ಮೈಸೂರು, ತುಮಕೂರು, ಶಿವಮೊಗ್ಗ ಮಹಾನಗರ ಪಾಲಿಕೆ: ಆ.31ರಂದು ಸಾರ್ವತ್ರಿಕ ಚುನಾವಣೆ

Update: 2018-08-09 14:43 GMT

ಬೆಂಗಳೂರು, ಆ.9: ಮೈಸೂರು, ತುಮಕೂರು ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆಗಳಿಗೆ ಸಂಬಂಧಿಸಿದ ಕ್ಷೇತ್ರ ವಿಂಗಡಣೆ ಮತ್ತು ಮೀಸಲಾತಿಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ದಾಖಲಾಗಿದ್ದ ಪ್ರಕರಣವು ಇತ್ಯರ್ಥವಾಗಿರುವುದರಿಂದ ರಾಜ್ಯ ಚುನಾವಣಾ ಆಯೋಗವು, ಈ ಮೂರು ಮಹಾನಗರ ಪಾಲಿಕೆಗಳಿಗೆ ಆ.31ರಂದು ಸಾರ್ವತ್ರಿಕ ಚುನಾವಣೆ ನಡೆಸಲು ನಿರ್ಧರಿಸಿದೆ.

ಜಿಲ್ಲಾಧಿಕಾರಿಗಳು ಆ.13ರಂದು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಆ.20ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಆ.21ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಆ.23ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಆ.31ರಂದು ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ.

ಮರು ಮತದಾನದ ಅಗತ್ಯವಿದ್ದಲ್ಲಿ ಸೆ.2ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಸೆ.3ರಂದು ಬೆಳಗ್ಗೆ 8 ಗಂಟೆಯಿಂದ ಕೇಂದ್ರ ಸ್ಥಾನದಲ್ಲಿ ಮತಗಳ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ. ಚುನಾವಣಾ ನೀತಿ ಸಂಹಿತೆಯು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಸೆ.3ರವರೆಗೆ ಆಯಾ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಜಾರಿಯಲ್ಲಿರುತ್ತದೆ.

ಮೈಸೂರು ಮಹಾನಗರ ಪಾಲಿಕೆಯಲ್ಲಿ 65 ವಾರ್ಡುಗಳಿದ್ದು, 725 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 4,01,730 ಪುರುಷ ಮತದಾರರು, 3,97,594 ಮಹಿಳಾ ಮತದಾರರು, ಇತರೆ 98 ಮಂದಿ ಸೇರಿ ಒಟ್ಟು 7,99,422 ಮತದಾರರು ತಮ್ಮ ಹಕ್ಕು ಚಲಾಯಿಸಬಹುದಾಗಿದೆ.

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ 35 ವಾರ್ಡುಗಳಿದ್ದು, 288 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 1,35,524 ಪುರುಷ ಮತದಾರರು, 1,38,673 ಮಹಿಳಾ ಮತದಾರರು, ಇತರೆ 21 ಮಂದಿ ಸೇರಿ ಒಟ್ಟು 2,74,218 ಮತದಾರರು ತಮ್ಮ ಹಕ್ಕು ಚಲಾಯಿಸಬಹುದಾಗಿದೆ.

ತುಮಕೂರು ಮಹಾನಗರ ಪಾಲಿಕೆಯಲ್ಲಿ 35 ವಾರ್ಡುಗಳಿದ್ದು, 271 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 1,28,882 ಪುರುಷ ಮತದಾರರು, 1,30,597 ಮಹಿಳಾ ಮತದಾರರು, ಇತರೆ 34 ಮಂದಿ ಸೇರಿ ಒಟ್ಟು 2,59,513 ಮತದಾರರು ತಮ್ಮ ಹಕ್ಕು ಚಲಾಯಿಸಬಹುದಾಗಿದೆ.

ಈ ಮಹಾನಗರ ಪಾಲಿಕೆಗಳ ಚುನಾವಣೆಗೆ ಒಟ್ಟು 3 ಐಎಎಸ್ ಅಧಿಕಾರಿಗಳನ್ನು ವಿಶೇಷ ವೀಕ್ಷಕರನ್ನಾಗಿ, 4 ಕೆಎಎಸ್(ಹಿರಿಯ ಶ್ರೇಣಿ) ಅಧಿಕಾರಿಗಳನ್ನು ಸಾಮಾನ್ಯ ವೀಕ್ಷಕರನ್ನಾಗಿ ಹಾಗೂ 7 ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಜಂಟಿ ನಿಯಂತ್ರಕರು ಮತ್ತು ಉಪ ನಿಯಂತ್ರಕರನ್ನು ಚುನಾವಣಾ ವೆಚ್ಚ ವೀಕ್ಷಕರನ್ನಾಗಿಯೂ ನೇಮಕಾತಿ ಮಾಡಲಾಗಿದೆ.

ಇವಿಎಂ ಬಳಕೆ: ಮತಯಂತ್ರಗಳನ್ನು ಬಳಸಿ ಈ ಚುನಾವಣೆಯನ್ನು ನಡೆಸಲಾಗುತ್ತಿದೆ. ಚುನಾವಣೆ ನಡೆಯುತ್ತಿರುವ 3 ಮಹಾನಗರ ಪಾಲಿಕೆಗಳ ಚುನಾವಣೆಗಾಗಿ ಒಟ್ಟು 1,534 ಬ್ಯಾಲೆಟ್ ಯೂನಿಟ್‌ಗಳನ್ನು ಹಾಗೂ 1,534 ಕಂಟ್ರೋಲ್ ಯೂನಿಟ್‌ಗಳನ್ನು ಸಿದ್ಧಗೊಳಿಸಲಾಗಿದೆ. ಅಭ್ಯರ್ಥಿಗಳ ಚುನಾವಣೆ ವೆಚ್ಚದ ಗರಿಷ್ಠ ಮಿತಿಯನ್ನು 3 ಲಕ್ಷ ರೂ.ಗಳಿಗೆ ಮಿತಿಗೊಳಿಸಲಾಗಿದೆ.

ನೋಟಾ: ರಾಜ್ಯ ಚುನಾವಣಾ ಆಯೋಗವು ಮಹಾನಗರ ಪಾಲಿಕೆಯ ಮತದಾರರ ಪಟ್ಟಿಯಲ್ಲಿ ತನ್ನ ಹೆಸರು ಇರುವ ವ್ಯಕ್ತಿಯು, ತನ್ನ ಇಚ್ಛೆಯಂತೆ, ‘ಯಾರೊಬ್ಬರಿಗೂ ತನ್ನ ಮತ ನೀಡಲು ಇಚ್ಛೆ ಇರುವುದಿಲ್ಲ’ ಎಂಬ ತನ್ನ ತೀರ್ಮಾನವನ್ನು ರಹಸ್ಯವಾಗಿ ಮತ ಚಲಾಯಿಸುವ ಮೂಲಕ ವ್ಯಕ್ತಪಡಿಸಲು ಅನುಕೂಲವಾಗುವಂತೆ ಮತಪತ್ರದ ಕೊನೆಯ ಪ್ಯಾನಲ್‌ನಲ್ಲಿ ‘NOTA’/‘ಮೇಲ್ಕಂಡ ಯಾರೂ ಇಲ್ಲ’ ಎಂದು ಮುದ್ರಿಸಲಾಗಿರುತ್ತದೆ.

ಭಾವಚಿತ್ರವಿರುವ ಮತದಾರರ ಚೀಟಿ: ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿರುವ ಪ್ರತಿಯೊಬ್ಬ ಮತದಾರನಿಗೆ ಅವರ ವಾರ್ಡಿನ ಸಂಖ್ಯೆ, ಮತದಾರರ ಪಟ್ಟಿಯ ಭಾಗದ ಸಂಖ್ಯೆ, ಮತದಾರರ ಪಟ್ಟಿ ಕ್ರಮ ಸಂಖ್ಯೆ, ಮತಗಟ್ಟೆಯ ಸಂಖ್ಯೆ ಮತ್ತು ಹೆಸರು, ವಿಳಾಸ, ಮತದಾನದ ದಿನಾಂಕ, ಮತದಾನದ ಸಮಯ, ಇತ್ಯಾದಿ ಮಾಹಿತಿಗಳಿರುವ ‘ಭಾವಚಿತ್ರವಿರುವ ಮತದಾರರ ಚೀಟಿ’ಯನ್ನು ನೀಡಲು ಉದ್ದೇಶಿಸಿದ್ದು, ಜಿಲ್ಲಾ ಚುನಾವಣಾಧಿಕಾರಿಗಳು ಈ ಮತದಾರರ ಚೀಟಿಗಳನ್ನು ಮುದ್ರಿಸಿ ಬಿಎಲ್‌ಓಗಳ ಮೂಲಕ ಸಂಬಂಧಪಟ್ಟ ಮತದಾರರಿಗೆ ವಿತರಣೆ ಮಾಡಲು ರಾಜ್ಯ ಚುನಾವಣಾ ಆಯೋಗ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News