ಅಖಂಡ ಕರ್ನಾಟಕ ನಮಗೆ ಬೇಕಿಲ್ಲವೇ...?

Update: 2018-08-11 11:23 GMT

ಉದಯವಾಗಲಿ ಚೆಲುವ ಕನ್ನಡನಾಡು

ಬದುಕು ಬಲುಹೀನ ನಿಧಿಯು ಸದಭಿಮಾನದ ಗೂಡು

ಅಂದು 1924ನೇ ಇಸವಿ ಬೆಳಗಾವಿಯಲ್ಲಿ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಸಂಗೀತ ವಿದೂಷಿ ಗಂಗೂಬಾಯಿ ಹಾನಗಲ್ ರವರು ಬಾಲಕಿಯಾಗಿದ್ದಾಗ ಹಾಡಿದಂಥ ಹಾಡಿದು. ಇದು ಹುಯಿಲಗೋಳ ನಾರಾಯಣರಾಯರು ಬರೆದಂಥ ಗೀತೆ. ಅದು ಅಂದಿನ ಕಾಲಕ್ಕೆ ಕನ್ನಡ ಭಾಷೆಗೆ ರಾಷ್ಟ್ರಗೀತೆಯೇ ಸರಿ. ಮೊದಲಿನಿಂದಲೂ ಭಾಷಾತೀತ ರಾಷ್ಟ್ರವಾಗಿರುವ ಭಾರತದಲ್ಲಿ ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡವೂ ದ್ರಾವಿಡಭಾಷೆಗಳಲ್ಲಿ ಒಂದು. ಇಂತಹ ಭಾಷಾಪ್ರೇಮ ಹೊತ್ತ ಹುಯಿಲಗೋಳ ನಾರಾಯಣರಾಯರು ಕನ್ನಡಕ್ಕಾಗಿಯೇ ಬರೆದಂಥ ಅದ್ಭುತ ಅರ್ಥಗಳುಳ್ಳ ಸಾಲಿನ ಪದಗಳು. ಸ್ವತಂತ್ರ ಪೂರ್ವದಲ್ಲೇ ಭಾಷಾಭಿಮಾನದಿಂದ ಒಗ್ಗೂಡುವ ಪ್ರಯತ್ನಕ್ಕೆ ನಾಂದಿಯಾಯಿತೇನೋ ಇವರ ಬರಹದ ಹಾಡು.

ಏಕೀಕರಣಗೊಂಡ ಕರ್ನಾಟಕ 60 ವಸಂತಗಳನ್ನ ಪೂರೈಸಿ ವಜ್ರಮಹೋತ್ಸವವನ್ನೂ ಆಚರಿಸಿಕೊಂಡಿದೆ. ಕನ್ನಡ ಭಾಷಿಕರು ವಾಸಿಸುವ ಬಹುತೇಕ ಪ್ರದೇಶಗಳೆಲ್ಲಾ ಪ್ರಥಮವಾಗಿ ಒಂದಾದ ಈ ಉತ್ಸವಕ್ಕೆ ಏನಿಲ್ಲವೆಂದರೂ ಒಂದೂವರೆ ಶತಮಾನದ ಹಿನ್ನೆಲೆ ಇದೆ. ಹಿಂದೆ ಒಂದು ಭೂಭಾಗಕ್ಕೆ ಕರ್ನಾಟಕವೆಂಬ ಹೆಸರು ಇರಲಿಲ್ಲ. ಕನ್ನಡ ಭಾಷೆ ಮಾತನಾಡುವ ಸ್ಥಳಗಳಲ್ಲಿ ಕನ್ನಡಿಗರೇ ಆಳ್ವಿಕೆ ನಡೆಸಿದರು. ಕದಂಬರು ಕನ್ನಡ ಮಾತೃಭಾಷೆಯ ರಾಜಮನೆತನಗಳಲ್ಲಿ ಮೊದಲಿಗರು. ಇವರ ಬಳಿಕ ಹಲವಾರು ರಾಜವಂಶಗಳು ನೂರಾರು ವರ್ಷಗಳ ಕಾಲ ವಿವಿಧ ಭಾಗಗಳಲ್ಲಿ ಆಡಳಿತ ನಡೆಸಿದರು. ಕನ್ನಡ ಭಾಷೆಗೆ ಆಗ ಮಾನ್ಯತೆ ಇತ್ತು.

ಬ್ರಿಟಿಷರು ಭಾರತಕ್ಕೆ ಬಂದು ಭಾರತವನ್ನೇ ತಮ್ಮ ಅಂಕೆಗೆ ತೆಗೆದುಕೊಳ್ಳಲು ಆರಂಭಿಸಿದರು. ಅನೇಕ ದೌರ್ಬಲ್ಯಗಳಿಂದ ನಮ್ಮ ನೂರೆಂಟು ಸಂಸ್ಥಾನಗಳು ಅವರ ವಶಕ್ಕೆ ಹೋದವು. ಬೆರಳೆಣಿಕೆಯಷ್ಟು ರಾಜರು ಮಾತ್ರ ಬಿಳಿಯರ ವಿರುದ್ಧ ಸೆಟೆದು ನಿಂತರು. ಅಂಥವರಲ್ಲಿ ಮೈಸೂರು ಸಂಸ್ಥಾನದ ಟಿಪ್ಪುಸುಲ್ತಾನ್ ಕೂಡ ಒಬ್ಬರು. ಕೊನೆಯ ಮೈಸೂರು ಯುದ್ಧದಲ್ಲಿ ಟಿಪ್ಪುಸುಲ್ತಾನ್ ಪತನಗೊಂಡಿದ್ದು 1799ರಲ್ಲಿ. ಆ ಹೊತ್ತಿಗಾಗಲೇ ದೇಶದೆಲ್ಲೆಡೆ ಬ್ರಿಟಿಷರ ಆಡಳಿತ ಶುರುವಾಗಿತ್ತು. ಗೆದ್ದ ಪ್ರಾಂತಗಳನ್ನೆಲ್ಲಾ ಅವರಿಷ್ಟಕ್ಕೆ ಬಂದಂತೆ ಹಂಚಿಕೆ ಮಾಡಲು ಆರಂಭಿಸಿದರು. ಇಂಥಹ ವಿಭಜನೆಗೆ ಒಳಪಟ್ಟವರಲ್ಲಿ ಕನ್ನಡಿಗರೂ ಸೇರಿದ್ದರು. ಕನ್ನಡ ಮಾತನಾಡುವ ಪ್ರದೇಶಗಳನ್ನು ಸುಮಾರು 20ಕ್ಕೂ ಹೆಚ್ಚು ಭಾಗಗಳಾಗಿ ವಿಂಗಡಿಸಿದರು. ಕೆಲವು ಪ್ರದೇಶಗಳನ್ನು ತಾವೇ ಇಟ್ಟುಕೊಂಡರೆ ಇನ್ನೂ ಹಲವು ಪ್ರದೇಶಗಳನ್ನು ತಮಗೆ ಬೆಂಬಲಿಸುತ್ತಿದ್ದ ಸಂಸ್ಥಾನಗಳಿಗೆ ಬಿಟ್ಟುಕೊಟ್ಟರು. ದುರದೃಷ್ಟವೆಂದರೆ ಅವರು ಅನ್ಯ ಭಾಷಿಕರಾಗಿದ್ದರು. ಅವರ ಆಳ್ವಿಕೆಯಲ್ಲಿ ಕನ್ನಡ ಮಾತನಾಡುವವರು ಅಕ್ಷರಶಃ ಅನಾಥರಾದರು.
ಮರಾಠಿ, ಉರ್ದು, ತಮಿಳು, ತೆಲುಗು ಭಾಷಿಕರ ನಡುವೆ ಕನ್ನಡಿಗರು ಇರಲೇಬೇಕಾದ ಅನಿವಾರ್ಯ ಸಂದರ್ಭ ಸೃಷ್ಟಿಯಾಯಿತು. ಆಡಳಿತಗಾರರು ಕನ್ನಡಿಗರ ಆತಂಕ ದೂರ ಮಾಡುವ ಯಾವ ಕ್ರಮವನ್ನೂ ತೆಗೆದುಕೊಳ್ಳುತ್ತಿರಲಿಲ್ಲ.

ನಮಗೆ ಅನ್ಯಾಯವಾಗುತ್ತಿದೆ, ನಮ್ಮ ಭಾಷೆಗೆ ತೊಂದರೆಯಾಗುತ್ತಿದೆ ಎಂದು ಒಗ್ಗಟ್ಟಾಗಿ ಹೇಳುವ ಪರಿಸ್ಥಿತಿಯೂ ಕನ್ನಡಿಗರಿಗೆ ಇರಲಿಲ್ಲ. ನಮ್ಮದೇ ನೆಲದಲ್ಲಿ ನಾವೇ ಅಲ್ಪ ಸಂಖ್ಯಾತರೆನ್ನಿಸಿಕೊಂಡು ಬವಣೆ ಪಡುವ ಗೋಳು ನಮ್ಮದಾಗಿತ್ತು. ಸಾವಿರಾರು ವರ್ಷಗಳಿಂದ ಉಳಿದುಕೊಂಡಿದ್ದ, ಕನ್ನಡಿಗರ ಸಂಸ್ಕೃತಿಗೆ ಧಕ್ಕೆ ಉಂಟಾಯಿತು. ಇಪ್ಪತ್ತಕ್ಕೂ ಹೆಚ್ಚು ದ್ವೀಪಗಳಾಗಿ ಹಂಚಿ ಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳಲ್ಲಿ ಕನ್ನಡತನ ಉಳಿಸಿ ಕೊಳ್ಳುವುದು ಅಸಾಧ್ಯವಾಗಿತ್ತು. ಅಚ್ಚ ಕನ್ನಡ ಮಾತನಾಡುವ ಪ್ರದೇಶಗಳಲ್ಲಿ ಅನ್ಯಭಾಷಿಕರು ಅವರ ಭಾಷೆಯನ್ನು ಬೇಕೆಂದೇ ಹೇರುತ್ತಿದ್ದರು. ಆಡಳಿತ ಅವರ ಕೈಯಲ್ಲಿದ್ದರಿಂದ ಕನ್ನಡಿಗರು ಮಣಿಯಲೇಬೇಕಾದ ಅನಿವಾರ್ಯ ಸ್ಥಿತಿ ಅದು. ಭಾಷೆ ಕಳೆದುಕೊಳ್ಳುತ್ತಿರುವ ಭೀತಿ ಒಂದೆಡೆಯಾದರೆ ಅನ್ಯಭಾಷಿಕರ ದಬ್ಬಾಳಿಕೆಗೆ ಕನ್ನಡಿಗರು ಗುರಿಯಾದರು. ಇಂಥಹ ಯಾತನಾಮಯ ಪರಿಸ್ಥಿತಿಯಲ್ಲಿ ಸಾಂಸ್ಕೃತಿಕವಾಗಿ, ಪ್ರಾದೇಶಿಕವಾಗಿ ಕನ್ನಡಿಗರೆಲ್ಲಾ ಒಂದಾಗಬೇಕೆಂಬ ಕೂಗು ಎದ್ದಿತು. ತಾತ್ವಿಕ ತಳಹದಿಯ ಮೇಲೆ ಕನ್ನಡ ಸಂಸ್ಕೃತಿ-ಕನ್ನಡಿಗರು ಒಂದುಗೂಡಲು ಆರಂಭವಾದ ಆಂದೋಲನವೇ ಕನ್ನಡ ಏಕೀಕರಣ ಚಳವಳಿ. ಕನ್ನಡಕ್ಕೆ, ಕನ್ನಡಿಗರಿಗೆ ನಾವೆಲ್ಲಾ ಒಂದಾಗಬೇಕೆಂದು ಮೊದಲು ಪ್ರೇರಣೆ ಕೊಟ್ಟವರು ಅಭಿವ್ಯಕ್ತಿ ಮಾಡಲು ಅವಕಾಶವಿದ್ದ ಕವಿಗಳು, ಸಾಹಿತಿಗಳು, ಕಲಾವಿದರು. ಅವರಿಂದಾಗಿ ಕಥೆ-ಕವನ-ಕಾದಂಬರಿ-ಚಿತ್ರ, ಬರಹಗಳಲ್ಲಿ ಕನ್ನಡತ್ವ ಕಾಣಿಸಿಕೊಳ್ಳತೊಡಗಿತು.

ಆ ಕಾಲಘಟ್ಟದಲ್ಲಿ ಕನ್ನಡಿಗರೆಲ್ಲರೂ ಒಂದಾಗಿ ಹೋರಾಟ ನಡೆಸುವ ವಾತಾವರಣ ಇರಲಿಲ್ಲ. ಇಂಗ್ಲೆಂಡ್‌ನ ವ್ಯಾಪಾರಿ ಸಂಸ್ಥೆಯೊಂದು ಭಾರತದಲ್ಲಿ ಅಂದಾದುಂದಿ ಆಡಳಿತ ನಡೆಸುತ್ತಿತ್ತು. ಇದರಿಂದ ಇಂಗ್ಲೆಂಡ್‌ನ ಪ್ರತಿಷ್ಠೆಗೆ ಪೆಟ್ಟು ಬಿದ್ದಾಗ ಸ್ವತಃ ಬ್ರಿಟನ್ ರಾಣಿಯೇ ಭಾರತದ ಆಡಳಿತವನ್ನು ನೇರವಾಗಿ ಕೈಗೆತ್ತಿಕೊಂಡರು. ಆಗ ಅಲ್ಲಿದ್ದ ಬಿಗಿ ವಾತಾವರಣ ಕಡಿಮೆಯಾಯಿತು. ಆಗ ಆಡಳಿತ ನಡೆಸಲು ಬಂದ ಕೆಲವು ಅಧಿಕಾರಿಗಳು ಕನ್ನಡಿಗರ ಪಡಿಪಾಟಲುಗಳನ್ನು ನೋಡಿ ವಾಸ್ತವ ಸ್ಥಿತಿಯನ್ನು ಮೇಲಧಿಕಾರಿಗಳಿಗೆ ವರದಿ ನೀಡಿದರು. ಆ ಸಮಯದಲ್ಲಿ ಕನ್ನಡಿಗರ ಬಗೆಗೆ ಸಹಾನುಭೂತಿ ಸಿಕ್ಕಿತು. ಅಲ್ಲದೆ ತಾವು ಇಷ್ಟು ವರ್ಷ ಕಳೆದುಕೊಂಡಿದ್ದನ್ನು ಮತ್ತೆ ಪಡೆಯಬೇಕಾದರೆ ಒಗ್ಗಟ್ಟಾಗಬೇಕೆಂಬ ಅಭಿಲಾಷೆ ಕನ್ನಡಿಗರಲ್ಲಿ ಮೂಡಿತು. ಅದಕ್ಕೆ ಬ್ರಿಟಿಷ್ ಅಧಿಕಾರಿಗಳು-ಸಂಶೋಧಕರು ಬೆಂಬಲ ಕೊಟ್ಟರು. ಕೇವಲ ಅನುಕೂಲಕ್ಕೆ ತಕ್ಕಂತೆ ಪ್ರದೇಶಗಳನ್ನು ತುಂಡು ತುಂಡು ಮಾಡಿದ್ದ ಬ್ರಿಟಿಷ್ ಸರಕಾರದ ನೀತಿಯನ್ನು ದೇಶದ ಕೆಲವೆಡೆ ವಿರೋಧಿಸುವ ಕಾರ್ಯ ನಡೆಯಿತು. ವಾಸ್ತವಾಂಶ ಗೊತ್ತಿದ್ದ ಕೆಲ ಇಂಗ್ಲಿಷ್ ಅಧಿಕಾರಿಗಳೂ ಭಾಷೆಯ ಆಧಾರದ ಮೇಲೆ ಪ್ರಾಂತಗಳನ್ನು ವಿಂಗಡಿಸಲು ಸೂಚಿಸಿದರು. ಆದರೆ ಇದರಿಂದ ಹೆಚ್ಚಿನ ಪ್ರಗತಿಯೇನೂ ಆಗಲಿಲ್ಲ. ಯಥಾಸ್ಥಿತಿ ಮುಂದುವರಿಯಿತು. ಕರ್ನಾಟಕದಲ್ಲಿ ಕನ್ನಡಕ್ಕೆ ಶಾಲೆಗಳಲ್ಲಿ ಹೆಚ್ವಿನ ಮಾನ್ಯತೆ ಸಿಕ್ಕಿತು. ಕೆಲವು ಕನ್ನಡ ಶಾಲೆಗಳು ಪ್ರಾರಂಭವಾದವು.

19ನೇ ಶತಮಾನದ ಕೊನೆ ವೇಳೆಗೆ ಭಾರತ ಸ್ವತಂತ್ರವಾಗಬೇಕೆಂಬ ಕೂಗು ಎಲ್ಲೆಡೆ ಕೇಳಿಬಂತು. ಆಡಳಿತದ ಅನುಕೂಲಕ್ಕಾಗಿ ವಿಭಜನೆಯಾದ ಭಾಷಿಕರೂ ಸ್ವಾತಂತ್ರ್ಯ ಚಳವಳಿಗೆ ದೊಡ್ಡ ಪ್ರಮಾಣದಲ್ಲಿಯೇ ಕೈ ಜೋಡಿಸಿದರು. ಭಾಷಾವಾರು ಪ್ರಾಂತಗಳು ರಚನೆಗೊಳ್ಳಬೇಕೆಂಬ ಒಳಷರತ್ತಿನೊಡನೆ ಹೋರಾಟ ಮೊದಲಾಯಿತು. ಅದಕ್ಕೆ ಕನ್ನಡ ನಾಡು ಸೇರಿತು, ಕರ್ನಾಟಕ ಏಕೀಕರಣದ ಆಗ್ರಹವೂ ಅದರಲ್ಲಿತ್ತು. ಕನ್ನಡ ಮಾತನಾಡುವ ಪ್ರದೇಶಗಳಲ್ಲಿ ಮುಂಬೈ ಭಾಗ ಹಾಗೂ ನಿಜಾಮರ ಆಡಳಿತದ ಪ್ರಾಂತಗಳು ಕನ್ನಡಿಗರಿಗೆ ತೊಂದರೆ ಒಡ್ಡಿದ್ದವು. ಒಂದೆಡೆ ಮರಾಠಿ ಪ್ರಾಬಲ್ಯ ಇನ್ನೊಂದೆಡೆ ಉರ್ದು ಹೇರಿಕೆ. ಕನ್ನಡಿಗರದು ಉಸಿರು ಕಟ್ಟಿದಂತಹ ಪರಿಸ್ಥಿತಿ. ಮುಂಬೈ ವಲಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಭಾಷೆ ಬೆಳೆಸಲು ಹೆಚ್ಚಿನ ಒತ್ತಾಸೆಗಳು ಆರಂಭಗೊಂಡವು. ಇದಕ್ಕೆ ಶಾಂತ ಕವಿಗಳು, ಡೆಪ್ಯೂಟಿ ಚೆನ್ನಪ್ಪನವರು ಭದ್ರ ಬುನಾದಿಯನ್ನು ಒದಗಿಸಿಕೊಟ್ಟರು. ಕನ್ನಡದ ಚಟುವಟಿಕೆಗಳು ಶಾಲೆಗಳ ಹೊರಗೂ ಪ್ರಾರಂಭಗೊಂಡವು. ರಾ.ಹ ದೇಶಪಾಂಡೆ ಅವರು ಸಮಾನ ಮನಸ್ಕರೊಂದಿಗೆ ಸ್ಥಾಪಿಸಿದ ‘ಕರ್ನಾಟಕ ವಿದ್ಯಾವರ್ಧಕ ಸಂಘ’ ಕನ್ನಡಪರ ದನಿ ಎತ್ತಲು ಸಾಂಸ್ಥಿಕ ರೂಪಕೊಟ್ಟಿತು.

ಕನ್ನಡ ‘ವಾಗ್ಭೂಷಣ’ ಪತ್ರಿಕೆ ಏಕೀಕರಣದ ಅಗತ್ಯತೆಯನ್ನು ಸ್ಪಷ್ಟವಾಗಿ ಪ್ರಕಟಿಸಿತು. ಅಸ್ಸಾಂ, ಬಂಗಾಲ, ಗುಜರಾತ್ ಮೊದಲಾದ ಕಡೆಗಳಲ್ಲಿ ಸ್ಥಳೀಯ ಭಾಷೆಗಳ ನೆಲೆಯಲ್ಲಿ ನಡೆಸಿದ ಚಳವಳಿಗಳನ್ನು ಗಮನಿಸುತ್ತಿದ್ದ ಮುಂಬೈ ಭಾಗದ ಕನ್ನಡಿಗರು ಕನ್ನಡ ಏಕೀಕರಣದ ಧ್ವನಿಯನ್ನು ನಿರಂತರವಾಗಿ ಉಳಿಸಿಕೊಂಡು ಬಂದರು. ಇದೇ ಹಾದಿಯಲ್ಲಿ ಅಖಿಲ ಕರ್ನಾಟಕ ಗ್ರಂಥಕರ ಸಮ್ಮೇಳನವೂ ನಡೆಯಿತು. ಎಲ್ಲವೂ ಏಕೀಕರಣಕ್ಕೆ ಪೂರಕವಾದ ವಾತಾವರಣವನ್ನು ಹುಟ್ಟುಹಾಕಿದವು. ಮೈಸೂರು ಪ್ರಾಂತದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು 1915ರಲ್ಲಿ ಜನ್ಮತಾಳಿ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಕನ್ನಡ ಮಾತನಾಡುವ ಪ್ರದೇಶಗಳಲ್ಲಿ ಏರ್ಪಡಿಸಿ ಅಲ್ಲಿ ಕನ್ನಡಪರ, ಕರ್ನಾಟಕಪರ ಚಿಂತನೆಗಳು ಹೊರ ಹೊಮ್ಮುವಂತೆ ಮಾಡಿತು.

ಕರ್ನಾಟಕದ ಭವ್ಯ ಇತಿಹಾಸ, ಕನ್ನಡ ಸಾಹಿತ್ಯದ ಶ್ರೀಮಂತಿಕೆ, ಕನ್ನಡ ನೆಲದ ವೈಶಿಷ್ಟ್ಯ ಮುಂತಾದ ವಿಷಯಗಳನ್ನು ಒಳಗೊಂಡ ಹಲವಾರು ಕೃತಿಗಳು ಕನ್ನಡಿಗರ ಕೈ ತಲುಪಿದವು. ಎಲ್ಲವೂ ಕರ್ನಾಟಕತ್ವವನ್ನು ಪ್ರತಿಪಾದಿಸುತ್ತಿದ್ದವು. ರಾಷ್ಟೀಯ ಹೋರಾಟದ ಜೊತೆ ಜೊತೆಗೆ ಕರ್ನಾಟಕ ಏಕೀಕರಣ ಚಳವಳಿಯೂ ಹೆಜ್ಜೆ ಹಾಕಿತು. ಭಾರತದಲ್ಲಿ ಭಾಷಾವಾರು ಪ್ರಾಂತಗಳು ಅಗತ್ಯವೆಂಬ ಮುಂದಾಲೋಚನೆಯಿಂದ ಕಾಂಗ್ರೆಸ್ ಪಕ್ಷ ಸಮಿತಿಗಳು ಭಾಷೆಯ ಆಧಾರದ ಘಟಕಗಳಾಗುವಂತೆ ಶ್ರಮಿಸಿದ್ದವು. ಮಹಾತ್ಮ್ಮಾಗಾಂಧಿ ಅವರು ಅಖಿಲ ಭಾರತ ಕಾಂಗ್ರೆಸ್ ವಾರ್ಷಿಕ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ಅದರ ಇತಿಹಾಸದಲ್ಲಿ ಒಮ್ಮೆ ಮಾತ್ರ. ಅದು ನಡೆದದ್ದು ಕನ್ನಡದ ನೆಲ ಬೆಳಗಾವಿಯಲ್ಲಿ (1924). ಇದೇ ಸಮ್ಮೇಳನ ಕರ್ನಾಟಕ ಏಕೀಕರಣದ ಮುನ್ನುಡಿ ಬರೆಯಲು ಪ್ರೇರೇಪಿಸಿತು. ಕರ್ನಾಟಕ ಏಕೀಕರಣ ಚಳವಳಿ ಜೀವಂತವಾಗಿಯೇ ಇತ್ತು.

ಸ್ವಾತಂತ್ರ್ಯಾನಂತರ ಕಾಂಗ್ರೆಸ್‌ನ ಅಗ್ರಗಣ್ಯ ನಾಯಕರಲ್ಲೊಬ್ಬರಾದ ಎಸ್. ನಿಜಲಿಂಗಪ್ಪಎಡೆಬಿಡದೆ ಆಗಿನ ಪ್ರಧಾನಿ ನೆಹರೂ ಅವರನ್ನು ಏಕೀಕರಣಕ್ಕಾಗಿ ನಿರ್ಧಾರ ತೆಗೆದುಕೊಳ್ಳಲು ನೆನಪು ಮಾಡುತ್ತಲೇ ಇದ್ದರು. ಸ್ವಾತಂತ್ರ್ಯಪೂರ್ವದಲ್ಲಿ ಕಾಂಗ್ರೆಸ್ ನೀಡಿದ್ದ ಆಶ್ವಾಸನೆಗಳನ್ನು ಒಪ್ಪಿಕೊಳ್ಳಲು ಕೇಂದ್ರ ಸರಕಾರ ಹಿಂದೇಟು ಹಾಕಿತು. ಆಂಧ್ರ ಉದಯದ ಸಮಯದಲ್ಲಿ ಬಳ್ಳಾರಿ ಮೈಸೂರಿಗೆ ಸೇರ್ಪಡೆಯಾದ ಸಂಭ್ರಮದ ಗಳಿಗೆಯಲ್ಲಿ ಯುವಕ ರಂಜಾನ್ ಸಾಬ್ ಅಸುನೀಗಿದರು. ಈ ಪ್ರಾಣಿಬಲಿ ಹಿಂದೆಯೇ ಕನ್ನಡಿಗರು ಆಮರಾಣಾಂತ ಉಪವಾಸ, ಸತ್ಯಾಗ್ರಹ ಅಸ್ತ್ರಪ್ರಯೋಗಿಸಿದರು. ದೊಡ್ಡ ಮೇಟಿ ಹಾಗೂ ಅದರ ಗುಂಚಿ ಶಂಕರಕಲ್ಲನ ಗೌಡ ಪಾಟೀಲರು ಉಪವಾಸ ಕೂತರು. ಪರಿಸ್ಥಿತಿ ಬಿಗಡಾಯಿಸಿತು. ಅಧಿಕಾರರೂಢ ಕಾಂಗ್ರೆಸ್ ಕೈಚೆಲ್ಲಿ ಕುಳಿತಾಗ ಕಾಂಗ್ರೆಸ್ಸೇತರ ಪಕ್ಷಗಳು ಚಳವಳಿ ಕೈಗೆತ್ತಿಕೊಂಡವು. ಅದರಲ್ಲಿ ಕಮ್ಯುನಿಸ್ಟ್ ಹಾಗೂ ಪ್ರಜಾ ಸಮಾಜವಾದಿ ಪಕ್ಷಗಳು ಮುಖ್ಯವಾದವು.

ಆ ವೇಳೆಗೆ ಅಸ್ತಿತ್ವಕ್ಕೆ ಬಂದಿದ್ದ ಅಖಿಲ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತು ಏಕೀಕರಣಕ್ಕಾಗಿ ಹೋರಾಟಕ್ಕೆ ಇಳಿಯಿತು. ಪ್ರತಿಭಟನೆ-ಮೆರವಣಿಗೆ ಉಪವಾಸ, ಸಮ್ಮೇಳನ ಇವೆಲ್ಲ ಅವ್ಯಾಹತವಾಗಿ ನಡೆಯಲಾರಂಭಿಸಿದ್ದರಿಂದ ಅನ್ಯಮಾರ್ಗವಿಲ್ಲದೆ ಕೇಂದ್ರ ಸರಕಾರ ನ್ಯಾ. ಫಝಲ್ ಅಲಿ ಅವರ ನೇತೃತ್ವದಲ್ಲಿ ಇನ್ನೊಂದು ಆಯೋಗವನ್ನು ನೇಮಿಸಿತು.

ಜವಾಹರ್‌ಲಾಲ ನೆಹರೂ ಅವರಿಗೆ ಕರ್ನಾಟಕ ಏಕೀಕರಣ ಮಾಡಬೇಕಾದ ಅನಿವಾರ್ಯತೆ ಅರ್ಥವಾಗಿತ್ತು. ರಾಜ್ಯ ವಿಂಗಡನಾ ಆಯೋಗವೆಂದು ಉಲ್ಲೇಖಿಸಲ್ಪಟ್ಟ ಈ ಸಮಿತಿಯಲ್ಕಿ ಎಚ್.ಎನ್. ಕುಂಜ್ರು ಹಾಗೂ ಕೆ.ಎಂ. ಫಣಿಕ್ಕರ್ ಸದಸ್ಯರಾಗಿದ್ದರು. ಈ ಮೂವರ ಸಮಿತಿ ಕರ್ನಾಟಕ ಏಕೀಕರಣದ ಎಲ್ಲಾ ಮಗ್ಗುಲುಗಳನ್ನು ಪರಿಶೀಲಿಸಿತು. ಕೊನೆಗೆ ಕನ್ನಡ ರಾಜ್ಯ ಏಕೀಕರಣಗೊಳ್ಳಲು ಪಕ್ವವಾಗಿದೆ ಎಂಬ ವರದಿಯನ್ನು 1955ರ ಸೆಪ್ಟಂಬರ್ 30 ರಂದು ಕೇಂದ್ರ ಸರಕಾರಕ್ಕೆ ಸಲ್ಲಿಸಿತು. ಏಕೀಕರಣಕ್ಕೆ ಲೋಕಸಭೆ, ರಾಜ್ಯಸಭೆಗಳೂ ಒಪ್ಪಿಗೆ ಕೊಟ್ಟ ನಂತರ ರಾಷ್ಟ್ರಪತಿಗಳ ಅಂಕಿತ ಬಿತ್ತು. ಶತಕಗಳಷ್ಟು ಚರಿತ್ರೆ ಇದ್ದರೂ ಎಂದೂ ಏಕಾಡಳಿತಕ್ಕೆ ಒಳಪಡದಿದ್ದ ಕನ್ನಡಿಗರು 1956ರ ನವೆಂಬರ್ 1ರಂದು ಒಂದು ರಾಜ್ಯದ ಆಡಳಿತಕ್ಕೆ ಒಂದಾದರು. ಕರ್ನಾಟಕ ರಾಜ್ಯ ರಚನೆಗೆ ಅಂತಿಮ ಅಂಕಿತ ಹಾಕಿದ್ದ ಆಗಿನ ರಾಷ್ಟ್ರಪತಿಗಳಾದ ಬಾಬು ರಾಜೇಂದ್ರಪ್ರಸಾದ್ ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜು ಆವರಣದಲ್ಲಿ ವಿಧ್ಯುಕ್ತವಾಗಿ ಮೈಸೂರು (ಕರ್ನಾಟಕ) ರಾಜ್ಯ ಉದಯವನ್ನು ಘೋಷಿಸಿದರು. ವಿಪರ್ಯಾಸವೆಂದರೆ ಬಹುತೇಕ ಕನ್ನಡ ಮಾತನಾಡುವ ಪ್ರದೇಶಗಳು ಆಂಧ್ರ, ತಮಿಳುನಾಡು, ಮಹಾರಾಷ್ಟ್ರ, ಕೇರಳಗಳಲ್ಲಿಯೇ ಉಳಿದು ಬಿಟ್ಟವು. ಕನ್ನಡಿಗರ ಹೊಸ ರಾಜ್ಯಕ್ಕೆ ಮೈಸೂರು ಎಂದು ಕರೆದಿದ್ದು ಅಸಮಾಧಾನಕ್ಕೆ ಕಾರಣವಾಯಿತು. ಇದು ನಡೆದ 17 ವರ್ಷಗಳ ತರುವಾಯ ಸಿ. ದೇವರಾಜ ಅರಸು ಮುಖ್ಯಮಂತ್ರಿಗಳಾಗಿದ್ದಾಗ ಏಕೀಕೃತ ರಾಜ್ಯಕ್ಕೆ ‘ಕರ್ನಾಟಕ’ವೆಂದು ಮರು ನಾಮಕರಣವಾಗಿ ತೃಪ್ತಿಗೆ ಹಾದಿ ಮಾಡಿಕೊಟ್ಟಿತು.

ಈ ಮೇಲೆ ಹೇಳಿರುವುದೆಲ್ಲಾ ಕಥೆಯಲ್ಲ, ಬದಲಾಗಿ ನಡೆದ ಇತಿಹಾಸದ ಒಂದೊಂದು ಅಕ್ಷರಗಳ ಮುತ್ತುಗಳು. ಅಷ್ಟೊಂದು ಮಹನೀಯರ ಪರಿಶ್ರಮದ ಫಲವಾಗಿಯೇ ಇಂದು ಅಖಂಡ ಕರ್ನಾಟಕದಲ್ಲಿ ನಾವೆಲ್ಲಾ ಅತ್ಯಂತ ಸಂತೋಷದಿಂದ ಜೀವಿಸುತ್ತಿದ್ದೇವೆ. ಆದರೆ ಇದಕ್ಕೆ ಹುಳಿ ಹಿಂಡುವ ಕೆಲಸವನ್ನು ಕೆಲ ನಾಯಕರುಗಳು ಅನವಶ್ಯಕವಾಗಿ ಮಾಡುತ್ತಿದ್ದಾರೆ. ವಾಸ್ತವದಲ್ಲಿ ಅಖಂಡ ಕರ್ನಾಟಕವನ್ನು ಇಬ್ಬಾಗ ಮಾಡಲು ಪ್ರಯತ್ನಿಸುತ್ತಿರುವ ಸಾಮಾನ್ಯ ಜನರಿಗೆ ಏನೂ ಸಿಗುವುದಿಲ್ಲ ಮತ್ತು ಅದರಿಂದ ಏನೂ ಲಾಭವಾಗುವುದಿಲ್ಲ. ಬದಲಾಗಿ ರಾಜಕಾರಣಿಗಳು ಲಾಭ ಪಡೆದುಕೊಳ್ಳುತ್ತಾರೆ. ಅಭಿವೃದ್ಧಿಯಾಗಲಿಲ್ಲ ಎಂಬ ಒಂದೇ ಕಾರಣ ಇಟ್ಟುಕೊಂಡು ರಾಜ್ಯವನ್ನು ವಿಭಜನೆ ಮಾಡಲು ಹೊರಟಿರುವ ಮುಗ್ಧಜನರಿಗೇನು ಗೊತ್ತು ಇದು ರಾಜಕೀಯದ ದೊಂಬರಾಟವೆಂದು.? ಹೈದರಾಬಾದ್ ಕರ್ನಾಟಕಕ್ಕೆ 371ಜೆ ಎಂಬ ಸಂವಿಧಾನಾತ್ಮಕ ವಿಶೇಷ ಸ್ಥಾನಮಾನವನ್ನು ನೀಡಿ ಆ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಅದಕ್ಕೆ ಪೂರಕವಾದ ಸವಲತ್ತುಗಳನ್ನು ನೀಡಲಾಗುತ್ತಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕಾಗಿರುವುದು ರಾಜಕಾರಣಿಗಳು ಮತ್ತು ಆಯಾ ಕ್ಷೇತ್ರದ ಎಂಎಲ್ಎ ಮತ್ತು ಎಂಪಿಗಳದ್ದಲ್ಲವೇ?. ಇನ್ನಾದರೂ ರಾಜಕಾರಣಿಗಳು, ಸಂಘಟನೆಗಳು ಮತ್ತು ಮಾಧ್ಯಮದವರು ಅನವಶ್ಯಕ ವಿಚಾರಗಳನ್ನು ಬಿಟ್ಟು ರಾಜ್ಯದ ಅಭಿವೃದ್ಧಿ ಬಗ್ಗೆ ಗಮನ ಹರಿಸಿ ಅಖಂಡ ಕರ್ನಾಟಕಕ್ಕೆ ದುಡಿಯಬೇಕಾಗಿದೆ.

Writer - ಮಹದೇವ್ ಬಿಳುಗಲಿ

contributor

Editor - ಮಹದೇವ್ ಬಿಳುಗಲಿ

contributor

Similar News