ಒಂದೇ ಕಲ್ಲಿನಲ್ಲಿ ಹಲವು ಹಕ್ಕಿಗಳು?

Update: 2018-08-09 18:32 GMT

ಮೊನ್ನೆ ದಿಢೀರನೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಹುದ್ದೆಯ ಜೊತೆಗೆ ಪಕ್ಷದ ಉಸ್ತುವಾರಿಯನ್ನು ನೋಡಿಕೊಳ್ಳುವುದು ಕಷ್ಟವೆಂಬ ನೆಪದಲ್ಲಿ ಎಚ್. ವಿಶ್ವನಾಥ್ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ದೇವೇಗೌಡರು ನೇಮಿಸಿ ಒಂದು ಕಲ್ಲಿನಲ್ಲಿ ಹಲವು ಹಕ್ಕಿಹೊಡೆಯುವ ತಮ್ಮ ರಾಜಕೀಯ ಚಾಣಾಕ್ಷತೆಯನ್ನು ಮೆರೆದಿದ್ದಾರೆ.


ಅಂತೂ ಮಾಜಿ ಸಚಿವರಾದ ಎಚ್. ವಿಶ್ವನಾಥ್ ಅವರನ್ನು ಜಾತ್ಯತೀತ ಜನತಾದಳದ ರಾಜಾಧ್ಯಕ್ಷರನ್ನಾಗಿ ಮಾಡುವ ಮೂಲಕ ದೇವೇಗೌಡರು ಒಂದೇ ಕಲ್ಲಿನಲ್ಲಿ ಹಲವು ಹಕ್ಕಿಗಳನ್ನು ಹೊಡೆಯುವ ಚಾಣಕ್ಯ ತಂತ್ರಗಾರಿಕೆಗೆ ಮೊರೆ ಹೋಗಿದ್ದಾರೆ. ಆದರೆ ಅದು ಅವರದೇ ಪಕ್ಷದ ಮೈತ್ರಿ ಸರಕಾರದ ಮೇಲೆ ಬೀರಬಹುದಾದ ಪ್ರಭಾವಗಳೇನು ಎಂಬುದನ್ನು ನಾವು ಅವಲೋಕಿಸಬೇಕಾಗಿದೆ

ಇದೀಗ ಕರ್ನಾಟಕ ರಾಜ್ಯದ ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷರನ್ನಾಗಿ ಎಚ್. ವಿಶ್ವನಾಥ್‌ರನ್ನು ನೇಮಕ ಮಾಡಲಾಗಿದ್ದು, ಪಕ್ಷದ ಆಂತರಿಕ ವಲಯದಲ್ಲಿ ಇದರ ಬಗ್ಗೆ ಯಾವುದೇ ಭಿನ್ನಮತದ ಮಾತುಗಳು ಕೇಳಿಬರುತ್ತಿಲ್ಲವಾದರೂ ಮೈತ್ರಿ ಸರಕಾರದ ಪಾಲುದಾರ ಪಕ್ಷವಾದ ಕಾಂಗ್ರೆಸ್‌ನಲ್ಲಿ ಮಾತ್ರ ಈ ನೇಮಕದ ಹಿಂದಿನ ತಂತ್ರಗಾರಿಕೆಯ ಬಗ್ಗೆ ಪಿಸುಮಾತಿನ ಅಸಮಾಧಾನಗಳು ಕೇಳಿ ಬರುತ್ತಿವೆ. ಅದರಲ್ಲೂ ಕಾಂಗ್ರೆಸ್ ಒಳಗಿನ ಸಿದ್ದರಾಮಯ್ಯನವರ ಗುಂಪಿಗೆ ಈ ನೇಮಕ ಇರಿಸುಮುರಿಸು ಉಂಟು ಮಾಡಿರುವುದಂತೂ ಸುಳ್ಳೇನಲ್ಲ.

ರಾಜಕೀಯದಲ್ಲಿ ಬಹಳಷ್ಟು ವಿದ್ಯಮಾನಗಳು ಸಾಮಾನ್ಯ ಜನರ ಊಹೆಗೂ ನಿಲುಕದ ರೀತಿಯಲ್ಲಿ ನಡೆದು ಹೋಗುವುದು ಸಾಮಾನ್ಯ. ಅದರಲ್ಲೂ ಇಂಡಿಯಾದ ಬಹುಪಕ್ಷೀಯ ರಾಜಕಾರಣದ ಚದುರಂಗದಾಟದಲ್ಲಿ ಮಿತ್ರರು ಶತ್ರುಗಳಾಗುವುದು, ಶತ್ರುಗಳು ಮಿತ್ರರಾಗುವುದು ತೀರಾ ಸಹಜವಾದ ಕ್ರಿಯೆಗಳು. ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಅವರ ಒಂದು ಕಾಲದ ಗೆಳೆಯ ಎಚ್. ವಿಶ್ವನಾಥ್ ಅವರು. ಒಂದು ದಶಕದ ಹಿಂದೆ ಜನತಾದಳದಲ್ಲಿದ್ದ ಸಿದ್ದರಾಮಯ್ಯನವರು ಜನತಾದಳವನ್ನು ತೊರೆದು ಹೊರಬಂದು ಅಹಿಂದ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾಗ, ಕಾಂಗ್ರೆಸ್‌ನಲ್ಲಿದ್ದ ಎಚ್. ವಿಶ್ವನಾಥ್ ಮುಂತಾದವರು ಅವರನ್ನು ಕಾಂಗ್ರೆಸ್‌ಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಂತರದಲ್ಲಿ ಸಿದ್ದರಾಮಯ್ಯನವರು ಕಾಂಗ್ರೆಸ್‌ನ ಪ್ರಶ್ನಾತೀತನಾಯಕರಾಗಿ ಹೊರಹೊಮ್ಮಿ ವಿರೋಧಪಕ್ಷದ ನಾಯಕರಾಗಿ, ತದನಂತರದಲ್ಲಿ 2013ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರಿದರು. ಅಲ್ಲಿಯವರೆಗೂ ಎಲ್ಲವೂ ಚೆನ್ನಾಗಿಯೇ ಇತ್ತು. ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು ತಮ್ಮನ್ನು ಕಡೆಗಣಿಸಿ ತಮ್ಮ ಹಿರಿತನಕ್ಕೆ ಅವಮಾನ ಮಾಡುತ್ತಿದ್ದಾರೆಂದು ಆರೋಪಿಸಿದ ವಿಶ್ವನಾಥರು ಕ್ರಮೇಣ ಸಿದ್ದರಾಮಯ್ಯನವರ ಕಟು ಟೀಕಾಕಾರರಾಗಿ ಬದಲಾಗಿ ಬಿಟ್ಟರು.ಮುಖ್ಯಮಂತ್ರಿಯಾದ ನಂತರ ಸಿದ್ದರಾಮಯ್ಯನವರು ತಮ್ಮನ್ನು ಮೂಲೆಗುಂಪು ಮಾಡುತ್ತಿದ್ದಾರೆಂಬುದು ವಿಶ್ವನಾಥರ ಆರೋಪವಾಗಿತ್ತು. ಆ ಸಂದರ್ಭದಲ್ಲಿ ವಿಶ್ವನಾಥ್ ಮಾತ್ರವಲ್ಲದೆ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ ಮತ್ತು ಶ್ರೀನಿವಾಸ ಪ್ರಸಾದ್‌ರಂತಹ ನಾಯಕರು ಸಹ ತಾವು ಕಡೆಗಣಿಸಲ್ಪಟ್ಟಿದ್ದೇವೆಂದು ಭಾವಿಸಿ ಕಾಂಗ್ರೆಸ್‌ನಿಂದ ದೂರವಾದರು.

ದಿನೇ ದಿನೇ ಸಿದ್ದರಾಮಯ್ಯ ಮತ್ತು ವಿಶ್ವನಾಥ್ ಅವರ ನಡುವಿನ ಅಂತರ ಹೆಚ್ಚಾಗುತ್ತ 2018ರ ವಿಧಾನಸಭಾ ಚುನಾವಣೆಗೂ ಮುಂಚೆ ವಿಶ್ವನಾಥ್ ಕಾಂಗ್ರೆಸ್ ತೊರೆದು, ಯಾವ ಸಿದ್ದರಾಮಯ್ಯನವರು ತೊರೆದುಬಂದಿದ್ದರೊ ಅದೇ ಜನತಾದಳಕ್ಕೆ ಸೇರ್ಪಡೆಯಾಗುವ ಮೂಲಕ ರಾಜಕೀಯವಾಗಿ ನೆಲೆ ಕಂಡುಕೊಂಡರು. ಸಿದ್ದರಾಮಯ್ಯನವರ ನಿರ್ಗಮನದ ನಂತರ ಜನತಾದಳ ಕಳೆದು ಕೊಂಡಿದ್ದ ಕುರುಬರ ಮತ್ತು ಹಿಂದುಳಿದ ವರ್ಗಗಳ ಬೆಂಬಲವನ್ನು ಮರಳಿ ಗಳಿಸುವ ಪ್ರಯತ್ನದಲ್ಲಿದ್ದ ಎಚ್. ಡಿ. ದೇವೇಗೌಡರು ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಹಿಂದೆ ಬೀಳಲಿಲ್ಲ. ಕಳೆದ ಚುನಾವಣೆಯಲ್ಲಿ ವಿಶ್ವನಾಥರಿಗೆ ಹುಣಸೂರಿನಲ್ಲಿ ಪಕ್ಷದ ಟಿಕೇಟು ನೀಡಿ ಅವರನ್ನು ಶಾಸಕರನ್ನಾಗಿಯೂ ಮಾಡಲಾಯಿತು. ನಂತರ ರಚನೆಯಾದ ಮೈತ್ರಿ ಸರಕಾರದಲ್ಲಿ ವಿಶ್ವನಾಥರಿಗೆ ಸಚಿವ ಸ್ಥಾನ ದೊರೆಯುತ್ತದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಸದಾ ರಾಜಕೀಯ ಲಾಭನಷ್ಟಗಳ ಲೆಕ್ಕಾಚಾರದಲ್ಲಿರುವ ದೇವೇಗೌಡರ ರಾಜಕೀಯ ನಡೆಯಲ್ಲಿನ ನಿಗೂಢತೆಯನ್ನು ಯಾರೂ ಅರ್ಥ ಮಾಡಿಕೊಂಡಿರಲಿಲ್ಲ.

ಮೊನ್ನೆ ದಿಢೀರನೆ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಹುದ್ದೆಯ ಜೊತೆಗೆ ಪಕ್ಷದ ಉಸ್ತುವಾರಿಯನ್ನು ನೋಡಿಕೊಳ್ಳುವುದು ಕಷ್ಟವೆಂಬ ನೆಪದಲ್ಲಿ ಎಚ್. ವಿಶ್ವನಾಥ್ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ದೇವೇಗೌಡರು ನೇಮಿಸಿ ಒಂದು ಕಲ್ಲಿನಲ್ಲಿ ಹಲವು ಹಕ್ಕಿಹೊಡೆಯುವ ತಮ್ಮ ರಾಜಕೀಯ ಚಾಣಾಕ್ಷತೆಯನ್ನು ಮೆರೆದಿದ್ದಾರೆ. ಚಾಮುಂಡೇಶ್ವರಿಯಲ್ಲಿ ಭಾಜಪದ ಪರೋಕ್ಷ ನೆರವನ್ನು ಪಡೆದ ಜನತಾದಳ ಸಿದ್ದರಾಮಯ್ಯನವರನ್ನು ಸೋಲಿಸಿದ ನಂತರ ಕುರುಬ ಸಮುದಾಯದಲ್ಲಿ ಜನತಾದಳ ಕುರುಬ ವಿರೋಧಿ ಎಂಬ ಭಾವನೆಯೊಂದು ಮೊಳಕೆಯೊಡೆದಿದ್ದು ಅದನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕಲು ದೇವೇಗೌಡರು ನಿರ್ಧರಿಸಿಯೇ ಕುರುಬ ಸಮುದಾಯದ ಮತ್ತೊಬ್ಬ ಹಿರಿಯ ನಾಯಕ ವಿಶ್ವನಾಥರಿಗೆ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ನೀಡಿದ್ದಾರೆ. ಇದರಿಂದ ಅಸಮಾಧಾನಗೊಂಡಿರಬಹುದಾದ ಕುರುಬ ಸಮುದಾಯವನ್ನು ಸಮಾಧಾನ ಪಡಿಸಿದಂತೆಯೂ ಆಗುತ್ತದೆ ಮತ್ತು ಸಚಿವ ಸ್ಥಾನ ಸಿಗದೆ ಒಳಗೇನೆ ಅತೃಪ್ತಿಯನ್ನು ಹೊಂದಿರಬಹುದಾದ ವಿಶ್ವನಾಥರನ್ನು ಸಮಾಧಾನ(ಹಾಗೆ ನೋಡಿದರೆ ಸಚಿವ ಸ್ಥಾನ ದೊರೆಯದ ಬಗ್ಗೆ ವಿಶ್ವನಾಥರು ಸಾರ್ವಜನಿಕವಾಗಿ ಒಂದೇ ಒಂದು ಮಾತನ್ನೂ ಆಡಿರಲಿಲ್ಲ) ಪಡಿಸಿದ ಹಾಗೂ ಆಗುತ್ತೆ.

ಇಷ್ಟಲ್ಲದೆ ಮೈಸೂರು ಜಿಲ್ಲೆಯ ರಾಜಕಾರಣವನ್ನು ಇಂಚಿಂಚೂ ಬಲ್ಲ ವಿಶ್ವನಾಥರಿಗೆ ಇಂತಹದೊಂದು ಜವಾಬ್ದಾರಿಯನ್ನು ನೀಡುವುದರ ಮೂಲಕ ಆ ಜಿಲ್ಲೆಯಲ್ಲಿ ಸಿದ್ದರಾಮಯ್ಯನವರನ್ನು ದುರ್ಬಲಗೊಳಿಸಬಹುದೆಂಬ ಲೆಕ್ಕಾಚಾರವೂ ಇದರಲ್ಲಿ ಅಡಗಿದೆ. ಯಾಕೆಂದರೆ ಸಿದ್ದರಾಮಯ್ಯನವರು ಚಾಮುಂಡೇಶ್ವರಿಯಲ್ಲಿ ಸೋತಿದ್ದರೂ ಮೈಸೂರು ಜಿಲ್ಲೆಯಲ್ಲಿ ಅವರ ಪ್ರಭಾವವೇನೂ ಕುಗ್ಗಿಲ್ಲ. ಇವತ್ತಿಗೂ ಅವರಿಗೆ ಅವರದೇ ಆದ ವರ್ಚಸ್ಸು ಜಿಲ್ಲೆಯಾದ್ಯಂತ ಇದೆ. ಇನ್ನೊಂದು ಕಾರಣವೆಂದರೆ ಮೈತ್ರಿ ಸರಕಾರದ ಸಮನ್ವಯ ಸಮಿತಿಗೆ ಸಿದ್ದರಾಮಯ್ಯನವರೇ ಅಧ್ಯಕ್ಷರಾಗಿದ್ದು ಸಮಿತಿಯ ಇತರ ಎಲ್ಲ ಸದಸ್ಯರೂ ಅನುಭವ ಮತ್ತು ಹಿರಿತನದಲ್ಲಿ ಸಿದ್ದರಾಮಯ್ಯನವರಿಗಿಂತ ಕಿರಿಯರಾಗಿದ್ದು ಸಮಿತಿಯ ಸಭೆಯಲ್ಲಿ ಸಿದ್ದರಾಮಯ್ಯನವರ ಸಮಕ್ಕೆ ಮಾತಾಡಬಲ್ಲವರು ಯಾರೂ ಇಲ್ಲ. ವಿಶ್ವನಾಥರು ಪಕ್ಷದ ಅಧ್ಯಕ್ಷರಾಗಿ ಸಮಿತಿಯಲ್ಲಿ ಪಾಲ್ಗೊಳ್ಳುವುದರಿಂದ ಸಿದ್ದರಾಮಯ್ಯನವರ ನಡೆಗಳಿಗೆ ಚೆಕ್ ಇಡಬಹುದೆಂಬುದು ಗೌಡರ ಇನ್ನೊಂದು ತಂತ್ರವಾಗಿದೆ.

 ಇಷ್ಟಲ್ಲದೆ ಜನತಾದಳ ಹಳೇಮೈಸೂರು ಪ್ರಾಂತದ ಒಕ್ಕಲಿಗರ ಪಕ್ಷವೆಂಬ ಪುರಾತನ ಆರೋಪಗಳಿಂದ ಮುಕ್ತವಾಗಲು ಪಕ್ಷದ ವಿವಿಧ ಹುದ್ದೆಗಳಿಗೆ ಅಹಿಂದ ವರ್ಗಗಳ ನಾಯಕರನ್ನು ನೇಮಿಸುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯೂ ಆಗಿದೆ.
ದೇವೇಗೌಡರ ಈ ರಾಜಕೀಯ ನಡೆ ಅವರ ಪಕ್ಷದ ಹಿತದೃಷ್ಟಿಯಿಂದ ಸರಿಯೆನಿಸಿದರೂ ಮೈತ್ರಿ ಸರಕಾರದ ಸುಗಮ ಅಡಳಿತಕ್ಕೆ ಮಾರಕವಾಗ ಬಲ್ಲದು. ಯಾಕೆಂದರೆ ಸಮನ್ವಯ ಸಮಿತಿಯಲ್ಲಿ ಸಿದ್ದರಾಮಯ್ಯನವರು ಮತ್ತು ವಿಶ್ವನಾಥ್ ಅಂತಹ ದಿಗ್ಗಜರು ಮುಖಾಮುಖಿಯಾದಾಗ ತಮ್ಮ ಸ್ವಹಿತಾಸಕ್ತಿಗಳನ್ನು ಪಕ್ಕಕ್ಕಿಟ್ಟು ಸರಕಾರದ ಭದ್ರತೆಗೆ ಅನುಕೂಲವಾಗುವಂತಹ ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ ಎಷ್ಟರ ಮಟ್ಟಿಗೆ ಪೂರ್ವಗ್ರಹರಹಿತರಾಗಿರುತ್ತಾರೆ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ. ಸಿದ್ದರಾಮಯ್ಯನವರನ್ನು ರಾಜಕೀಯವಾಗಿ ನಿಯಂತ್ರಿಸುವ ದೇವೇಗೌಡರ ಈ ತಂತ್ರಗಾರಿಕೆ ಒಂದೊಮ್ಮೆ ಸರಕಾರದ ಉಳಿವಿಗೆ ಮಾರಕವಾದರೆ ಅಚ್ಚರಿಯೇನಿಲ್ಲ. ಇದನ್ನು ಸಿದ್ದರಾಮಯ್ಯನವರು ಮತ್ತು ವಿಶ್ವನಾಥ್ ಇಬ್ಬರೂ ಅರ್ಥ ಮಾಡಿಕೊಂಡು ಮುನ್ನಡೆಯಬೇಕಿದೆ. ಸ್ವಪ್ರತಿಷ್ಠೆಗಿಂತ ಸರಕಾರದ ಉಳಿವು ಮುಖ್ಯವೆಂಬುದನ್ನು ಇಬ್ಬರೂ ಅರ್ಥ ಮಾಡಿಕೊಳ್ಳಬೇಕಿದೆ. ಇಲ್ಲದಿದ್ದಲ್ಲಿ ತೆರೆಮರೆಯಲ್ಲಿ ನಿಂತು ಹೊಂಚು ಹಾಕುತ್ತಿರುವ ಭಾಜಪಕ್ಕೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ.

ಈ ಹಿನ್ನೆಲೆಯಲ್ಲಿ ದೇವೇಗೌಡರು ತೆಗೆದುಕೊಂಡ ಈ ನಿರ್ಣಯ ಎಷ್ಟರ ಮಟ್ಟಿಗೆ ರಾಜಕೀಯವಾಗಿ ಸರಿಯಾದದ್ದು ಎಂಬುದನ್ನು ಕಾಲವೇ ಹೇಳಬೇಕಿದೆ.

Similar News