ಕೋಲಾರ: ಉಪ ಪ್ರಾದೇಶಿಕ ಉಪಕೇಂದ್ರವನ್ನು ನಿಸರ್ಗ ತಾಣದ ಮಧ್ಯೆ ನಿರ್ಮಿಸಲು ಜಿಲ್ಲಾಧಿಕಾರಿ ಸೂಚನೆ

Update: 2018-08-09 17:20 GMT

ಕೋಲಾರ,ಆ.09: ಕೋಲಾರ ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಉಪ ಪ್ರಾದೇಶಿಕ ಉಪಕೇಂದ್ರವನ್ನು ನಿಸರ್ಗ ತಾಣದ ಮಧ್ಯೆ ನಿರ್ಮಿಸಿ ಅದನ್ನು ಒಂದು ಸುಂದರ ಪ್ರವಾಸಿ ತಾಣವಾಗಿ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅವರು ಸಲಹೆ ನೀಡಿದರು.  

ಇಂದು ತಮ್ಮ ಕಚೇರಿಯಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ 'ತಾರಾಲಯ' ಸ್ಥಾಪನೆ ಕುರಿತು ಸಮಿತಿ ರಚನೆಗೆ ಸಂಬಂಧಿಸಿದಂತೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಕೇಂದ್ರದ ಸ್ಥಾಪನೆಗೆ 7 ಎಕರೆ ಜಾಗ ಬೇಕಾಗುತ್ತದೆ. 1 ವಾರದಲ್ಲಿ ಸೂಕ್ತವಾದ ಪ್ರದೇಶವನ್ನು ಗುರುತಿಸಿ ಎಂದು ಸದಸ್ಯರಿಗೆ ಸೂಚಿಸಿದರು. ಕೇಂದ್ರ ಸ್ಥಾಪನೆಗೆ ಹಣದ ಕೊರತೆ ಇಲ್ಲ. ಕೇಂದ್ರ ಸರ್ಕಾರದಿಂದ 6 ಕೋಟಿ ಅನುದಾನ ಸಿಗುತ್ತದೆ. ಸ್ಥಳೀಯ ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರ ಅನುದಾನವನ್ನು ಸಹ ಬಳಸಿಕೊಳ್ಳಬಹುದಾಗಿದೆ ಹಾಗೂ ಖಾಸಗಿ ದಾನಿಗಳಿಂದಲೂ ಅನುದಾನ ಪಡೆಯಬಹುದಾಗಿದೆ ಎಂದು ತಿಳಿಸಿದರು. 

ಕೇಂದ್ರ ಸರ್ಕಾರವು ದೇಶದ ಪ್ರತಿ ಜಿಲ್ಲೆಯಲ್ಲಿ ಇಂತಹ ವಿಜ್ಞಾನ ಕೇಂದ್ರವೊಂದನ್ನು ಸ್ಥಾಪನೆ ಮಾಡಲು 2013 ರಲ್ಲೇ ಆದೇಶಿಸಿದೆ. 12 ನೇ ಪಂಚವಾರ್ಷಿಕ ಯೋಜನೆಯಲ್ಲಿ 100 ಕೋಟಿಗಳನ್ನು ಮೀಸಲಿಡಲಾಗಿತ್ತು. ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವು 50:50 ರಷ್ಟು ಭರಿಸಲಿವೆ ಎಂದ ಜಿಲ್ಲಾಧಿಕಾರಿ, ಕೇಂದ್ರದ ಸ್ಥಾಪನೆಗೆ ಉತ್ತಮ ವಿನ್ಯಾಸಗಾರರ ಸಲಹೆಯಂತೆ ವಿಭಿನ್ನವಾಗಿ ನಿರ್ಮಾಣ ಮಾಡಬೇಕು. ವಿಜ್ಞಾನ ಕೇಂದ್ರದ ನಿರ್ಮಾಣ ಸಂಪೂರ್ಣ ಪರಿಸಹ ಸ್ನೇಹಿಯಾಗಿರಬೇಕು. ಗೌರಿಬಿದನೂರಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ವಿಜ್ಞಾನ ಕೇಂದ್ರ ನಿರ್ಮಾಣಗೊಳ್ಳುತ್ತಿದೆ. ಅಲ್ಲಿಗೆ ಒಮ್ಮೆ ಭೇಟಿ ನೀಡಿ ಅಗತ್ಯ ಮಾಹಿತಿ ಸಂಗ್ರಹಿಸಿ ಎಂದು ಸೂಚಿಸಿದರು. ತಾತ್ಕಾಲಿಕವಾಗಿ ಕೇಂದ್ರದ ಕಾರ್ಯ ಚಟುವಟಿಕೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಸ್ಥಳಾವಕಾಶ ಕಲ್ಪಿಸಲು ಅವರು ಸೂಚಿಸಿದರು. 

ಸಮಾಜ ವಿಜ್ಞಾನಿ ರವೀಂದ್ರ ಅವರು ಮಾತನಾಡಿ, ಈಗಾಗಲೇ ಕರ್ನಾಟಕ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಉಳಿದ ಜಿಲ್ಲೆಗಳಲ್ಲಿ ತ್ವರಿತವಾಗಿ ಸ್ಥಾಪಿಸಬೇಕಿದೆ. ವಿಜ್ಞಾನ ಕೇಂದ್ರದ ಸ್ಥಾಪನೆಯಿಂದ ಜಿಲ್ಲೆಯ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು, ಜನ ಸಾಮಾನ್ಯರನ್ನು ಹಾಗೂ ರೈತಾಪಿ ವರ್ಗವನ್ನು ವೈಜ್ಞಾನಿಕವಾಗಿ ಸಶಕ್ತಗೊಳಿಸಲು ಸಾದ್ಯವಾಗುತ್ತದೆ. ಸಮಾಜದ ವಾಸ್ತವ ಜೀವನಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನದ ಅರಿವು ಮೂಡಿಸಲು ಈ ಕೇಂದ್ರದ ಸ್ಥಾಪನೆ ಬಹುಪ್ರಯೋಜನಕಾರಿಯಾಗುತ್ತದೆ ಎಂದರು. 

ಸಭೆಯಲ್ಲಿ ಸಂಘ-ಸಂಸ್ಥೆಗಳ ಮುಖಂಡರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News