪುರಂಗೆ ಭೇಟಿ ನೀಡಿ ಅಲ್ಲಿನ ಶೂನ್ಯ ಬಂಡವಾಳ ಕೃಷಿ ಪದ್ದತಿಯನ್ನು ಅವಲೋಕಿಸಿ, ರಾಜ್ಯದಲ್ಲೂ ಶೂನ್ಯ ಬಂಡವಾಳ ಕೃಷಿ ಪದ್ಧತಿ ಜಾರಿಗೊಳಿಸುವ ಯೋಜನೆ ರೂಪಿಸಲಿದೆ ಎಂದು ಮಾಹಿತಿ ನೀಡಿದರು.

ಸಿಬ್ಬಂದಿ ನೇಮಕ: ಕೃಷಿ ಇಲಾಖೆಯಲ್ಲಿ ಖಾಲಿ ಇರುವ 153 ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆ ಸೇರಿದಂತೆ 588 ಅಧಿಕಾರಿ ಮತ್ತು ಸಿಬ್ಬಂದಿ ನೇಮಕ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನು 15 ದಿನಗಳಲ್ಲಿ ಇವರೆಲ್ಲರಿಗೂ ನೇಮಕಾತಿ ಆದೇಶ ನೀಡಲಾಗುವುದು ಎಂದು ವಿವರಿಸಿದರು.

ಮನೆ ಬಾಗಿಲಿಗೆ ಸಿರಿಧಾನ್ಯ: ಸಿರಿಧಾನ್ಯ ಕೃಷಿ ಉತ್ತೇಜನ ಮತ್ತು ಆ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲು ಹಾಪ್‌ಕಾಮ್ಸ್ ಮತ್ತು ಕೆಎಂಎಫ್ ಮೂಲಕ ಸಿರಿಧಾನ್ಯ ಮಾರಾಟ ಮಾಡಲಾಗುವುದು ಎಂದ ಅವರು, ಗ್ರಾಹಕರ ಮನೆ ಬಾಗಿಲಿಗೆ ಸಿರಿಧಾನ್ಯ ತಲುಪಿಸುವ ಮೂಲಕ ಮಧ್ಯವರ್ತಿಗಳಿಗೆ ಕಡಿವಾಣ ಹಾಕಲಾಗುವುದು ಎಂದು ಹೇಳಿದರು.

‘ಅಂತರ್ಜಲ ಕುಸಿತಕ್ಕೆ ಕಾರಣ, ತೇವಾಂಶ ಹೀರುವ, ಪರಿಸರಕ್ಕೂ ಮಾರಕ ಆಗಿರುವ ನೀಲಗಿರಿ ಮತ್ತು ಸರ್ವೆ ಮರಕ್ಕೆ ಪರ್ಯಾಯವಾಗಿ ಎಲಿಫೆಂಟ್ ಬ್ಯಾಂಬೊ (ಆನೆ ಬಿದಿರು) ಬೆಳೆಯುವ ಯೋಜನೆಗೆ ರಾಜ್ಯ ಸರಕಾರ ಪ್ರೋತ್ಸಾಹ ನೀಡಲಿದೆ. ಬೆಂ.ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಲು ನಿರ್ಧರಿಸಿದ್ದು, ಈ ಬೆಳೆಯಿಂದ 3 ವರ್ಷಕ್ಕೆ ಎಕರೆ ಭೂಮಿಗೆ ರೈತರು 4 ಲಕ್ಷ ರೂ.ಆದಾಯ ಬರಲಿದೆ ಎಂದು ಅಂದಾಜಿಸಲಾಗಿದೆ’
-ಎಚ್.ಎನ್.ಶಿವಶಂಕರ ರೆಡ್ಡಿ ಕೃಷಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News