ಷರೀಫ್ ಪುತ್ರರ ಹೆಸರು 'ಬ್ಲಾಕ್‌ಲಿಸ್ಟ್'ಗೆ

Update: 2018-08-08 17:08 GMT

ಇಸ್ಲಾಮಾಬಾದ್, ಆ.8: ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಝ್ ಷರೀಫ್ ಅವರ ಪುತ್ರರಾದ ಹಸನ್ ಮತ್ತು ಹುಸೈನ್ ಅವರನ್ನು 'ಬ್ಲಾಕ್‌ಲಿಸ್ಟ್'ಗೆ ಸೇರಿಸಿರುವ ಪಾಕ್ ಅಧಿಕಾರಿಗಳು, ಅವರ ಪಾಸ್‌ಪೋರ್ಟ್‌ಗಳನ್ನು ತಡೆಹಿಡಿದಿದ್ದಾರೆ. ಇದೀಗ ಲಂಡನ್‌ನಲ್ಲಿ ವಾಸಿಸುತ್ತಿರುವ ಇವರಿಬ್ಬರು ತಮ್ಮ ವಿರುದ್ಧ ದಾಖಲಾಗಿರುವ ಮೂರು ಭ್ರಷ್ಟಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಪಾಕಿಸ್ತಾನದ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ಹಾಜರಾಗಲಿಲ್ಲ. ಆದ್ದರಿಂದ ಅವರನ್ನು ತಲೆಮರೆಸಿಕೊಂಡವರು ಎಂದು ನ್ಯಾಯಾಲಯ ಘೋಷಿಸಿತು.

ಭ್ರಷ್ಟಾಚಾರ ನಿಗ್ರಹ ದಳವಾಗಿರುವ 'ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೊ' ಹಸನ್ ಹಾಗೂ ಹುಸೈನ್ ಹೆಸರನ್ನು ಬ್ಲಾಕ್‌ಲಿಸ್ಟ್‌ಗೆ ಸೇರಿಸಬೇಕೆಂದು ಪಾಕಿಸ್ತಾನದ ಉಸ್ತುವಾರಿ ಸಂಪುಟಕ್ಕೆ ಕೋರಿಕೆ ಸಲ್ಲಿಸಿತ್ತು. ಆದರೆ ಈ ಬಗ್ಗೆ ಉಸ್ತುವಾರಿ ಸರಕಾರ ನಿರ್ಧಾರ ಕೈಗೊಳ್ಳದ ಹಿನ್ನೆಲೆಯಲ್ಲಿ ವಲಸೆ ಮತ್ತು ಪಾಸ್‌ಪೋರ್ಟ್ ನಿರ್ದೇಶನಾಲಯಕ್ಕೆ ಮನವಿ ಸಲ್ಲಿಸಲಾಯಿತು. ಇದರಂತೆ ಅವರ ಪಾಸ್‌ಪೋರ್ಟ್‌ಗಳನ್ನು ತಡೆಹಿಡಿಯಲಾಗಿದೆ ಮತ್ತು ಅವರ ಹೆಸರನ್ನು ಬ್ಲಾಕ್‌ಲಿಸ್ಟ್‌ಗೆ ಸೇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಸನ್ ಹಾಗೂ ಹುಸೈನ್ ವಿರುದ್ಧ ರೆಡ್‌ಕಾರ್ನರ್ ನೋಟಿಸ್ ಜಾರಿಗೊಳಿಸಬೇಕೆಂದು ಕಳೆದ ವಾರ ಇಂಟರ್‌ಪೋಲ್‌ಗೆ ಮನವಿ ಸಲ್ಲಿಸಲಾಗಿತ್ತು.

ಇವರಿಬ್ಬರ ವಿರುದ್ಧ ಪಾಕ್ ನ್ಯಾಯಾಲಯವೊಂದು ಜಾಮೀನುರಹಿತ ಸಾರ್ವಕಾಲಿಕ ಬಂಧನ ವಾರಾಂಟ್ ಜಾರಿಗೊಳಿಸಿತ್ತು. ಷರೀಫ್ ಅವರ ಕುಟುಂಬ ಪಾಕಿಸ್ತಾನದಲ್ಲಿ ಸಂಪಾದಿಸಿದ ಅಕ್ರಮ ಹಣದಿಂದ ಇಂಗ್ಲೆಂಡಿನಲ್ಲಿ ಸಂಸ್ಥೆಯೊಂದನ್ನು ಹೊಂದಿದ್ದು ಹುಸೈನ್ ಇದರ ಮಾಲಕರಾಗಿದ್ದಾರೆ. ಈ ಸಂಸ್ಥೆಯ ಆಸ್ತಿಯ ವೌಲ್ಯ 200 ಮಿಲಿಯನ್ ಪೌಂಡ್‌ಗಿಂತಲೂ ಅಧಿಕವಾಗಿದೆ ಎಂದು ಪನಾಮ ಪೇಪರ್ಸ್ ಎಂಬ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಈ ಸಂಸ್ಥೆಯ ಮಾಲಕ ತಾನು ಎಂಬುದನ್ನು ಹುಸೈನ್ ಒಪ್ಪಿಕೊಂಡಿದ್ದರೂ ಇದು ಭ್ರಷ್ಟಾಚಾರದ ಹಣದಿಂದ ಸ್ಥಾಪಿಸಿದ ಸಂಸ್ಥೆಯಲ್ಲ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News