ಬಹುಕೋಟಿ ವ್ಯಾಪಂ ಹಗರಣ: ಮಹತ್ವದ ದಾಖಲೆಗಳು ಮಾಯ !

Update: 2018-08-11 03:36 GMT

ಭೋಪಾಲ್, ಆ. 11: ಬಹುಕೋಟಿ ವ್ಯಾಪಂ ಹಗರಣಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳು ಗ್ವಾಲಿಯರ್‌ನ ಗಜರ ರಾಜಾ ವೈದ್ಯಕೀಯ ಕಾಲೇಜಿನಿಂದ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ನಾಪತ್ತೆಯಾದ ದಾಖಲೆಗಳು ಆರಂಭದಲ್ಲಿ ಝಾನ್ಸಿ ರಸ್ತೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಸಂಖ್ಯೆ 271/2014ಕ್ಕೆ ಸಂಬಂಧಿಸಿದ್ದಾಗಿದ್ದು, ಬಳಿಕ ಸಿಬಿಐ ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿತ್ತು. ವ್ಯಾಪಂ ಹಗರಣವನ್ನು ಬೆಳಕಿಗೆ ತಂದ ಆಶೀಶ್ ಚತುರ್ವೇದಿ ಈ ದೂರು ನೀಡಿದ್ದರು. ಇದೀಗ ಝಾನ್ಸಿರೋಡ್ ಪೊಲೀಸರು ಭಾರತೀಯ ದಂಡಸಂಹಿತೆಯ ಸೆಕ್ಷನ್ 201 (ಅಪರಾಧಿಯನ್ನು ರಕ್ಷಿಸಲು ದಾಖಲೆ ಅಡಗಿಸುವುದು) ಮತ್ತು 204 (ನ್ಯಾಯಾಲಯಕ್ಕೆ ಪುರಾವೆಯಾಗಿ ಬೇಕಾದ ದಾಖಲೆಗಳನ್ನು ನಾಶಪಡಿಸುವುದು) ಅನ್ವಯ ಪ್ರಕರಣ ದಾಖಲಿಸಿದ್ದಾರೆ.

ಮೊದಲು ಈ ಪ್ರಕರಣದಲ್ಲಿ ದಲ್ಲಾಳಿ ನಿಗೂಢವಾಗಿ ಸಾವನ್ನಪ್ಪಿದ್ದ. ಇದೀಗ ದಾಖಲೆಗಳು ನಷ್ಟವಾಗಿವೆ ಎಂದು ಚತುರ್ವೇದಿ ಹೇಳಿದ್ದಾರೆ. ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಎಲ್ಲ ಪುರಾವೆಗಳನ್ನು ನಾಶಪಡಿಸಲಾಗುತ್ತಿದೆ ಎಂದು ಅವರು ದೂರಿದ್ದಾರೆ.

ಈ ಎಫ್‌ಐಆರ್ ಅನ್ವಯ ಜೈಪ್ರಕಾಶ್ ಭಾಗಲ್ ಎಂಬ ವಿದ್ಯಾರ್ಥಿ 2010ನೇ ಬ್ಯಾಚ್‌ನಲ್ಲಿ ಗಜರ ರಾಜ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆದಿದ್ದ. 2011ರಲ್ಲಿ ಮತ್ತೆ ಪ್ರವೇಶ ಪರೀಕ್ಷೆ ಬರೆದು ಕೌನ್ಸಿಲಿಂಗ್‌ನಲ್ಲಿ ಕೂಡ ಭಾಗವಹಿಸಿದ್ದ. ಚಿರಾಯು ಮೆಡಿಕಲ್ ಕಾಲೇಜಿನಲ್ಲಿ ಈತನಿಗೆ ಸೀಟು ಲಭ್ಯವಾಗಿತ್ತು. ಆದರೆ ಕೌನ್ಸಿಲಿಂಗ್ ಮುಗಿದ ತಕ್ಷಣ ಈತ ತನ್ನ ಪ್ರವೇಶ ರದ್ದುಪಡಿಸಿದ್ದ. ಬಳಿಕ ಕಾಲೇಜು, ಈ ಸರ್ಕಾರಿ ಕೋಟಾ ಸೀಟನ್ನು ಬೇರೆ ವಿದ್ಯಾರ್ಥಿಗೆ ನೀಡಿ ದೊಡ್ಡ ಮೊತ್ತದ ಹಣ ಪಡೆದಿದೆ, ಭಾಗಲ್ ಕೂಡಾ ಹಣ ಪಡೆದಿದ್ದಾನೆ ಎಂದು ಆಪಾದಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News