ವ್ಯಭಿಚಾರ ಕಾನೂನು: ಕೇಂದ್ರದ ನಿಲುವನ್ನು ಪ್ರಶ್ನಿಸಿದ ಸುಪ್ರೀಂ

Update: 2018-08-08 14:49 GMT

ಹೊಸದಿಲ್ಲಿ,ಆ.8: ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿರುವ ವಿವಾಹಿತ ಪುರುಷನನ್ನು ಶಿಕ್ಷಿಸುವ ವ್ಯಭಿಚಾರ ಕಾನೂನನ್ನು ಸಮರ್ಥಿಸಿಕೊಂಡಿರುವ ಕೇಂದ್ರದ ನಿಲುವನ್ನು ಸರ್ವೋಚ್ಚ ನ್ಯಾಯಾಲಯವು ಬುಧವಾರ ಪ್ರಶ್ನಿಸಿದೆ.

ವಿವಾಹದ ಪಾವಿತ್ರ್ಯವನ್ನು ಸಂರಕ್ಷಿಸಲು ಐಪಿಸಿಯ ಕಲಂ 497ನ್ನು ಉಳಿಸಿಕೊಳ್ಳುವುದನ್ನು ಸರಕಾರವು ಸಮರ್ಥಿಸಿಕೊಂಡಾಗ ಮು.ನ್ಯಾ.ದೀಪಕ್ ಮಿಶ್ರಾ ನೇತೃತ್ವದ, ನ್ಯಾಯಮೂರ್ತಿಗಳಾದ ಎ.ಎಂ.ಖನ್ವಿಲ್ಕರ್, ಡಿ.ವೈ.ಚಂದ್ರಚೂಡ, ರೋಹಿನ್ಟನ್ ನಾರಿಮನ್ ಮತ್ತು ಇಂದು ಮಲೋತ್ರಾ ಅವರನ್ನೊಳಗೊಂಡ ಪೀಠವು, ಮಹಿಳೆಯ ಪತಿ ಆಕೆಗೆ ಬೆಂಬಲವಾಗಿದ್ದರೆ ವಿವಾಹ ಬಾಹಿರ ಸಂಬಂಧವು ದಂಡನೀಯ ಅಪರಾಧವಾಗದಿದ್ದಾಗ ಈ ಕಾನೂನು ವಿವಾಹದ ಪಾವಿತ್ರ್ಯವನ್ನು ಹೇಗೆ ಸಂರಕ್ಷಿಸುತ್ತದೆ ಎಂದು ಪ್ರಶ್ನಿಸಿತು.

ಪತಿಯು ಇಂತಹ ಸಂಬಂಧಕ್ಕೆ ಒಪ್ಪಿಗೆ ನೀಡಿದಾಗ ವಿವಾಹದ ಪಾವಿತ್ರ್ಯವೆಲ್ಲಿದೆ ಎಂದು ನ್ಯಾ.ನಾರಿಮನ್ ಪ್ರಶ್ನಿಸಿದರು.

ಕಾನೂನುಗಳನ್ನು ರೂಪಿಸುವ ಶಾಸಕಾಂಗದ ಕ್ಷಮತೆಯನ್ನು ನಾವು ಪ್ರಶ್ನಿಸುತ್ತಿಲ್ಲ, ಆದರೆ ಕಲಂ 497ರಲ್ಲಿ ‘ಸಾಮೂಹಿಕ ಒಳ್ಳೆಯದು’ಎನ್ನುವುದು ಎಲ್ಲಿದೆ ಎಂದು ಮು.ನ್ಯಾ.ಮಿಶ್ರಾ ಪ್ರಶ್ನಿಸಿದರು.

 ಪತಿಯು ಕೇವಲ ತನ್ನ ಭಾವೋದ್ವೇಗದ ಮೇಲೆ ನಿಯಂತ್ರಣ ಹೊಂದಿರಬಲ್ಲ ಮತ್ತು ಇದು ಅಥವಾ ಅದನ್ನು ಮಾಡು ಎಂದು ಪತ್ನಿಗೆ ಸೂಚಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

 ಐಪಿಸಿಯ ಕಲಂ 497 ಮತ್ತು ಸಿಪಿಸಿಯ ಕಲಂ 198(2)ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News