ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಬೆಂಬಲ : ಪರಿಸರವಾದಿಗಳ ನಿಲುವಿಗೆ ರೈತರಿಂದ ಆಕ್ರೋಶ

Update: 2018-08-10 12:06 GMT

ಮೂಡಿಗೆರೆ, ಆ.10: ಉದ್ದೇಶಿತ ಭಾರತ್ ಮಾಲಾ ಯೋಜನೆಯಡಿ ನೆಲ್ಯಾಡಿ-ಚಿತ್ರದುರ್ಗ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದ್ದು, ರಸ್ತೆ ನಿರ್ಮಾಣದ ಭೂ ಸ್ವಾಧೀನ ಪ್ರಕ್ರಿಯೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀರಂಗಯ್ಯ ತಿಳಿಸಿದರು.

ಪಟ್ಟಣದ ಅಡ್ಯಂತಾಯ ರಂಗಮಂದಿರದ ಆವರಣದಲ್ಲಿ ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಉದ್ದೇಶೀತ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಬಗ್ಗೆ ತಾಲೂಕಿನ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹೆದ್ದಾರಿಯು ಕೆಲವು ರೈತರ ಹಿಡುವಳಿ ಜಾಗದ ಮೂಲಕ ಹಾದುಹೋಗಲಿದ್ದು, ನಗರ ಪ್ರದೇಶದಲ್ಲಿ 1:4ರಷ್ಟು, ಗ್ರಾಮೀಣ ಭಾಗದಲ್ಲಿ 1:2 ರಷ್ಟು ಪರಿಹಾರ ನೀಡಲಾಗುವುದು ಅಲ್ಲದೆ ಕಾಫಿ, ಮೆಣಸು, ಅಡಕೆ, ಬಾಳೆ ಬೆಳೆಗಳಿಗೆ ಹಾಗೂ ಮರ, ಮನೆಗಳು ಪಿಡಬ್ಲೂಡಿ ಇಲಾಖೆಯಿಂದ ಸರ್ವೆ ಮಾಡಿಸಿ ಅದಕ್ಕೆ ಪ್ರತ್ಯೇಕ ಪರಿಹಾರ ನೀಡಲಾಗುವುದು. ಪ್ರತಿಯೊಬ್ಬ ರೈತರಿಗೂ ತಮ್ಮ ಜಮೀನಿನ ಮೊತ್ತವನ್ನು ನೀಡಿದ ನಂತರವೇ ರಸ್ತೆ ನಿರ್ಮಾಣ ಕಾಮಗಾರಿಗೆ ಮುಂದಾಗಲಿದೆ ಎಂದರು. 

ನೆಲ್ಯಾಡಿಯಿಂದ ಚಿತ್ರದುರ್ಗಕ್ಕೆ 232 ಕಿ.ಮೀ ಹೆದ್ದಾರಿ ನಿರ್ಮಾಣವಾಗಲಿದೆ. ಚಿಕ್ಕಮಗಳೂರು ತಾಲೂಕಿನ 20 ಹಳ್ಳಿಗಳು ಹಾಗೂ ಮೂಡಿಗೆರೆ ತಾಲೂಕಿನ ನಡುವಿನ ಮಾಡ್ಕಲ್, ಹೆಸಗಲ್, ಕೊಲ್ಲಿಬೈಲ್, ಕರಡಗೋಡು, ಬಿಳಗುಳ, ಕಡುವಳ್ಳಿ, ಬೀಜುವಳ್ಳಿ, ಮೂಡಿಗೆರೆ, ಹಳಸೆ, ಮುತ್ತಿಗೆಪುರ, ದಾರದಹಳ್ಳಿ, ಲೋಕವಳ್ಳಿ, ಬಿದರಹಳ್ಳಿ, ಹಳೇಕೋಟೆ ಮೂಲಕ ಭೈರಾಪುರ, ಶಿಶಿಲ ಮೂಲಕ ಹಾದು ಹೋಗಲಿದೆ. ಅಂದಾಜು 7 ಸಾವಿರ ಕೋಟಿ ಅನುದಾನದಿಂದ ನಿರ್ಮಿಸಲು ಆದಷ್ಟು ಬೇಗ ರಸ್ತೆ ಕಾಮಗಾರಿ ಮುಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.  

ಎಂಎಲ್‍ಸಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಈ ಭಾಗದ ವಾಸ್ತವಿಕ ಪರಿಸ್ಥಿತಿಯನ್ನು ಅಧ್ಯಯನ ಮಾಡಿದಾಗ ಶಿಶಿಲ ಊರುಬಗೆ ಸುತ್ತಮುತ್ತಲ ಕುಗ್ರಾಮಗಳ ರೈತರ ಪರಿಸ್ಥಿತಿ ತಿಳಿಯುತ್ತದೆ. ಎಲ್ಲೋ ಗಾಜಿನ ಮನೆಯಲ್ಲಿ ಕುಳಿತುಕೊಂಡು ಪರಿಸರವಾದಿ ಎಂಬ ಹಣೆಪಟ್ಟಿ ಕಟ್ಟಿಕೊಂಡು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಗಾಲು ಹಾಕುವುದು ಸರಿಯಲ್ಲ. ದಕ್ಷಿಣ ಕನ್ನಡಕ್ಕೆ ಒಂದೇ ರಸ್ತೆ ಹೊಂದಿದ್ದು, ಮಳೆಗಾಲ ಬಂದಲ್ಲಿ ಚಾರ್ಮಾಡಿ ಘಾಟಿ ಕುಸಿಯುವುದರಿಂದ ಈ ರಸ್ತೆ ನಿರ್ಮಾಣವಾದಲ್ಲಿ ಅಂತರವೂ ಕಡಿಮೆಯಾಗುವುದರೊಂದಿಗೆ ವಾಹನ ಸಂಚಾರಕ್ಕೆ ಅನುಕೂಲವಾಗುತ್ತದೆ ಎಂದರು.

ಸಭೆಯಲ್ಲಿ ಕೆಲ ಪರಿಸರವಾದಿಗಳೆಂದು ಚರ್ಚೆ ವಿಷಯಕ್ಕೆ ಪ್ರಸ್ತಾಪಿಸಿದಾಗ ಅಲ್ಲಿದ್ದ ನೊಂದ ಗ್ರಾಮಸ್ಥರು ಪರಿಸರವಾದಿಗಳ ವಿರುದ್ಧ ಧಿಕ್ಕಾರ ಕೂಗಿದರು. ಸಭೆಯಲ್ಲಿ ಕೆಲಕಾಲ ಗೊಂದಲ ಸೃಷ್ಟಿಯಾಗಿತ್ತು. ರಸ್ತೆ ನಿರ್ಮಾಣ ಆಗಬೇಕೆಂಬ ಕೂಗು ಬಲವಾಗಿ ಕೇಳಿಬಂದಿದ್ದರಿಂದ ಪರಿಸರವಾದಿಗಳು ಚರ್ಚೆಯಿಂದ ಹೊರನಡೆದರು. 

ಈ ವೇಳೆ ಕೆ.ಸಿ.ರತನ್, ಜಿಪಂ ಸದಸ್ಯರಾದ ಶಾಮಣ್ಣ, ಸುಧಾ ಯೋಗೀಶ್, ತಾಪಂ ಸದಸ್ಯ  ರಂಜನ್ ಅಜಿತ್‍ಕುಮಾರ್, ಉಪವಿಭಾಗಾಧಿಕಾರಿ ಅಮರೇಶ್, ತಹಸೀಲ್ದಾರ್ ನಾಗಯ್ಯ ಹಿರೇಮಠ್, ಡಿ.ಎಫ್‍ಒ ಕುಮಾರ್, ಇಒ ಪ್ರಕಾಶ್ ಮತ್ತಿತರರು ಇದ್ದರು. 

“ಈ ಹಿಂದೆ ಕೆ.ಎಂ.ರಸ್ತೆ ಅಗಲೀಕರಣ ವಿಷಯ ಪ್ರಸ್ತಾಪವಾದಾಗ ನಮ್ಮ ಮನೆಯ ಮುಂಭಾಗವನ್ನುತೆರವುಗೊಳಿಸಿದ್ದೇವೆ. ಆದರೆ ಇಲ್ಲಿಯವರೆಗೂ ಕೆ.ಎಂ.ರಸ್ತೆ ಅಗಲೀಕರಣವಾಗಲೇ ಇಲ್ಲ. ಇಂದು ಕೆ.ಎಂ.ರಸ್ತೆಯಲ್ಲಿ ವಾಹನ ನಿಲುಗಡೆಗೆ ಜಾಗವೇ ಇಲ್ಲದಂತಾಗಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಮುನ್ನವೇ ಜಿಲ್ಲಾಧಿಕಾರಿಗಳು ಕೆ.ಎಂ.ರಸ್ತೆಯನ್ನು ಅಗಲೀಕರಣ ಮಾಡಲು ಮುಂದಾಗಬೇಕು” 
-ಪಪಂ ಸದಸ್ಯೆ ಲತಾ ಲಕ್ಷ್ಮಣ್

“ಪರಿಸರವಾದಿಗಳು ಇಲ್ಲಿನ ರೈತರ ಕಷ್ಟಗಳನ್ನು ತಿಳಿದಿಲ್ಲ. ದೂರದಲ್ಲಿ ಕುಳಿತು ಪತ್ರಿಕೆಗಳಲ್ಲಿ ಹೇಳಿಕೆ ಕೊಡುವುದು ಬಿಟ್ಟು ಈ ಭಾಗದ ಕೃಷಿಕರ ಪರಿಸ್ಥಿತಿಯನ್ನು ತಿಳಿಯಲಿ. ಹೆದ್ದಾರಿ ಪ್ರಾಧಿಕಾರವು ಜಾಗ ಕಳೆದುಕೊಂಡ ರೈತರಿಗೆ ಉತ್ತಮವಾದ ಮೊತ್ತ ನೀಡಿ, ರೈತರಿಗೆ ಸಹಕಾರಿಯಾಗಲಿ”   

-ಬಿ.ಎಸ್.ಜಯರಾಂ, ಕೆಜಿಎಫ್ ಅಧ್ಯಕ್ಷ

“ಪರಿಸರ ಸಂರಕ್ಷಣೆ ಎಂಬ ವಿಷಯವನ್ನು ಮುಂದಿಟ್ಟುಕೊಂಡು ಐಷಾರಾಮಿ ಜೀವನ ನಡೆಸುತ್ತಿರುವ ಪೊಳ್ಳು ಪರಿಸರವಾದಿಗಳು ನಮಗೆ ಐದು ಎಕರೆ ಈ ಭಾಗದಿಂದ ಹೊರಭಾಗದಲ್ಲಿ ಜಾಗ ಕೊಡಿಸಲಿ. ಅವರಿಗೆ ನಮ್ಮ 15 ಎಕರೆ ಜಾವವನ್ನು ನಾವು ಉಚಿತವಾಗಿ ಕೊಡಲು ಸಿದ್ಧರಿದ್ದೇವೆ” 
-ಆಶಾ ಮೋಹನ್, ಸತ್ತಿಗನಹಳ್ಳಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News