ಏಶ್ಯನ್ ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವೆ: ಸಿಂಧು

Update: 2018-08-09 05:15 GMT

ಹೈದರಾಬಾದ್, ಆ.8: ಮುಂಬರುವ ಏಶ್ಯನ್ ಗೇಮ್ಸ್‌ಗೆ ತಯಾರಿ ನಡೆಸಲು ಇನ್ನು ಹೆಚ್ಚು ಸಮಯವಿಲ್ಲ ಎಂಬ ವಿಚಾರವನ್ನು ಅರಿತಿರುವ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು 2014ರ ಆವೃತ್ತಿಯ ಗೇಮ್ಸ್‌ಗಿಂತಲೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಇಂಚೋನ್‌ನಲ್ಲಿ ನಡೆದಿದ್ದ ಏಶ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳಾ ತಂಡ ಕಂಚಿನ ಪದಕ ಜಯಿಸಿತ್ತು. ಈ ವರ್ಷ ಆ.18 ರಿಂದ ಜಕಾರ್ತದಲ್ಲಿ ಆರಂಭವಾಗಲಿರುವ ಏಶ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಜಯಿಸುವುದಾಗಿ ಸಿಂಧು ವಿಶ್ವಾಸದಿಂದ ಹೇಳಿದ್ದಾರೆ.

‘‘ಖಂಡಿತವಾಗಿಯೂ ಇದು ವಿಭಿನ್ನವಾಗಿರಲಿದೆ. ಏಕೆಂದರೆ ನಾವು ಟೀಮ್ ಹಾಗೂ ವೈಯಕ್ತಿಕ ವಿಭಾಗದಲ್ಲಿ ಸ್ಪರ್ಧಿಸಲಿದ್ದೇವೆ. ನಮಗೆ ಏಶ್ಯನ್ ಗೇಮ್ಸ್‌ಗೆ ಸಜ್ಜಾಗಲು ಕಡಿಮೆ ಸಮಯಾವಕಾಶವಿದೆ. ಆದರೆ, ಒಂದು ತಂಡವಾಗಿ ಕಳೆದ ಬಾರಿ ಕಂಚು ಜಯಿಸಿದ್ದೆವು. ಈ ಬಾರಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದೇವೆ’’ ಎಂದು ಕಳೆದ ರವಿವಾರ ಚೀನಾದಲ್ಲಿ ಕೊನೆಗೊಂಡ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಬಾರಿ ಬೆಳ್ಳಿ ಜಯಿಸಿದ್ದ ಸಿಂಧು ನುಡಿದರು.

‘‘ನಾನು ಟೀಮ್ ವಿಭಾಗವಲ್ಲದೆ, ವೈಯಕ್ತಿಕ ವಿಭಾಗದಲ್ಲೂ ಉತ್ತಮ ಪ್ರದರ್ಶನ ನೀಡಲು ಯತ್ನಿಸುವೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸುವುದರೊಂದಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದೇನೆ’’ ಎಂದು ಸಿಂಧು ಹೇಳಿದ್ದಾರೆ.

ಏಶ್ಯನ್ ಗೇಮ್ಸ್‌ನ ಮಹಿಳೆಯರ ಸಿಂಗಲ್ಸ್ ನಲ್ಲಿ ಭಾರತ ಈವರೆಗೆ ಪದಕವನ್ನೇ ಜಯಿಸಿಲ್ಲ. ಎಂಟು ಬಾರಿಯ ಮಾಜಿ ರಾಷ್ಟ್ರೀಯ ಚಾಂಪಿಯನ್ ಸೈಯದ್ ಮೋದಿ ಏಶ್ಯಾಡ್‌ನಲ್ಲಿ ಭಾರತಕ್ಕೆ ಏಕೈಕ ಪದಕ ಗೆದ್ದುಕೊಟ್ಟಿದ್ದಾರೆ. 1982ರಲ್ಲಿ ಹೊಸದಿಲ್ಲಿಯಲ್ಲಿ ನಡೆದಿದ್ದ ಏಶ್ಯನ್ ಗೇಮ್ಸ್‌ನಲ್ಲಿ ಸೈಯದ್ ಮೋದಿ ಕಂಚಿನ ಪದಕ ಗೆದ್ದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News