ಪ್ರಧಾನಿಯ ದತ್ತು ಗ್ರಾಮದಲ್ಲಿ ಶೇ.50 ಮನೆಗಳಿಗೆ ವಿದ್ಯುತ್ ಇಲ್ಲ, ಪಂಚಾಯತ್ ಕಟ್ಟಡವೂ ಇಲ್ಲ!

Update: 2018-08-10 14:54 GMT

 ನಾಗೇಪುರ(ಉ.ಪ್ರ),ಆ.10: 2014,ಆ.15ರಂದು ಪ್ರಧಾನಿ ನರೇಂದ್ರ ಮೋದಿಯವರು ತನ್ನ ಮೊದಲ ಸ್ವಾತಂತ್ರ ದಿನದ ಭಾಷಣದಲ್ಲಿ ಸಂಸದ ಆದರ್ಶ ಗ್ರಾಮ ಯೋಜನೆಯನ್ನು ಪ್ರಕಟಿಸಿದ್ದರು. ಈ ಯೋಜನೆಯಡಿ ಪ್ರತಿಯೋರ್ವ ಸಂಸದರೂ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಮೂರು ಗ್ರಾಮಗಳನ್ನು ದತ್ತು ಪಡೆದುಕೊಂಡು,ಅವುಗಳ ಸರ್ವಾಂಗೀಣ ಅಭಿವೃದ್ಧಿಯಾಗುವಂತೆ ನೋಡಿಕೊಳ್ಳಬೇಕಿತ್ತು.

ಮೋದಿಯವರು ತನ್ನ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ದತ್ತು ಪಡೆದಿರುವ ನಾಲ್ಕು ಗ್ರಾಮಗಳಲ್ಲಿ ನಾಗೇಪುರವೂ ಒಂದಾಗಿದೆ. ಇತ್ತೀಚಿಗೆ ಈ ಗ್ರಾಮಕ್ಕೆ ಪತ್ರಕರ್ತರ ತಂಡವೊಂದು ಭೇಟಿ ನೀಡಿದಾಗ ಖುದ್ದು ಪ್ರಧಾನಿಯವರೇ ದತ್ತು ಪಡೆದಿದ್ದರೂ ಯಾವುದೇ ಹೇಳಿಕೊಳ್ಳುವಂತಹ ಬದಲಾವಣೆಗಳು ಆಗಿರಲಿಲ್ಲ.

ನಮ್ಮ ಗ್ರಾಮವನ್ನು ಪ್ರಧಾನಿಯವರು ದತ್ತು ಪಡೆದಿದ್ದು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸುದ್ದಿಯಾಗಿದ್ದಷ್ಟೇ ನಮ್ಮ ಭಾಗ್ಯ! ಇಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಅಧಿಕಾರಿಗಳು ಬರುತ್ತಾರೆ ಮತ್ತು ಏನೂ ಮಾಡದೇ ವಾಪಸಾಗುತ್ತಾರೆ ಎಂದವರು ಗ್ರಾಮದ ನಿವಾಸಿ ಬೈನಾಥ ವೌರ್.

ಅಭಿವೃದ್ಧಿಗಾಗಿ 21 ಪ್ರದೇಶಗಳನ್ನು ಗುರುತಿಸಲಾಗಿದೆ,ಆದರೆ ಹೆಚ್ಚಿನವು ಕೇವಲ ಕಾಗದಗಳಲ್ಲಿಯೇ ಉಳಿದುಕೊಂಡಿವೆ ಎಂದು ಗ್ರಾಮದ ಸರಪಂಚ ಪ್ರಶಾಂತ ರಾಜಬೀರ್ ತಿಳಿಸಿದರು. ಚರಂಡಿ ವ್ಯವಸ್ಥೆ ಇಲ್ಲದಿರುವುದು ನಾಗೇಪುರ ಗ್ರಾಮಸ್ಥರ ಅತ್ಯಂತ ದೊಡ್ಡ ಸಮಸ್ಯೆಯಾಗಿದೆ. ಇಲ್ಲಿನ ಬೀದಿಗಳಲ್ಲಿ ನೀರು ತುಂಬಿಕೊಳ್ಳುತ್ತಿದ್ದು,ಕ್ರಿಮಿಕೀಟಗಳು ಹುಲುಸಾಗಿ ವೃದ್ಧಿಯಾಗುತ್ತಿವೆ,ಜೊತೆಗೆ ಅನಾರೋಗ್ಯವೂ. ಇದೇ ಕಲುಷಿತ ನೀರು ಹೆಚ್ಚಿನ ಗ್ರಾಮಸ್ಥರಿಗೆ ಕುಡಿಯುವ ನೀರಿನ ಮುಖ್ಯ ಮೂಲವಾಗಿರುವ ಬಾವಿಗಳನ್ನು ಸೇರಿಕೊಳ್ಳುತ್ತಿದೆ. ಇತರರಿಗೆ ಕೈಪಂಪ್‌ಗಳು ನೀರಿನ ಏಕೈಕ ಮೂಲಗಳಾಗಿವೆ. ಈ ಗ್ರಾಮಕ್ಕೆ ನಲ್ಲಿನೀರಿನ ವ್ಯವಸ್ಥೆಯಿಲ್ಲ. ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮ(ಎನ್‌ಆರ್‌ಡಿಡಬ್ಲುಪಿ)ದ ಜಾಲತಾಣವು ಹೇಳಿಕೊಂಡಿರುವಂತೆ ಈ ಗ್ರಾಮದಲ್ಲಿಯ ಶೇ.93.5ರಷ್ಟು ಜಲಮೂಲಗಳು ಸುರಕ್ಷಿತವಾಗಿವೆ.

ಆದರೆ ಎನ್‌ಆರ್‌ಡಿಡಬ್ಲುಪಿ ಸ್ಥಾಪಿಸಿರುವ ಶೇ.30ರಿಂದ 40ರಷ್ಟು ಕೈಪಂಪ್‌ಗಳಲ್ಲಿ ಕೊಳಕು ನೀರು ಬರುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು. ರೋಗರುಜಿನಗಳ ಇಷ್ಟೊಂದು ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುವ ಈ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಉಪ ಆರೋಗ್ಯ ಕೇಂದ್ರವಾಗಲಿ ಇಲ್ಲವೇ ಇಲ್ಲ.

ಶಿಕ್ಷಣದ ವಿಷಯದಲ್ಲಂತೂ ನಾಗೇಪುರ ತೀರ ಹಿಂದುಳಿದಿದೆ. ಗ್ರಾಮದಲ್ಲಿಯ ಏಕೈಕ ಪ್ರೌಢಶಾಲೆಯಲ್ಲಿ 10ನೇ ತರಗತಿಯವರೆಗೆ ಮಾತ್ರ ಕಲಿಯಬಹುದಾಗಿದೆ. ಅಂಗನವಾಡಿ ಕೇಂದ್ರವೊಂದು ನಿರ್ಮಾಣಗೊಂಡಿರುವದು ಇಲ್ಲಿ ಕಣ್ಣಿಗೆ ಕಾಣುವ ಏಕೈಕ ಪ್ರಗತಿಯಾಗಿದೆ. ಅಂಗನವಾಡಿ ಕೇಂದ್ರದ ಜೊತೆಗೆ ಆದರ್ಶ ಗ್ರಾಮ ಯೋಜನೆಯಡಿ ಅಂಬೇಡ್ಕರ್ ಪ್ರತಿಮೆಯೊಂದು ಗ್ರಾಮದಲ್ಲಿದೆ. ನೀರಿನ ಪೂರೈಕೆಗಾಗಿ ಚೂರುಪಾರು ಕಾಮಗಾರಿ ನಡೆಯುತ್ತಿರುವುದೂ ಪತ್ರಕರ್ತರ ಕಣ್ಣಿಗೆ ಬಿದ್ದಿದೆ.

ಪ್ರಧಾನಿಯ ಆದರ್ಶ ಗ್ರಾಮವಾಗಿದ್ದರೂ ಇಲ್ಲಿಯ ಶೇ.50ಕ್ಕೂ ಅಧಿಕ ಮನೆಗಳು ಈಗಲೂ ವಿದ್ಯುತ್ ಸಂಪರ್ಕದ ಭಾಗ್ಯ ಪಡೆದಿಲ್ಲ.

 ಮೋದಿ ಅವರು ನಾಗೇಪುರಕ್ಕಿಂತ ಮೊದಲು ದತ್ತು ಸ್ವೀಕರಿಸಿದ್ದ ಜಯಪುರ ಗ್ರಾಮದ ಜನರಿಗೆ ಉಚಿತ ಸೌರ ವಿದ್ಯುತ್ ಪೂರೈಕೆಯಾಗಿತ್ತು. ಆದರೆ ಈ ಭಾಗ್ಯ ಕೆಲವೇ ದಿನಗಳಿಗೆ ಸೀಮಿತವಾಗಿತ್ತು. ಈಗ ಅಧಿಕಾರಿಗಳು ವಿದ್ಯುತ್ ಬಳಕೆಗೆ ಶುಲ್ಕ ವಿಧಿಸುತ್ತಿದ್ದಾರೆ. ನಾಗೇಪುರದಲ್ಲಿಯೂ ಸೌರ ವಿದ್ಯುತ್ ಘಟಕವೊಂದನ್ನು ಸ್ಥಾಪಿಸಲಾಗಿದೆ. ಆದರೆ ಇದರಿಂದ ಗ್ರಾಮಸ್ಥರಿಗೆ ಲಾಭವಾಗಿದೆಯೇ? ಘಟಕದ ಒಂದು ಭಾಗ ವೌರ್ ಅವರ ಜಮೀನಿನಲ್ಲಿದೆ. ಆದರೆ ಇದಕ್ಕಾಗಿ ಅವರಿಗೆ ಪರಿಹಾರವನ್ನು ಪೂರ್ಣವಾಗಿ ಪಾವತಿಸಿಲ್ಲ. ಅಲ್ಲದೆ ಘಟಕದ ಮೇಲ್ವಿಚಾರಣೆ ವಹಿಸಿರುವುದಕ್ಕಾಗಿ ಸಾಕಷ್ಟು ಸಂಬಳವನ್ನೂ ನೀಡುತ್ತಿಲ್ಲ. ಘಟಕದ ದೇಖರೇಕಿಗಾಗಿ ವೌರ್ ಈವರೆಗೆ 1,95,000 ರೂ.ಗಳನ್ನು ವೆಚ್ಚ ಮಾಡಿದ್ದರೂ ಅಧಿಕಾರಿಗಳು ಅವರಿಗೆ ನೀಡಿರುವುದು 65,000 ರೂ.ಗಳನ್ನು ಮಾತ್ರ!

ಗ್ರಾಮದಲ್ಲಿ ಪಂಚಾಯತ್ ಕಾರ್ಯ ನಿರ್ವಹಿಸಲು ಕಟ್ಟಡವೇ ಇಲ್ಲ. ಆದರ್ಶ ಗ್ರಾಮ ಯೋಜನೆ ಮತ್ತು ಯಾವುದೇ ಗ್ರಾಮದ ಅಭಿವೃದ್ಧಿಯಲ್ಲಿ ಪಂಚಾಯತ್‌ನ ಪಾತ್ರ ಮುಖ್ಯವಾಗಿದೆ. ಆದರೆ ಕಟ್ಟಡವೇ ಇಲ್ಲದಿದ್ದಾಗ ಪ್ರಮುಖ ಸಾಮಾಜಿಕ ಮತ್ತು ಅಭಿವೃದ್ಧಿ ವಿಷಯಗಳನ್ನು ಚರ್ಚಿಸಲು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಗ್ರಾಮಸ್ಥರು ಸಭೆ ಸೇರುವದಾದರೂ ಎಲ್ಲಿ?

 ರಾಜ್ಯದ ಮತ್ತು ದೇಶದ ವಿವಿಧ ಭಾಗಗಳಲ್ಲಿ ಆದರ್ಶ ಗ್ರಾಮ ಯೋಜನೆ ಸುಸೂತ್ರವಾಗಿ ನಡೆಯುತ್ತಿಲ್ಲ ಎಂಬ ವರದಿಗಳಿವೆ. ಯೋಜನೆಗಾಗಿ ವಿಶೇಷ ನಿಧಿಯ ಅಲಭ್ಯತೆ ಇದಕ್ಕೆ ಕಾರಣವೆನ್ನಲಾಗಿದೆ. ನರೇಗಾ,ಎನ್‌ಆರ್‌ಡಿಡಬ್ಲುಪಿದಂತಹ ಗ್ರಾಮೀಣಾಭಿವೃದ್ಧಿ ಯೋಜನೆಗಳು,ಕಾರ್ಪೊರೇಟ್ ಸಾಮಾಜಕ ಹೊಣೆಗಾರಿಕೆ ನಿಧಿ,ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಇತ್ಯಾದಿ ಮೂಲಗಳಿಂದ ಸಂಸದರು ಆದರ್ಶ ಗ್ರಾಮಕ್ಕಾಗಿ ನಿಧಿಯನ್ನು ಕ್ರೋಡೀಕರಿಸಬಹುದಾದರೂ ಈ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ. ವಾರಣಾಸಿಯಲ್ಲಿ ದತ್ತು ಪಡೆದಿರುವ ಗ್ರಾಮಗಳಿಗಾಗಿ ಈವರೆಗೆ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಹಣದ ಬಳಕೆಯಾಗಿಲ್ಲ ಎಂದು ಆರ್‌ಟಿಐ ಉತ್ತರವೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News