ಕೊಪ್ಪ: ಆಗಾಗ್ಗೆ ಕಂಪಿಸುತ್ತಿರುವ ಭೂಮಿ, ಆತಂಕದಲ್ಲಿ ಜನತೆ

Update: 2018-08-10 12:54 GMT

ಚಿಕ್ಕಮಗಳೂರು, ಆ.10: ಕೊಪ್ಪ ತಾಲೂಕಿನ ಕೊಗ್ರೆ ಗ್ರಾಮದ ಕೆಲವೆಡೆ ಶುಕ್ರವಾರ ಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿರುವುದಾಗಿ ತಿಳಿದುಬಂದಿದೆ. ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಕೊಗ್ರೆ ಗ್ರಾಮದಲ್ಲಿ ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದೆ. ಈ ವೇಳೆ ಮನೆಯೊಳಗಿದ್ದ ಗೃಹೋಪಯೋಗಿ ಸಾಮಗ್ರಿಗಳು ಅಲ್ಲಾಡಿ ಬಿದ್ದಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ಗುರುವಾರವೂ ಇಂತಹ ಕಂಪನದ ಅನುಭವ ಆಗಿದೆ. ಅಲ್ಲದೆ ಎರಡು ತಿಂಗಳ ಹಿಂದೆಯೂ ಕೆಲವು ಬಾರಿ ಇದೇ ರೀತಿಯಲ್ಲಿ ಶಬ್ದದ ಜೊತೆಗೆ ಭೂಮಿ ಕಂಪಿಸಿದ ಅನುಭವ ಉಂಟಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಆಗಾಗ ಈ ರೀತಿ ಭೂಮಿ ಕಂಪಿಸುತ್ತಿರುವುದರಿಂದ ಜನತೆ ಭಯಭೀತರಾಗಿದ್ದಾರೆ.

ಈ ಕಂಪನದ ಕೊಗ್ರೆ ಗ್ರಾಮಸ್ಥ ಕೆ.ಎಸ್.ವೆಂಕಟೇಶ್ ಎಂಬವರು ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು, ವಿಪತ್ತು ನಿರ್ವಹಣಾ ಇಲಾಖೆಯ ಮೂಲಕ ಈ ಸಮಸ್ಯೆಯ ಮೂಲವನ್ನು ಪತ್ತೆಹಚ್ಚಿ ಗ್ರಾಮಸ್ಥರ ಆತಂಕವನ್ನು ದೂರ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಕಳೆದ ನಾಲ್ಕು ತಿಂಗಳಿನಿಂದ ಇಲ್ಲಿನ ಮೇಗುಂದಾ ಹೋಬಳಿಯ ಅತ್ತಿಕುಡಿಗೆ, ಭೈರೇದೇವರು, ಬೆತ್ತದಕೊಳಲು ಗ್ರಾಮಗಳ ವ್ಯಾಪ್ತಿಯ ಭೂಮಿಯೊಳಗೆ ಅದೇನೋ ಅಸಹಜ ಪ್ರಕ್ರಿಯೆ ನಡೆಯುತ್ತಿದೆ. ಕೆಲವೊಮ್ಮೆ ಭಾರೀ ಸದ್ದು ಕೇಳಿಬರುವುದಲ್ಲದೆ, ಭೂಮಿಯೂ ಕಂಪಿಸುತ್ತದೆ ಎಂದವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News