ಕೇರಿಗಳಲ್ಲಿರುವ ದಲಿತರು ಊರಿನ ಮಧ್ಯಬಾಗಕ್ಕೆ ಬಂದು ಊರನ್ನೇ ಬದಲಿಸಬೇಕಿದೆ : ಸಚಿವ ಎನ್.ಮಹೇಶ್

Update: 2018-08-10 18:10 GMT

ಮೈಸೂರು,ಆ.10: ಪ್ರಸ್ತುತ ದಿನಗಳಲ್ಲಿ ಕೇರಿಗಳಲ್ಲಿರುವ ದಲಿತರು ಊರಿನ ಮಧ್ಯಭಾಗಕ್ಕೆ ಬಂದು ಇಡೀ ಊರನ್ನೆ ಬದಲಾಯಿಸಬೇಕಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಆಭಿಪ್ರಾಯಿಸಿದರು.

ಮೈಸೂರಿನ ಮಾನಸಗಂಗೋತ್ರಿಯಲ್ಲಿರುವ ರಾಣಿಬಹದ್ದೂರ್ ಸಭಾಂಗಣದಲ್ಲಿ ಶುಕ್ರವಾರ ಪ್ರೊ.ಅರವಿಂದ ಮಾಲಗತ್ತಿ ಅಭಿನಂದನಾ ಸಮಾರಂಭದ ಸಿಡಿ ಬಿಡುಗಡೆ ಮಾಡಿ ಮಾತನಾಡಿದರು.

ನಮ್ಮಲ್ಲಿ ಎರಡು ಭಾರತಗಳಿವೆ ಒಂದು ಸ್ಪೃಶ್ಯ ಭಾರತ ಮತ್ತೊಂದು ಅಸ್ಪೃಶ್ಯ ಭಾರತ, ದಲಿತರು ಹಲವಾರು ಕಾರಣಗಳಿಗೆ ಪ್ರತ್ಯೇಕವಾಗಿ ಬದುಕುವಂತಾಗಿದೆ. ಊರಿದ್ದರೂ ಕೇರಿಗಳನ್ನು ನೋಡುತ್ತೇವೆ. ನನ್ನ ಕಳೆದ 30 ವರ್ಷಗಳ ಹೋರಾಟದ ಅನುಭವದಲ್ಲಿ ಹೇಳುವುದಾದರೆ ಕೇರಿಗಳಲ್ಲಿರುವ ಪ್ರತಿಭೆಗಳು ಊರಿನ ಮಧ್ಯಭಾಗಕ್ಕೆ ಬಂದು ಇಡೀ ಊರನ್ನೇ ಬದಲಾಯಿಸಬೇಕು. ಅಂತಹ ಕಾಲ ಬರುತ್ತದೆ ಎಂದು ಹೇಳಿದರು.

ಅರವಿಂದ ಮಾಲಗತ್ತಿಯವರ ಸಾಹಿತ್ಯ ಊರಿನ ಮಧ್ಯದಲ್ಲಿ ನಿಂತು ಇಡೀ ಸಮಾಜವನ್ನು ಬದಲಾಯಿಉವ ಕೆಲಸ ಮಾಡಬೇಕಿದೆ. 21ನೇ ಶತಮಾನದಲ್ಲಿ ಊರಲ್ಲಿದ್ದ ಪ್ರತಿಭಾವಂತರು ಕೇರಿಯಲ್ಲಿದ್ದಾರೆ. ಒಂದು ರಾಷ್ಟ್ರದೊಳಗಡೆ ದೊಡ್ಡ ಸಮುದಾಯ ಪ್ರತ್ಯೇಕವಾಗಿ ಬದುಕುವ ವ್ಯವಸ್ಥೆ ಇದೆ ಅಂದರೆ ಅದಕ್ಕಿಂತ ಅಪಾಯಕರಿ ಬೆಳವಣಿಗೆ ಇನ್ನೊಂದಿಲ್ಲ ಎಂದು ಹೇಳಿದರು.

ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಮಾತನಾಡಿ, ದಲಿತ ಎನ್ನುವುದು ಒಂದು ವಸ್ಥೆಯಾಗಿದೆ. ಶೋಷಿತರು, ದಮನಿತರು ಅವಕಾಶ ವಂಚಿತರು ಅವರೆಲ್ಲರೂ ದಲಿತರೇ. ಅರವಿಂದ ಮಾಲಗತ್ತಿ ಅವರು ಸೀಮಾತೀತರು. ಅದಕ್ಕೆ ಎರಡು ಉಕ್ತಿ ಸ್ಮರಿಸುತ್ತೇನೆ. ಕುಲಸೀಮೆಯಲ್ಲಿದ ನಿಸ್ಸೀಮ, ಸೀಮಾಪುರಷ ಎಂದು ಬಣ್ಣಿಸಿದರು. ಆಧುನಿಕ ಕನ್ನಡ ಸಾಹಿತ್ಯ ಒಂದು ತಿರುವಿನಲ್ಲಿದ. ಆ ತಿರುವಿನ ಹರಿಕಾರರಲ್ಲೊಬ್ಬರು ಪ್ರೊ.ಅರವಿಂದ ಮಾಲಗತ್ತಿ. ಕನ್ನಡದ ದಲಿತ ಸಾಹಿತ್ಯದ ದೈತ್ಯ ಎಂದೂ ಕರೆಯಬಹುದು. ದಲಿತ ಎಂಬುದು ವಿಶೇಷಣ, ಅವರ ಮುಖ್ಯ ನೆಲೆಯನ್ನು ನಿರ್ದೇಶಿಸಲು ಕೂಡ ಬಿಟ್ಟು ನೋಡಬಹುದು. ಬಿಟ್ಟು ನೋಡಿದರೂ ಕೂಡ ಅವರು ದೈತ್ಯವಾಗಿಯೇ ಕಾಣಿಸುತ್ತಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಹಂಗಾಮಿ ಕುಲಪತಿ ಪ್ರೊ.ಟಿ.ಕೆ.ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ, ಸಕುಲಸಚಿವ ಪ್ರೊ.ಆರ್.ರಾಜಣ್ಣ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ. ನೀಲಗಿರಿ ಎಂ. ತಳವಾರ್ ಉಪಸ್ಥಿತರಿದ್ದರು. 

ಹಳ್ಳಿ ಹಳ್ಳಿಗೂ ಜ್ಞಾನದ ದೀವಿಗೆ ತಲುಪಿಸಿದ್ದು ದಸಂಸ: ಪ್ರೊ.ಅರವಿಂದ ಮಾಲಗತ್ತಿ
ಹಳ್ಳಿ ಹಳ್ಳಿಗೂ ಜ್ಞಾನದ ದೀವಿಗೆಯನ್ನು ತಲುಪಿಸಿದ ಯಾವುದಾದರು ಒಂದು ವಿಶ್ವವಿದ್ಯಾನಿಲಯ ಇದೆ ಎಂದು ಅದು ದಲಿತ ಸಂಘರ್ಷ ಸಮಿತಿ ಎಂದು ಖ್ಯಾತ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ತಿಳಿಸಿದರು.

ಪ್ರೊ.ಅರವಿಂದ ಮಾಲಗತ್ತಿ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಪ್ರೊ.ಅರವಿಂದ ಮಾಲಗತ್ತಿಯವರೊಂದಿಗಿನ ಆತ್ಮೀಯ ಸಂವಾದದಲ್ಲಿ  ಅವರು ಮಾತನಾಡಿದರು.

ಕರ್ನಾಟಕದಲ್ಲಿರುವ ಎಲ್ಲ ವಿಶ್ವವಿದ್ಯಾನಿಲಯಗಳಿಗೂ ಸಮನಾದ ವಿಶ್ವವಿದ್ಯಾನಿಲಯ ದಲಿತ ಸಂಘರ್ಷ ಸಮಿತಿ. ದಸಂಸ ಕುಲಪತಿ ಇಲ್ಲದಿರುವ ದೊಡ್ಡ ವಿಶ್ವವಿದ್ಯಾನಿಲಯ. ಹಳ್ಳಿ ಹಳ್ಳಿಗೂ ಜ್ಞಾನದ ದೀವಿಗೆಯನ್ನು ತಲುಪಿಸಿದ ವಿದ್ಯಾನಿಲಯ ಎಂದು ಹೇಳಿದರು.

ದಸಂಸ ನನಗೆ ಸಾಕಷ್ಟು ಪಾಠ ಕಲಿಸಿದೆ. ಸಂಘಟನೆ ಹೊಡೆಯುವುದು, ಮತ್ತೆ ಒಗ್ಗೂಡುವುದು ಸಹಜ ಪ್ರಕ್ರಿಯೆ. ದಸಂಸ ಬಗ್ಗೂಡಲು ಕಾಲಕೂಡಿಬರಬೇಕು, ಸಂಘಟನೆ ಒಂದಾಗುವ ಆಶಾಭಾವನೆಯಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪತ್ರಕರ್ತ ಬಿ.ಎಂ.ಹನೀಫ್ ಅವರು ಕೇಳಿದ ಬಾಂಬೆ ಉಚ್ಚ ನ್ಯಾಯಾಲಯ ದಲಿತ ಪದ ಬಳಸುವಿಕೆ ನಿಷೇದಿಸಿ ತೀರ್ಪು ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಲಗತ್ತಿ ಅವರು, ದಲಿತ ಭಾವಾನತ್ಮಾಕ ಪದ. ಇದಕ್ಕೆ ಹೋರಾಟದ ಶಕ್ತಿಯಿದೆ. ಆದ್ದರಿಂದ ಈ ಪದವನ್ನೇ ನಿಷೇದಿಸಿದರೆ ಹೋರಾಟವನ್ನೇ ಇಲ್ಲದಂತೆ ಮಾಡುವ ಪರೋಕ್ಷವಾದ ಆಲೋಚನ ಕ್ರಮ. ಇದು ಸರಿಯಲ್ಲ ಎಂದರು. 

ಪ್ರೊ.ಎನ್.ಎಸ್.ತಾರಾನಾಥ್ ಅವರು ತಾಯಿ ಕುರಿತು ಕೇಳಿದ ಪ್ರಶ್ನೆಗೆ ಭಾವುಕರಾಗಿ ಮಾತನಾಡಿದ  ಮಾಲಗತ್ತಿ ಅವರು, ವಾರದ ಹಿಂದೆ ಇದ್ದ ನನ್ನ ತಾಯಿ ಈಗಿಲ್ಲ. ಅವರು ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿದ್ದಾರೆ. ತಾಯಿ ಬಗ್ಗೆಯೇ ಹೆಚ್ಚು ಕವನ ಬರೆದಿದ್ದೇನೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News