ರಾಜಸ್ಥಾನ: 6 ತಿಂಗಳಲ್ಲಿ 53 ಬಾರಿ ಇಂಟರ್‌ನೆಟ್ ಬ್ಲಾಕ್ !

Update: 2018-08-11 03:23 GMT

ಜೈಪುರ, ಆ. 11: ರಾಜಸ್ಥಾನ ಸರ್ಕಾರ ಕಳೆದ ಫೆಬ್ರವರಿಯಿಂದೀಚೆಗೆ ರಾಜ್ಯದಲ್ಲಿ 53 ಬಾರಿ ಇಂಟರ್‌ನೆಟ್ ಮತ್ತು ಡಾಟಾ ಸೇವೆಗಳನ್ನು ರದ್ದುಪಡಿಸಿದೆ.
ಈ ಸಂಬಂಧ ಸೆಲ್ಯುಲರ್ ಆಪರೇಟರ್ಸ್‌ ಅಸೋಸಿಯೇಶನ್ ಆಫ್ ಇಂಡಿಯಾ (ಸಿಒಎಐ), ದೂರಸಂಪರ್ಕ ಇಲಾಖೆಗೆ ಪತ್ರ ಬರೆದಿದೆ.

ರಾಜ್ಯ ಸರ್ಕಾರಗಳು ಅದರಲ್ಲೂ ಮುಖ್ಯವಾಗಿ ರಾಜಸ್ಥಾನ ಸರ್ಕಾರ, ಟೆಲಿಕಾಂ ಸೇವೆಗಳನ್ನು ತಾತ್ಕಾಲಿಕವಾಗಿ ಅಮಾನತು ಮಾಡುವ ಸಂಬಂಧದ ಕಾನೂನುಗಳನ್ನು ದುರ್ಬಲಪಡಿಸುವ ಪ್ರಸ್ತಾವವನ್ನು ತಡೆಯಬೇಕು ಎಂದು ಸಂಘ ಆಗ್ರಹಿಸಿದೆ.

ಆ. 8ರಂದು ಪತ್ರ ಬರೆದಿರುವ ಸಂಘದ ಪ್ರತಿನಿಧಿಗಳು, ಕಾನೂನಿನ ಅನ್ವಯ ಇಂಟರ್‌ನೆಟ್ ಸೇವೆಗಳನ್ನು ಅಮಾನತುಪಡಿಸುವ ಆದೇಶವನ್ನು ಗೃಹ ಕಾರ್ಯದರ್ಶಿ ಮಾತ್ರ ನೀಡಬಹುದು. ಅನಿವಾರ್ಯ ಸಂದರ್ಭಗಳಲ್ಲಿ ಜಂಟಿ ಕಾರ್ಯದರ್ಶಿಗಿಂತ ಕೆಳ ಹಂತದ ಅಧಿಕಾರಿಗಳಲ್ಲದವರು ಈ ಆದೇಶ ನೀಡಬಹುದಾಗಿದೆ ಎಂದು ಸ್ಪಷ್ಟಪಡಿಸಿವೆ.

ಆದರೆ ರಾಜಸ್ಥಾನ ಸರ್ಕಾರ ಕಾನೂನನ್ನು ಸಡಿಲಿಸಿ, ಇಂಟರ್‌ನೆಟ್ ಸೇವೆ ತಾತ್ಕಾಲಿಕ ತಡೆಯುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಿದೆ. ಇದರಿಂದಾಗಿ ಕಳೆದ ಫೆಬ್ರುವರಿಯಿಂದೀಚೆಗೆ 53 ಬಾರಿ ತಡೆಯಲಾಗಿದೆ ಎಂದು ಆಕ್ಷೇಪಿಸಿದೆ.

ರಾಜಸ್ಥಾನದಲ್ಲಿ ಪರೀಕ್ಷೆಗಳನ್ನು ನಡೆಸಲು ಕೂಡಾ ಇಂಟರ್‌ನೆಟ್ ಸೇವೆ ಅಮಾನತು ಮಾಡಲಾಗುತ್ತದೆ. ಆದರೆ ಇದು ಸಾರ್ವಜನಿಕ ತುರ್ತು ಅಥವಾ ಸುರಕ್ಷಾ ಸ್ಥಿತಿ ಅಲ್ಲ ಎಂದು ಸಿಒಎಐ ಪ್ರತಿಪಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News